ತುಮಕೂರು: ಇಂದಿನ ವೇಗದ ಬದುಕಿನಲ್ಲಿ ಮರೆಯಾಗುತ್ತಿರುವ ಪೌಷ್ಟಿಕ ಆಹಾರಗಳನ್ನು ಮರಳಿ ನೆನಪಿಸಲು ತುಮಕೂರಿನ ಗಾಜಿನ ಮನೆಯಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ ಮತ್ತು ಪಾಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜನವರಿ 7 ಮತ್ತು 8ರಂದು ನಡೆಯುತ್ತಿರುವ ಈ ಮೇಳವನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಲಕ್ಷ್ಮಣ್ ಎಸ್.ಕೆ. ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಔಷಧವೇ ಆಹಾರವಾಗುವ ಮುನ್ನ, ಪೌಷ್ಟಿಕ ಆಹಾರವನ್ನೇ ಔಷಧಿಯಂತೆ ಸೇವಿಸಬೇಕು. ಸಮತೋಲಿತ ಆಹಾರ ಸೇವನೆಯಿಂದ ಮಾತ್ರ ಆರೋಗ್ಯವಂತ ಜೀವನ ಸಾಧ್ಯ,” ಎಂದು ತಿಳಿಸಿದರು. ಸಿರಿಧಾನ್ಯಗಳು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ರೋಗಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಅವರು ಒತ್ತಿ ಹೇಳಿದರು.
ಜಿಲ್ಲೆಯ 10 ತಾಲೂಕುಗಳಿಂದ ಆಗಮಿಸಿದ 106ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡು 40ಕ್ಕೂ ಹೆಚ್ಚು ಬಗೆಯ ಸಿರಿಧಾನ್ಯ ಖಾದ್ಯಗಳನ್ನು ಸಿದ್ಧಪಡಿಸಿದ್ದರು. ಮಿಲ್ಲೆಟ್ ಪಾಯಸ, ರೊಟ್ಟಿ ಹಾಗೂ ವಿವಿಧ ನವಣೆ ಖಾದ್ಯಗಳು ಜನರ ಗಮನ ಸೆಳೆದವು.
ಪತ್ರಕರ್ತ ಎಸ್. ನಾಗಣ್ಣ ಮಾತನಾಡಿ, ಬಾಯಿರುಚಿಗೆ ಮಾರುಹೋಗಿ ಪೌಷ್ಟಿಕಾಂಶಯುಕ್ತ ಸಿರಿಧಾನ್ಯಗಳನ್ನು ಜನರು ಕಡೆಗಣಿಸುತ್ತಿರುವುದು ಆತಂಕಕಾರಿ ಎಂದರು.
ಈ ಜಿಲ್ಲಾಮಟ್ಟದ ಯಶಸ್ವಿ ಪ್ರದರ್ಶನದ ನಂತರ, ಜನವರಿ 16 ರಿಂದ 18 ರವರೆಗೆ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ವಾಣಿಜ್ಯ ಮೇಳ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


