ಬೆಂಗಳೂರು: ವಿಧಾನಸಭೆಯಲ್ಲಿ ಹೇಳಿದ ವೀಡಿಯೋವನ್ನು ತಪ್ಪು ಅರ್ಥ ಬರುವಂತೆ ಬೇಕಾದಷ್ಟು ಕಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕರಾದ ಸಿ.ಟಿ.ರವಿ ಹಾಗೂ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಕುರಿತ ಪೂರ್ತಿ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಅವರು, ಸಿಟಿ ರವಿ ಮತ್ತು ಅವರ ಪಕ್ಷ ಇಂಥಾ ಅಗ್ಗದ ಚೇಷ್ಠೆಗಳನ್ನು ಮಾಡಿದ್ದರ ಫಲವೇ ಇಂದು ಜನ ಅವರನ್ನು ಮನೆಯಲ್ಲಿ ಮತ್ತು ಪಕ್ಷವನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ.ಆದರೂ ನಿಮಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಲಿ ಶಾಸಕರಾಗಿರುವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಸದನದಲ್ಲಿ ಕೂತು ಅಭಿವೃದ್ಧಿ ಕಾರ್ಯಗಳ ಬಗೆಗಿನ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿತ್ತು, ಆದರೆ ಅವರ ಗಮನವೆಲ್ಲ ವಿರೋಧ ಪಕ್ಷದ ನಾಯಕನ ಕುರ್ಚಿಯ ಮೇಲೆ ಇದೆಯೆಂದು ಕಾಣುತ್ತೆ ಎಂದಿರುವ ಮುಖ್ಯಮಂತ್ರಿ, ನಿಮ್ಮ ಮಾನ ಮರ್ಯಾದೆ ಬಗ್ಗೆ ನಿಮಗೆ ಕನಿಷ್ಠ ಕಾಳಜಿ ಇದ್ದರೆ ಶೇರ್ ಮಾಡಿರುವ ವೀಡಿಯೋ ಡಿಲೀಟ್ ಮಾಡಿ ಸಾರ್ವಜನಿಕವಾಗಿ ಕ್ಷಮೆ ಕೇಳಿ ಎಂದು ಆಗ್ರಹಿಸಿದ್ದಾರೆ.


