ತಮಿಳುನಾಡಿನ ಕಾಂಚೀಪುರಂನಲ್ಲಿ ಪೊಲೀಸ್ ಎನ್ ಕೌಂಟರ್ ನಡೆಸಲಾಗಿದ್ದು, ಬುಧವಾರ ಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಕುಖ್ಯಾತ ಕ್ರಿಮಿನಲ್ ಗಳನ್ನು ಹೊಡೆದುರುಳಿಸಲಾಗಿತ್ತು.
ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರಘುವರನ್ ಮತ್ತು ಕರುಪುಪ್ ಅಸಿನ್ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾರೆ.
ಕುಖ್ಯಾತ ಪಾತಕಿ ಪ್ರಭಾಕರನ್ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಬ್ಬರೂ ಕಾಂಚೀಪುರಂ ಪೊಲೀಸರ ಕಣ್ಗಾವಲಿನಲ್ಲಿದ್ದರು. ಜಿಲ್ಲೆಯ ಪುತ್ತುಪಾಳ್ಯಂ ಬೀದಿಯಲ್ಲಿ ಮಂಗಳವಾರ ಜನರ ಗುಂಪೊಂದು ಪ್ರಭಾಕರನ್ ಅವರನ್ನು ಹತ್ಯೆ ಮಾಡಿತ್ತು. ರಘುವರನ್ ಮತ್ತು ಆಸಿನ್ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದರು. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಈ ಮಧ್ಯೆ, ಕಾಂಚೀಪುರಂ ಹೊಸ ರೈಲು ನಿಲ್ದಾಣದ ಸೇತುವೆ ಬಳಿಯ ಪಾಳುಬಿದ್ದ ಕಟ್ಟಡದಲ್ಲಿ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಇಲ್ಲಿಂದ ಆರೋಪಿಗಳನ್ನು ಬಂಧಿಸುವ ವೇಳೆ ಕುಡುಗೋಲಿನಿಂದ ಪೊಲೀಸರನ್ನು ಕೊಯ್ದು ಪರಾರಿಯಾಗಲು ಯತ್ನಿಸಿದ ವೇಳೆ ಸಬ್ ಇನ್ಸ್ ಪೆಕ್ಟರ್ ಸುಧಾಕರ್ ಗುಂಡು ಹಾರಿಸಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಪ್ರಾಣ ಉಳಿಸಲಾಗಲಿಲ್ಲ. ಮೃತದೇಹಗಳನ್ನು ಕಾಂಚೀಪುರಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ದಾಳಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ವಿಶೇಷ ಸಬ್ ಇನ್ಸ್ ಪೆಕ್ಟರ್ ರಾಮಲಿಂಗಂ ಮತ್ತು ಕಾನ್ ಸ್ಟೇಬಲ್ ಶಶಿಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


