ತುಮಕೂರು: ನಗರದ ಮರಳೂರಿನಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್ ಗೆ ಮಂಜೂರಾಗಿರುವ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡದಂತೆ ಒಂದನೇ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಯಾವುದೇ ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳಬಾರದು ಎಂದು ಸೂಚಿಸಿದ್ದು, ಸಂಬಂಧಿಸಿದವರಿಗೆ ನೋಟಿಸ್ ಜಾರಿಗೆ ಆದೇಶಿಸಿದೆ. ಈ ಆದೇಶದಿಂದಾಗಿ ಸದ್ಯಕ್ಕೆ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಹಿನ್ನಡೆಯಾಗಿದೆ.
ಮರಳೂರಿನ ಸರ್ವೆ ನಂ 87/2ರಲ್ಲಿ 2 ಎಕರೆ ಜಾಗವನ್ನು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಮಂಜೂರು ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ನಗರಾಭಿವೃದ್ಧಿ ಇಲಾಖೆ ಆದೇಶದಂತೆ ಮಹಾನಗರ ಪಾಲಿಕೆಯು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಭೂಮಿಯನ್ನು ನೋಂದಣಿ ಮಾಡಿಕೊಟ್ಟಿತ್ತು.
ಈ ಜಮೀನು ತಮಗೆ ಸೇರಿದ್ದು ಎಂದು ವಾದಿಸಿ ಗಂಗಮ್ಮ ಎಂಬುವರು ಕೋರ್ಟ್ ಮೊರೆ ಹೋಗಿದ್ದರು. ವಿವಾದ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿ ಇರುವಾಗಲೇ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಭೂಮಿ ಮಂಜೂರು ಮಾಡಲಾಗಿತ್ತು. ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಮಂಜೂರಾತಿ ಅದೇಶದಲ್ಲಿ ಷರತ್ತು ವಿಧಿಸಲಾಗಿತ್ತು.
ಕಾಂಗ್ರೆಸ್ ಭವನಕ್ಕೆ ಜಮೀನು ಮಂಜೂರು ಮಾಡಿರುವುದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಸಚಿವ ಸಂಪುಟ ಸಭೆಯಲ್ಲಿ ಮಂಜೂರು ಮಾಡಿರುವ ಜಮೀನನ್ನು ನೋಂದಣಿ ಮಾಡಲು ಬರುವುದಿಲ್ಲ. ಕರ್ನಾಟಕ ನೋಂದಣಿ ಕಾಯ್ದೆ 1908 ಸೆಕ್ಷನ್ 17ರ ಪ್ರಕಾರ ಈ ನೋಂದಣಿ ಪತ್ರ ಮಾನ್ಯವಾಗುವುದಿಲ್ಲ ಎಂದು ವಾದಿಸಿತ್ತು.
ಮರಳೂರು ಗ್ರಾಮದ ಸರ್ವೆ ನಂ 87/1, 87/2ನಲ್ಲಿ ಒಟ್ಟು 4 ಎಕರೆ ಜಮೀನನ್ನು ಕಸ ಸಂಗ್ರಹ ಉದ್ದೇಶಕ್ಕೆ 1943ರಲ್ಲಿ ನಗರಸಭೆಗೆ ಭೂ ಸ್ವಾಧೀನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ 2 ಎಕರೆ ಮಂಜೂರು ಮಾಡಲಾಗಿದೆ. ಜಮೀನಿಗೆ ಇ–ಖಾತೆ ಮಾಡಿಕೊಡಲು ಯಾವುದೇ ನಿಯಮ ಪಾಲಿಸಿಲ್ಲ. ಮಾರ್ಗಸೂಚಿ ದರಕ್ಕಿಂತ ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


