ತುಮಕೂರು: ನಗರದ ಹೊರವಲಯದ ಅಂತರಸನಹಳ್ಳಿ ಕೆಳ ಸೇತುವೆ (Underpass) ಬಳಿ ಕಳೆದ ಒಂದು ವಾರದಿಂದ ಕಲುಷಿತ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಅಂತರಸನಹಳ್ಳಿ ಸೇತುವೆ ಬಳಿಯ ರಸ್ತೆ ಗುಂಡಿಗಳಲ್ಲಿ ಕೊಳಚೆ ನೀರು ನಿಂತು ಕೆಸರುಮಯವಾಗಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ನೂರಾರು ವಾಹನಗಳು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವಂತಾಗಿದೆ. ಈ ಭಾಗದಲ್ಲಿ ತರಕಾರಿ, ಹಣ್ಣು ಮತ್ತು ಹೂವಿನ ಮಾರುಕಟ್ಟೆ ಇರುವುದರಿಂದ ಬೆಳಗಿನ ಜಾವದಿಂದಲೇ ರೈತರು ಮತ್ತು ವ್ಯಾಪಾರಿಗಳ ಓಡಾಟ ಹೆಚ್ಚಿರುತ್ತದೆ. ರಸ್ತೆಯ ಅವ್ಯವಸ್ಥೆಯಿಂದಾಗಿ ರೈತರು ಅಧಿಕಾರಿಗಳಿಗೆ ಶಾಪ ಹಾಕುತ್ತಾ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರಟಗೆರೆ, ಮಧುಗಿರಿ ಕಡೆಗೆ ಸಂಚರಿಸುವ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಗಳು ಹಾಗೂ ಶಾಲಾ-ಕಾಲೇಜು ವಾಹನಗಳು ಇಲ್ಲಿನ ಟ್ರಾಫಿಕ್ ಜಾಮ್‌ನಿಂದಾಗಿ ಹೈರಾಣಾಗುತ್ತಿವೆ.
ರಾಜಕಾಲುವೆ ಅತಿಕ್ರಮಣಗೊಂಡಿರುವುದು ಹಾಗೂ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ಈ ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ. ಬೇಸಿಗೆ ಕಾಲದಲ್ಲೂ ರಸ್ತೆಯಲ್ಲಿ ನೀರು ನಿಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿರುವುದರಿಂದ ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಸ್ಥಳೀಯ ನಿವಾಸಿಗಳು ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


