- ಸುರೇಶ್ ಬಾಬು ಎಂ., ತುರುವೇಕೆರೆ
ತುರುವೇಕೆರೆ: ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಈ ಬಾರಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಗೆಲ್ಲುವುದು ಅಷ್ಟೇ ಸತ್ಯ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ತುರುವೇಕೆರೆ ಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಕಾರ್ಯಕರ್ತರ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಈ ಕ್ಷೇತ್ರದ ಜನರ ಉತ್ಸಾಹ ಹುರುಪನ್ನು ನೋಡಿದರೆ, ತುರುವೇಕೆರೆ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ವಿಜಯಶಾಲಿಯಾಗಿ ಮಾಡಿ ಗತವೈಭವವನ್ನು ನೆನಪು ಮಾಡುತ್ತೀರಿ. ಜೊತೆಗೆ ತುರುವೇಕೆರೆ ತಾಲೂಕಿನಲ್ಲಿ ಯಾವುದೇ ಮನಸ್ತಾಪಗಳಿಲ್ಲದೆ ಎಲ್ಲಾ ಮುಖಂಡರುಗಳು ಒಟ್ಟಾಗಿ ಸೇರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಿದ್ದರಾಗಿದ್ದೀರಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಈ ಬಾರಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಗೆಲ್ಲುವುದು ಅಷ್ಟೇ ಸತ್ಯ. ಈ 40% ಕಮಿಷನ್ ಕೇಳುವ ಸರ್ಕಾರವನ್ನು ಕಿತ್ತೊಗೆದು ರೈತರಿಗೆ ಆಗುತ್ತಿರುವ ಅನ್ಯಾಯ ಹಾಗೂ ಭ್ರಷ್ಟಾಚಾರದಿಂದ ಮುಕ್ತಿಗೊಳಿಸಿ ಜನರ ಹಿತದೃಷ್ಟಿಯಿಂದ ನೀವು ನಮ್ಮ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಿದ್ಧರಿದ್ದೀರಿ ಎಂಬುದು ನಮಗೆ ಎದ್ದು ಕಾಣುತ್ತಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತುಮಕೂರು ಜಿಲ್ಲೆಗೆ ಹಾಗೂ ನಮ್ಮ ರಾಜ್ಯಕ್ಕೆ ಇಷ್ಟೊಂದು ಜನಸ್ತೋಮ ಸೇರಿ ಒಳ್ಳೆಯ ಸಂದೇಶವನ್ನು ಕಳಿಸಿದ್ದೀರಿ. ಅದಕ್ಕಾಗಿ ನಿಮಗೆ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಈ ಭ್ರಷ್ಟ ಬಿಜೆಪಿ ಸರ್ಕಾರ ಗ್ಯಾಸ್ ನ ಬೆಲೆ , ಪೆಟ್ರೋಲ್ ನ ಬೆಲೆ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಜಾಸ್ತಿ ಮಾಡುತ್ತಿದೆ. ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಬದಲು ಕತ್ತರಿ ಹಾಕುತ್ತಿದೆ. ಕುಡಿಯುವ ನೀರಿಗೆ ಮೀಟರ್ ಅಳವಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿ ಕಾಂಗ್ರೆಸ್ ಪಕ್ಷವನ್ನು ನೀವು ಅಧಿಕಾರಕ್ಕೆ ತಂದಿದ್ದೆ, ಆದರೆ ಯಾವುದೇ ತರಹದ ಉರುಳಿಲ್ಲದೆ ಆಡಳಿತವನ್ನು ಮಾಡುತ್ತೇವೆ. ದಯಮಾಡಿ ಈ ಬಾರಿ ತಾಲೂಕಿನಿಂದ ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸಿ ವಿಧಾನಸೌಧಕ್ಕೆ ನಿಮ್ಮ ಶಾಸಕನನ್ನು ಕಳಿಸಿಕೊಡಿ ಎಂದು ಮನವಿ ಮಾಡಿದರು.
ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರಾದ ಮಧು ಬಂಗಾರಪ್ಪ ಮಾತನಾಡಿ, ಈ ಜನ ಸಮೂಹ ನೋಡಿದರೆ ತುಮಕೂರು ಜಿಲ್ಲೆಯಿಂದ ಒಬ್ಬರನ್ನಂತು ನೀವು ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸುತ್ತೀರಿ ಎನ್ನುವುದು ಖಚಿತವಾಗಿದೆ ಎಂದರು.
ಉಚಿತವಾಗಿ ತಮಗೆ ವಿದ್ಯುತ್ ಸಂಪರ್ಕವನ್ನು ನೀಡಿದ್ದು, ವಾಸಕ್ಕೆ ಮನೆಗಳನ್ನು ಉಚಿತವಾಗಿ ನೀಡಿದ್ದು, ಆಗಿನ ಮುಖ್ಯಮಂತ್ರಿಗಳಾದ ದಿವಂಗತ ಎಸ್.ಬಂಗಾರಪ್ಪನವರು ಎಂಬುದು ನೆನಪಿನಲ್ಲಿರಲಿ. ಈ ಬಿಜೆಪಿ ಪಕ್ಷ ಧರ್ಮಗಳಲ್ಲಿ ಕಲಹ ತಂದು ಬಿಜೆಪಿ ಸರ್ಕಾರ ಮುಂದಿನ ಚುನಾವಣೆ ನಡೆಸಲು ತಯಾರಾಗಿದೆ. ಹಾಗಾಗಿ ಈ ರಾಜ್ಯದ ಭವಿಷ್ಯಕ್ಕೆ ನೀವುಗಳು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಈ ಬಾರಿ ಸಹಕಾರ ಮಾಡಿ ಎಂದು ನುಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ.ಎನ್.ರಾಜಣ್ಣ, ಈಗಿನ ಸರ್ಕಾರ ಡಬಲ್ ಎಂಜಿನ್ ಸರ್ಕಾರ. ಒಂದು ಹಿಮ್ಮುಖವಾಗಿ, ಇನ್ನೊಂದು ಮುಮ್ಮುಖವಾಗಿ ಹಾದುಹೋಗುತ್ತಿದೆ. ಸರ್ಕಾರದ ಬೊಕ್ಕಸ ಖಾಲಿಯಾಗಿ ರೈತರು ಸಾಲದ ಸುಳಿಯಲ್ಲಿ ಸಿಕ್ಕಿದ್ದು, ಜೊತೆಗೆ 40% ಕಮಿಷನ್ ಕೊಡಲಾಗದೆ, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ರೈತರಿಗೆ ಅವರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಸುಳ್ಳು ಹೇಳಿ ಈ ಸರ್ಕಾರ ನಡೆಸುತ್ತಾ ಬಂದಿದೆ. ಹಾಗಾಗಿ ಬರುವ 2023ರ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮತ್ತೊಮ್ಮೆ ರೈತರ ಸಾಲವನ್ನು ಮನ್ನಾ ಮಾಡುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಬೆಮೆಲ್ ಕಾಂತರಾಜು ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಕಾಂಗ್ರೆಸ್ ನ ರಾಜ್ಯಮಟ್ಟದ ಘಟಾನುಘಟಿ ನಾಯಕರುಗಳಾದ ಮಾಜಿ ಸಚಿವ ಟಿಬಿ ಜಯಚಂದ್ರ, ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ, ಬೈರತಿ ಸುರೇಶ್, ಮುರಳಿಧರ್ ಹಾಲಪ್ಪ , ಬಿ.ಎಸ್. ವಸಂತಕುಮಾರ್, ಸುಬ್ರಹ್ಮಣ್ಯ ಶ್ರೀಕಂಠೇಗೌಡ , ಗೀತಾ , ತಿಪಟೂರಿನ ಮಾಜಿ ಶಾಸಕ ಷಡಕ್ಷರಿ, ಕೆ.ಎನ್.ರಾಜಣ್ಣ, ಎನ್.ಆರ್.ಜಯರಾಮ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.
ಈ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೆರವಣಿಗೆ ಮೂಲಕ ಕರೆತಂದು ಈ ಎರಡು ಜೋಡೆತ್ತುಗಳಿಗೆ ಮಾರ್ಗ ಮಧ್ಯೆ ಬೃಹತ್ ಕೊಬ್ಬರಿ ಹಾರ, ಹೂವಿನ ಹಾರಗಳನ್ನು ಹಾಕಿ, ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz