ತುರುವೇಕೆರೆ: ಮುಂಬರುವ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ನಾನೇ ಅಭ್ಯರ್ಥಿ ಇದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದು ತುರುವೇಕೆರೆ ಮಾಜಿ ಶಾಸಕ ಮಸಾಲ ಜಯರಾಮ್ ಹೇಳಿದ್ದಾರೆ.
ತುರುವೇಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಮುಂಬರುವ ವಿಧಾನ ಸಭಾ ಕ್ಷೇತ್ರ ಚುನಾವಣೆ ಟಿಕೆಟ್ ಗಾಗಿ ಈಗಲೇ ಸ್ಪರ್ಧೆ ಆರಂಭಗೊಂಡಿದೆ. ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೊಡ್ಡಘಟ್ಟ ಚಂದ್ರೇಶ್ ನಡುವೆ ಬಿಜೆಪಿ –ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸ್ಪರ್ಧೆ ಸೃಷ್ಟಿಯಾದ ಬೆನ್ನಲ್ಲೇ ತುರುವೇಕೆರೆ ಮಾಜಿ ಶಾಸಕ ಮಸಾಲ ಜಯರಾಮ್ ಕೂಡ ಅಖಾಡಕ್ಕಿಳಿದಿದ್ದು, ತುರುವೇಕೆರೆ ತಾಲೂಕಿನ ಮಾಯಸಂದ್ರ ರಸ್ತೆಯಲ್ಲಿರುವ ಚಿಕ್ಕೋನಹಳ್ಳಿ ಗೇಟ್ ಬಳಿಯಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಎಲ್ಲರಿಗೂ ತಿಳಿದಿರುವ ವಿಚಾರ, ಆದರೆ ಕೆಲವರು ತಾಲೂಕಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ಸ್ವಯಂ ಘೋಷಿತ ಹೇಳಿಕೆಯನ್ನು ನೀಡುತ್ತಿದ್ದಾರೆ, ನಾನು ಕೂಡ ಈಗಾಗಲೇ ಈ ಹಿಂದೆ ನಡೆದ ಚುನಾವಣೆಯಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದೇನೆ, ತಾಲೂಕಿನಲ್ಲಿ ನಾನು ಸಹ ರಾಜಕಾರಣ ಮಾಡಲು ಇರುವುದು, ಭಾರತೀಯ ಜನತಾ ಪಾರ್ಟಿಯಲ್ಲಿ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೇನೆ ಜೊತೆಗೆ ಒಂದು ಬಾರಿ ಶಾಸಕನಾಗಿಯೂ ಸಹ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಈ ಬಾರಿ ಕೆಲವು ಅಡಚಣೆಯಿಂದಾಗಿ ಕಡಿಮೆ ಅಂತರದಲ್ಲಿ ಸೋತಿರಬಹುದು ಆದರೆ ನಾನು ನನ್ನ ಪಕ್ಷದಲ್ಲಿ ನಿಷ್ಠೆಯಿಂದ ಈಗಲೂ ಸಹ ಪಕ್ಷ ಸಂಘಟನೆ ಮಾಡುತ್ತಿದ್ದು ಮೊದಲಿಗಿಂತಲೂ ನನ್ನ ಕಾರ್ಯಕರ್ತರು ಈ ಬಾರಿ ಹೆಚ್ಚಾಗಿದ್ದು ಕಾರ್ಯಕರ್ತರು ಸಹ ಪಕ್ಷ ಸಂಘಟನೆಯಲ್ಲಿ ನಿಷ್ಠೆಯಿಂದ ತೊಡಗಿದ್ದಾರೆ ಜೊತೆಗೆ ಈಗಾಗಲೇ ಕೇಂದ್ರದ ಹಿರಿಯ ನಾಯಕರು ಹೆಚ್ಚಿನ ಪಕ್ಷ ಸಂಘಟನೆಯನ್ನು ಮಾಡಲು ಸೂಚಿಸಿದ್ದು ಮುಂದೆಯೂ ಸಹ ಸಂಘಟನೆಯಲ್ಲಿ ತೊಡಗಲಿದ್ದೇನೆ ಎಂದರು.
ಯಾವುದೇ ಕಾರಣಕ್ಕೂ ಹಿಂಜರಿಯುವ ಮಾತೇ ಇಲ್ಲ ಮುಂಬರುವ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ನಾನೇ ಅಭ್ಯರ್ಥಿ, ಇದನ್ನು ಯಾರು ತಡೆಯಲು ಸಾಧ್ಯವಿಲ್ಲ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ನಾನು ಕೂಡ ಬಿಜೆಪಿಯಿಂದ ಅಭ್ಯರ್ಥಿಯಾಗುವುದು ಅಷ್ಟೇ ಸತ್ಯ. ಈಗಾಗಲೇ ನನ್ನ ಪಕ್ಷದ ಹಿರಿಯ ನಾಯಕರು ಸಹ ನನಗೆ ಟಿಕೆಟ್ ಭರವಸೆ ನೀಡಿದ್ದು ಎನ್ ಡಿ ಎ ಮೈತ್ರಿಯಿಂದ ಮುಂದಿನ ಅಭ್ಯರ್ಥಿ ನಾನೇ ಎಂದು ಸ್ಪಷ್ಟನೆ ನೀಡಿದರು.
ತಾಲೂಕಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಮತ್ತು ಕಾರ್ಯಕರ್ತರು ಸಹ ಮುಂದಿನ ಅಭ್ಯರ್ಥಿ ನೀವೇ ಹಾಗೆ ನಿಮ್ಮ ಪರವಾಗಿ ನಾವುಗಳು ಸದಾ ಜೊತೆ ಇರುತ್ತೇವೆ ಎಂದು ಹೆಚ್ಚಿನ ಭರವಸೆ ನೀಡಿದ್ದು, ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ, ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಹಾಲಿ ಶಾಸಕರಾದ ಎಂ.ಟಿ.ಕೃಷ್ಣಪ್ಪ ಮುಂದಿನ ಅಭ್ಯರ್ಥಿ ನಾನೇ ಎಂದು ಹೇಳಿಕೆ ನೀಡಿರುವುದು ಕೆಲವು ಮಾಧ್ಯಮದ ಮೂಲಕ ತಿಳಿದಿದ್ದೇನೆ, ಬಹುಶಃ ಜೆಡಿಎಸ್ ಬಿಜೆಪಿ ಮೈತ್ರಿ ಇರುವುದರಿಂದ ಮುಂಬರುವ ಚುನಾವಣೆಯಲ್ಲಿ ಹಾಲಿ ಶಾಸಕರು ನನ್ನನ್ನೇ ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸಬಹುದೇನೋ, ಕಾರ್ಯಕರ್ತರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗದೆ ನೀವುಗಳು ನಿಷ್ಠೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿ ಟಿಕೆಟ್ ತರುವುದು ನನಗೆ ಬಿಡಿ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ಬಿಜೆಪಿ ಅಧ್ಯಕ್ಷ ಪ್ರಕಾಶ್ ಯಾದವ್, ಪ್ರಧಾನ ಕಾರ್ಯದರ್ಶಿ ಮಹೇಶ್, ಜಿಪಂ ಮಾಜಿ ಸದಸ್ಯ ಉಗ್ರಯ್ಯ, ಮುಖಂಡರಾದ ಕಡೆಹಳ್ಳಿ ಸಿದ್ದಯ್ಯ, ಅಂಜನ್ ಕುಮಾರ್, ಸೋಮೇನಹಳ್ಳಿ ಜಗದೀಶ್, ಚಿದಾನಂದ್, ಭುಗುಡನಹಳ್ಳಿ ಕೃಷ್ಣಮೂರ್ತಿ, ಮಂಜಣ್ಣ, ಇನ್ನು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


