ಸರಗೂರು: ತಾಲೂಕಿನ ಅಡ್ಡಹಳ್ಳಿ ಗ್ರಾಮದಲ್ಲಿನ ನಾಮಧಾರಿಗೌಡರ ಬೀದಿ ಸಿಸಿ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಎರಡು ಇಲಾಖೆ ಮುಂದಾದಾಗ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನಲೆ ಅಧಿಕಾರಿಗಳು, ಪೊಲೀಸರ ಮಧ್ಯಸ್ಥಿಕೆಯಿಂದ ಕಾಂಕ್ರೀಟ್ ಕಾಮಗಾರಿ ನಡೆಯಿತು.
ಶಾಸಕ ಅನಿಲ್ ಚಿಕ್ಕಮಾದು ಅವರು ಅಡ್ಡಹಳ್ಳಿ ಗ್ರಾಮಕ್ಕೆ 40 ಲಕ್ಷ ರೂ.ಅನುದಾನ ಮಂಜೂರು ಮಾಡಿದ್ದು, ಈ ಪೈಕಿ ಗ್ರಾಮದಲ್ಲಿ ಕಾಮಗಾರಿಯನ್ನು ಹುಣಸೂರಿನ ಕೆಆರ್ ಐಡಿಎಲ್ ಸಂಸ್ಥೆ ವಹಿಸಿಕೊಂಡು ಕೆಲಸ ಮಾಡುತ್ತಿತ್ತು. ಇದಕ್ಕೂ ಮುನ್ನವೇ ಗ್ರಾಮ ಪಂಚಾಯಿತಿ ಸದಸ್ಯರಾದ ನಂದಕುಮಾರ್ ಅವರೂ ಸಹ ನರೇಗಾದಡಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಕ್ರಿಯಾಯೋಜನೆ ರೂಪಿಸಿಕೊಂಡು ಚರಂಡಿ ನಿರ್ಮಾಣ ಮಾಡಿದ್ದು, ಸಿಸಿ ರಸ್ತೆಗೆ ಕಾಂಕ್ರೀಟ್ ರಸ್ತೆ ಮಾಡಿಸಲು ಶಿಥಿಲಗೊಂಡ ವಿದ್ಯುತ್ ಕಂಬ ಹಾಕಿದ ಬಳಿಕ ಮಾಡಿಸಲು ವಿಳಂಬ ಮಾಡಲಾಗಿದೆ ಎಂದು ಆರೋಪಿಸಿ ಬೀದಿ ಜನರು ಪ್ರತಿಭಟಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ನಂದಕುಮಾರ್ ಅವರಿಗೆ ಮನುಗನಹಳ್ಳಿ ಗ್ರಾಮ ಪಂಚಾಯಿತಿಯಿಂದ ದಾಸಯ್ಯ ಅವರ ಮನೆಯಿಂದ ಸುದಿಕುಮಾರ್ ಅವರ ಮನೆಯವರೆಗೆ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಅನುಮೋದನೆ ದೊರತಿದ್ದು, ಅದರಂತೆ ಚರಂಡಿ ಮಾಡಿದ್ದಾರೆ. ಆದರೆ, ಕೆಆರ್ ಐ ಡಿಎಲ್ ಸಂಸ್ಥೆ ಅವರು ಅದೇ ಬೀದಿಗೆ ಸಿಸಿ ರಸ್ತೆ ಮಾಡಲು ಮುಂದಾಗಿದ್ದು, ರಸ್ತೆ ಅಗೆದು ಜಲ್ಲಿ ಹಾಕಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನಂದಕುಮಾರ್ ಅವರು ಪಂಚಾಯಿತಿಯಿಂದ ನಮಗೆ ಅನುಮೋದನೆ ದೊರಕಿದ್ದು, ಕಾಮಗಾರಿ ಮಾಡುತ್ತೇನೆ. ಹೀಗಾಗಿ ಗ್ರಾಮದ ಬೇರೆ ರಸ್ತೆ ಕಾಮಗಾರಿ ಮಾಡಬೇಕು ಎಂದು ನಂದಕುಮಾರ್ ರಸ್ತೆ ಕಾಮಗಾರಿ ತಡೆದು ಆಗ್ರಹಿಸಿದರು.
ಈ ನಡುವೆ ಕೆಆರ್ ಐಡಿಎಲ್ ಅಧಿಕಾರಿಗಳು, ನಾಮಧಾರಿಗೌಡ ಬೀದಿ ಜನರ ನಡುವೆ ವಾಗ್ವಾದ ನಡೆಯಿತು. ಮಧ್ಯ ಪ್ರವೇಶಿಸಿದ ಸರಗೂರು ಪೊಲೀಸರು ಇಬ್ಬರ ಅಹವಾಲು ಸ್ವೀಕರಿಸಿ, ರಸ್ತೆ ಕಾಮಗಾರಿ ಮಾಡಲು ಅನುವು ಮಾಡಿಕೊಟ್ಟರು.
ಪ್ರತಿಭಟನೆ: ಗ್ರಾಮ ಪಂಚಾಯಿತಿ ಸದಸ್ಯರಾದ ನಂದಕುಮಾರ್ ಅವರು ಕೆಆರ್ ಐಡಿಎಲ್ ಗೆ ಕಾಂಕ್ರೀಟ್ ರಸ್ತೆ ಕಾಮಗಾರಿ ಮಾಡಲು ಪೊಲೀಸರು ಅನುಮತಿ ನೀಡಿದ್ದಾರೆ. ಇದರಿಂದ ನನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು.
ಇದೇ ವೇಳೆ ನಂದಕುಮಾರ್ ಮಾತನಾಡಿ, 2024–25ನೇ ಸಾಲಿನಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಮುಂದಾಗಿದ್ದು, ಅದರಂತೆ ಚರಂಡಿ ನಿರ್ಮಾಣ ಮಾಡಲಾಗಿದೆ. ಮುಂದುವರಿದು ರಸ್ತೆ ನಿರ್ಮಾಣಮಾಡಲಾಗುವುದು. ಆದರೆ, ಹುಣಸೂರಿನ ಕೆಆರ್ ಐಡಿಎಲ್ ಅವರು ಬಂದು ಕೆಲಸ ಮಾಡುತ್ತಿದ್ದಾರೆ. ಇದನ್ನು ತಡೆದು ನಮಗೆ ಕಾಮಗಾರಿ ಮಾಡಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಕಾಮಗಾರಿ ನಿಲ್ಲಿಸಬೇಕು. ಇಲ್ಲವಾದಲ್ಲಿ ನ್ಯಾಯಯುತವಾಗಿ ಹೋರಾಟ ನಡೆಸಲಾಗುವುದು ಎಂದು ಒತ್ತಾಯಿಸಿದರು.
ಪೊಲೀಸ್ ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್, ಪಿಎಸ್ ಐ ಆರ್.ಕಿರಣ್, ಕೆಅರ್ ಐಡಿಎಲ್ ಎಂಜಿನಿಯರ್ ಕೀರ್ತನ ಪ್ರಭು, ಅಭಿಷೇಕ್, ಪಿಡಿಒ ನಾಗೇಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


