ತುಮಕೂರು: ಹಣದ ವಿಚಾರಕ್ಕಾಗಿ ಸ್ವಂತ ತಂದೆಯನ್ನೇ ಭೀಕರವಾಗಿ ಕೊಲೆ ಮಾಡಿದ್ದ ಮಗನಿಗೆ ಇಲ್ಲಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಗುಬ್ಬಿ ತಾಲ್ಲೂಕಿನ ಕಡಬ ಗ್ರಾಮದ ರಮೇಶ್ ಎಂಬಾತನೇ ಶಿಕ್ಷೆಗೆ ಗುರಿಯಾದ ಅಪರಾಧಿ. ಈತ 2023ರ ಅಕ್ಟೋಬರ್ 22ರಂದು ತನ್ನ ತಂದೆ ರೇಣುಕಯ್ಯ ಅವರನ್ನು ಹತ್ಯೆ ಮಾಡಿದ್ದನು.
ತೋಟದ ಅಡಿಕೆ ಎಲೆಗಳ ಮಾರಾಟದಿಂದ ಬಂದಿದ್ದ ಹಣವನ್ನು ನೀಡುವಂತೆ ತಂದೆ ರೇಣುಕಯ್ಯ ಅವರು ಮಗ ರಮೇಶ್ನನ್ನು ಕೇಳಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿದಾಗ ರಮೇಶ್ ಕುಡುಗೋಲಿನಿಂದ ತಂದೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದನು.
ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್ಪೆಕ್ಟರ್ ವಿ. ಗೋಪಿನಾಥ್ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ತುಮಕೂರು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು, ರಮೇಶ್ ಮೇಲಿನ ಆರೋಪ ಸಾಬೀತಾಗಿದೆ ಎಂದು ಪರಿಗಣಿಸಿ ಆತನಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ಸರ್ಕಾರದ ಪರವಾಗಿ ವಕೀಲೆ ಬಿ.ಎಸ್. ಜ್ಯೋತಿ ಅವರು ವಾದ ಮಂಡಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


