ತುಮಕೂರು: ಗೊಲ್ಲರ ಹಟ್ಟಿಗಳಲ್ಲಿ ಇನ್ನೂ ಜೀವಂತವಿರುವ ಕೆಲವು ಹಿಂದಿನ ಆಚರಣೆಗಳು ಹಾಗೂ ಈಗಿನ ಸನ್ನಿವೇಶಕ್ಕೆ ಅವುಗಳ ಅಪ್ರಸ್ತುತತೆ ಬಗ್ಗೆ ಬೆಳಕು ಚೆಲ್ಲಲು ಗುಬ್ಬಿ ತಾಲ್ಲೂಕು ಸಮುದಾಯದ ಕೆಲವು ಮುಖಂಡರು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ತಾಲ್ಲೂಕಿನ ಶ್ರೀ ಯಾದವ ಸಂಸ್ಥಾನ ಮಠದ ಭಕ್ತ ವೃಂದವು ಈ ಅಭಿಯಾನ ಆರಂಭಿಸುತ್ತಿದ್ದು ಜನವರಿ 8 ರಿಂದ 14 ರ ವರೆಗೆ ಗುಬ್ಬಿ ತಾಲ್ಲೂಕಿನ ವಿವಿಧ ಗೊಲ್ಲರಹಟ್ಟಿಗಳಲ್ಲಿ ಈ ಕಾರ್ಯಕ್ರಮ ನಡೆಸಲು ಇತ್ತೀಚೆಗೆ ಸೇರಿದ ಸಭೆಯಲ್ಲಿ ತೀರ್ಮಾನಿಸಲಾಯಿತು. ಇದರ ಜೊತೆಗೆ ಚಿತ್ರದುರ್ಗದಲ್ಲಿರುವ ಶ್ರೀ ಮಠಕ್ಕೆ ಸಹಾಯ ಹಸ್ತ ಚಾಚುವ ಉದ್ದೇಶದಿಂದ ಶ್ರೀ ಕೃಷ್ಣಯಾದವಾನಂದ ಸ್ವಾಮಿಗಳನ್ನು ಬರಮಾಡಿಕೊಂಡು ಅವರಿಗೆ ದವಸ ಧಾನ್ಯ ನೀಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ.
ಶ್ರೀ ಮಠದಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಅವರಿಗೆ ಪ್ರೋತ್ಸಾಹ ನೀಡಬೇಕಿದೆ. ಅಲ್ಲಿ ಗೋ ಶಾಲೆ ತೆರೆದಿದ್ದು ಅವುಗಳ ಬಗ್ಗೆ ನಿಗಾ ವಹಿಸಬೇಕಾಗಿದೆ. ನಿತ್ಯ ಹಲವಾರು ಭಕ್ತರು ಮಠಕ್ಕೆ ಬರುತ್ತಿದ್ದು ಅವರಿಗೆಲ್ಲ ಪ್ರಸಾದ ವ್ಯವಸ್ಥೆ ಮಾಡಬೇಕಿದೆ. ಇದೇ ರೀತಿಯಲ್ಲಿ ಗುಬ್ಬಿ ತಾಲ್ಲೂಕಿನಲ್ಲಿಯೂ ಶ್ರೀ ಮಠದ ಶಾಖೆ ತೆರೆಯಲು ಉದ್ದೇಶಿಸಿದ್ದು ಬಡ ಮೈಲನ ಬಂಡೆ ಬಳಿ ಶಾಖೆ ಹಾಗೂ ಬಡ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆ ಪ್ರಾರಂಭಿಸುವ ಯೋಜನೆ ಇದೆ ಎಂದು ಸಭೆಯಲ್ಲಿ ಮುಖಂಡರು ತಿಳಿಸಿದರು.
ಭಾನುವಾರ ನಡೆದ ಸಭೆಯಲ್ಲಿ ಲಕ್ಷ್ಮಣಗೌಡ, ಕೆ.ಟಿ.ಕೆ ಪ್ರಭು, ಎನ್.ಟಿ. ಪ್ರಕಾಶ್, ಸಿದ್ದರಾಜು, ಗುರುಲಿಂಗಯ್ಯ, ಕದರಪ್ಪ, ಸಣ್ಣ ತಿಮ್ಮಯ್ಯ, ಮಹಾಲಿಂಗಯ್ಯ, ಮಲ್ಲಿಕಾರ್ಜುನ್, ಸಿದ್ದಗಂಗಯ್ಯ, ಲಿಂಗರಾಜು, ರಾಜಣ್ಣ, ಶಿವಗಂಗಯ್ಯ, ಇನ್ನೂ ಮುಂತಾದ ಮುಖಂಡರು ಭಾಗವಹಿಸಿದ್ದರು.
ಜನ ಜಾಗೃತಿ ಕಾರ್ಯಕ್ರಮವು ಜನವರಿ 8 ರಂದು ನಿಟ್ಟೂರು ಹೋಬಳಿ ಗುಡ್ಡದ ಓಬಳಾಪುರಹಟ್ಟಿಯಿಂದ ಆರಂಭವಾಗಿ ರಾಜನ ಪೆಂಟೆ, 9 ರಂದು ನಿಟ್ಟೂರು ಹೋಬಳಿ ಸಾಗರನಹಳ್ಳಿ ಮಾರ್ಗವಾಗಿ ಮಾರನಹಟ್ಟಿಯವರೆಗೆ, 10 ರಂದು ಹಗಲವಾಡಿ ಹೋಬಳಿ ಹರಳಕಟ್ಟೆಯಿಂದ ರಂಗನಹಳ್ಳಿ ಹಟ್ಟಿಯವರೆಗೆ, 11 ರಂದು ಚೇಳೂರು ಹೋಬಳಿ ಚೆನ್ನಿಹಟ್ಟಿಯಿಂದ ಮುಲ್ಲೇನಹಳ್ಳಿ ಹಟ್ಟಿಯವರೆಗೆ, 12 ರಂದು ಕಸಬಾ ಹೋಬಳಿ ಗುಡ್ಡದಹಳ್ಳಿ ಹಟ್ಟಿಯಿಂದ ಸುರಿಗೇನಹಳ್ಳಿಯವರೆಗೆ, 13 ರಂದು ಕಡಬ ಹೋಬಳಿ ಮಾರಶೆಟ್ಟಿಹಳ್ಳಿಯಿಂದ ಪುರದ ಗೊಲ್ಲರಹಟ್ಟಿಯವರೆಗೆ, 14 ರಂದು ಸಿ.ಎಸ್.ಪುರ ಹೋಬಳಿ ನರಸಿಂಹದೇವರ ಹಟ್ಟಿಯಿಂದ ಬಿಳಿಕಲ್ಲುಹಟ್ಟಿಯವರೆಗೆ ಈ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ವಿವರಗಳಿಗೆ 99861 46789 ಇವರನ್ನು ಸಂಪರ್ಕಿಸಲು ತಿಳಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


