ತುಮಕೂರು: ಆಕಸ್ಮಿಕವಾಗಿ ಮೃತಪಟ್ಟ ಜಾನುವಾರು ಮಾಲಿಕರಿಗೆ ಪರಿಹಾರ ನೀಡುವ ಕಾರ್ಯ ವಿಳಂಬವಾಗುತ್ತಿದ್ದು, ರಾಜ್ಯ ಸರ್ಕಾರ ಅನುಗ್ರಹ ಯೋಜನೆಯಡಿ 72.64 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ ಎಂದು ವರದಿ ತಿಳಿಸಿದೆ.
ತುಮಕೂರು ಜಿಲ್ಲೆಯಲ್ಲಿ 2022ರ ಫೆಬ್ರುವರಿಯಿಂದ 2025ರ ಜುಲೈ 25ರ ವರೆಗೆ ಒಟ್ಟು 3,175 ರಾಸುಗಳು ಮೃತಪಟ್ಟಿದ್ದು, ಇದರಲ್ಲಿ 1,388 ಜಾನುವಾರು ಮಾಲೀಕರಿಗೆ ಪರಿಹಾರದ ಹಣ ತಲುಪಿಲ್ಲ. 1,787 ಜಾನುವಾರುಗಳಿಗೆ 31.76 ಕೋಟಿ ಪರಿಹಾರ ನೀಡಲಾಗಿದೆ. 2025ರ ಮೊದಲ ಆರು ತಿಂಗಳಲ್ಲಿ 1,259 ರಾಸುಗಳು ಆಕಸ್ಮಿಕವಾಗಿ ಜೀವ ಬಿಟ್ಟಿವೆ. ಕಳೆದ ನವೆಂಬರ್‌ನಿಂದ ಈವರೆಗೆ ಸರ್ಕಾರದಿಂದ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಹೆಚ್ಚುಕಡಿಮೆ ಒಂದು ವರ್ಷದಿಂದ ಹಣ ಬಂದಿಲ್ಲ ಎಂದು ತಿಳಿದು ಬಂದಿದೆ.
ಗಂಭೀರ ಕಾಯಿಲೆ, ವಿಪತ್ತು, ಅವಘಡ, ಹಾವು ಕಡಿತ ಸೇರಿ ಇತರೆ ಕಾಯಿಲೆಗೆ ತುತ್ತಾದ ಜಾನುವಾರುಗಳಿಗೆ ಪರಿಹಾರ ನೀಡಿ, ರೈತರಿಗೆ ನೆರವಾಗುವ ಉದ್ದೇಶದಿಂದ ಅನುಗ್ರಹ ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು. ಈ ಹಿಂದೆ ಮೃತಪಟ್ಟ, ಎಮ್ಮೆ, ಹೋರಿ, ಹಸು, ಎತ್ತುಗಳಿಗೆ ತಲಾ 710 ಸಾವಿರ ಪರಿಹಾರ ನೀಡಲಾಗುತ್ತಿತ್ತು. ಈ ವರ್ಷದ ಏಪ್ರಿಲ್ ತಿಂಗಳಿನಿಂದ 715 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪರಿಹಾರ ಹೆಚ್ಚಿಸಿದ ನಂತರ ಪಶು ಪಾಲಕರ ಖಾತೆಗೆ ಹಣ ಜಮೆ ಆಗಿಲ್ಲ.
ಜಿಲ್ಲೆಯಲ್ಲಿ ಹೈನುಗಾರಿಕೆ ಅವಲಂಬಿಸಿದವರ ಸಂಖ್ಯೆ ಹೆಚ್ಚಿದೆ. ರೈತರು ವ್ಯವಸಾಯದ ಜತೆಗೆ ಪರ್ಯಾಯ ಮಾರ್ಗವಾಗಿ ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ದಿನ ಡೇರಿಗೆ ಹಾಲು ಹಾಕುವ ಮೂಲಕ ಬದುಕು ಕಟ್ಟಿಕೊಂಡಿರುವ ತುಂಬಾ ಕುಟುಂಬಗಳಿವೆ. ಮಳೆಗಾಲದಲ್ಲಿ ಸಿಡಿಲು, ಕಾಯಿಲೆಗೆ ಜಾನುವಾರು ತುತ್ತಾದರೆ ಇಡೀ ಕುಟುಂಬ ಸಂಕಷ್ಟ ಎದುರಿಸಬೇಕಾಗುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



