ಬೆಳಗಾವಿ : ಪ್ರಸ್ತುತ ದಿನಗಳಲ್ಲಿ ಜಗತ್ತಿನಾದ್ಯಂತ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸೇವೆ ಮತ್ತು ಉತ್ಪಾದನಾ ವಲಯದಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ.
ಉದ್ಯೋಗಾಕಾಂಕ್ಷಿಗಳು ಕಾಲಕ್ಕೆ ತಕ್ಕಂತೆ ಕೌಶಲ್ಯವನ್ನು ಬೆಳೆಸಿಕೊಂಡು ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕರೆ ನೀಡಿದರು.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ನಗರದ ಮರಾಠಾ ಮಂಡಲದ ಕಲಾ, ವಿಜ್ಞಾನ ಹಾಗೂ ಗೃಹವಿಜ್ಞಾನ ಮಹಾವಿದ್ಯಾಲಯದಲ್ಲಿ ಸರ್ವರಿಗೂ ಉದ್ಯೋಗ ಅಭಿಯಾನದಡಿಯಲ್ಲಿ ಗುರುವಾರ (ಜ.19) ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ತಮ್ಮದೇ ಉದಾಹರಣೆ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ವಿಜಯಪುರ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತರೂ ನಿರಂತರ ಪ್ರಯತ್ನದ ಫಲವಾಗಿ ನಾಗರಿಕ ಸೇವೆಯಂತಹ ಉನ್ನತ ಹುದ್ದೆ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.
ಸರಕಾರಿ ಹಾಗೂ ಖಾಸಗಿ ಕಂಪನಿಯಲ್ಲಿ ಅನೇಕ ಕೆಲಸಗಳು ದೊರೆತವು. ವಿದೇಶಗಳಿಗೆ ಹೋಗುವ ಅವಕಾಶವಿದ್ದರೂ ನಾನು ನನ್ನ ಕನಸಿನಂತೆ ನಾಗರಿಕ ಸೇವೆ ಕ್ಷೇತ್ರವನ್ನು ಆಯ್ಜೆ ಮಾಡಿಕೊಂಡೆ ಎಂದು ಹೇಳಿದರು.
ಉದ್ಯೋಗ ಮೇಳ ಸಹಕಾರಿ: ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿರುವ ಉದ್ಯೋಗ ಮೇಳದಲ್ಲಿ ಒಟ್ಟಾರೆ 38 ಕಂಪನಿಗಳು ಭಾಗವಹಿಸಿದ್ದು, 3500 ಜನರು ನೋಂದಣಿ ಮಾಡಿಸಿದ್ದಾರೆ. ಎಲ್ಲರೂ ತಮ್ಮ ಕೌಶಲ್ಯ ಆಧಾರದ ಮೇಲೆ ಉದ್ಯೋಗ ಪಡೆಯಬಹುದು. ಎಲ್ಲರಿಗೂ ಉದ್ಯೋಗ ದೊರೆಯದಿದ್ದರೂ ಅನುಭವ ಆಗಲಿದೆ.
ಕಾಲಕ್ಕೆ ತಕ್ಕಂತೆ ಕೌಶಲ್ಯ ವೃದ್ಧಿಗೆ ಉದ್ಯೋಗ ಮೇಳಗಳು ಸಹಕಾರಿಯಾಗಿವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಭಿಪ್ರಾಯಪಟ್ಟರು.
ಒಂದು ವರದಿಯ ಪ್ರಕಾರ ಸದ್ಯಕ್ಕೆ ಶೇ.25ರಷ್ಟು ಪದವೀಧರರು ಮಾತ್ರ ನೇರವಾಗಿ ಉದ್ಯೋಗ ಪಡೆಯಬಲ್ಲರು. ಆದರೆ ಉಳಿದ ಶೇ.75 ರಷ್ಟು ಪದವೀಧರರು ಕೌಶಲ್ಯ ಬೆಳೆಸಿಕೊಳ್ಳುವ ಅಗತ್ಯವಿದೆ. ಆದ್ದರಿಂದ ಎಲ್ಲೆಲ್ಲಿ ಉದ್ಯೋಗ ಮೇಳ ನಡೆದರೂ ಭಾಗವಹಿಸಿ. ಉದ್ಯೋಗ ದೊರೆತ ನಂತರವೂ ಉನ್ನತ ಹುದ್ದೆ ಪಡೆಯಲು ನಿರಂತರವಾಗಿ ಪ್ರಯತ್ನಿಸಬೇಕು. ದೇಶದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ.
ಆದರೆ ಸ್ವಲ್ಪದರಲ್ಲೇ ತೃಪ್ತಿ ಪಡದೇ ಸಾಧ್ಯವಾದಷ್ಟು ಉನ್ನತ ಹುದ್ದೆಗೆ ಶ್ರಮಿಸಬೇಕು ಎಂದು ಉದ್ಯೋಕಾಂಕ್ಷಿಗಳಿಗೆ ಕಿವಿಮಾತು ಹೇಳಿದರು. ಬದುಕಿನಲ್ಲಿ ದೊಡ್ಡ ಗುರಿ ಇಟ್ಟುಕೊಂಡು ಅಗತ್ಯ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಇಂದು ಉದ್ಯೋಗ ಪಡೆಯುವುದರ ಜತೆಗೆ ಭವಿಷ್ಯದಲ್ಲಿ ನೀವು ಉದ್ಯೋಗ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಖಜಾನೆಯ ಜಂಟಿ ನಿರ್ದೇಶಕರಾದ ಸುರೇಶ್ ಹಲ್ಯಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ.ಬಸವಪ್ರಭು ಹಿರೇಮಠ, ಮರಾಠಾ ಮಂಡಲದ ಕಲಾ, ವಿಜ್ಞಾನ ಹಾಗೂ ಗೃಹವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಗಜಾನನ ಬೆನ್ನಾಳಕರ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರಾದ ಗುರುಪಾದಯ್ಯ ಹಿರೇಮಠ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿಯಂತ್ರಕರು ಶಿಲ್ಪಾ ವಾಲಿ ಮತ್ತಿತರರು ಉಪಸ್ಥಿತರಿದ್ದರು.
ಉದ್ಯೋಗಮೇಳದಲ್ಲಿ ಭಾಗವಹಿಸಿದ್ದ ಟಾಟಾ ಕ್ಯಾಪಿಟಲ್, ಐಸಿಐಸಿ ಬ್ಯಾಂಕ್, ಅದಾನಿ ಕ್ಯಾಪಿಟಲ್, ಪೇಟಿಎಂ ಪ್ರೈ. ಲಿ., ಬೈಜೂಸ್, ಆಶೋಕ್ ಐರನ್ ಗ್ರುಪ್ ಸೇರಿದಂತೆ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ 38 ಕಂಪನಿಗಳು ತಮ್ಮ ಅಗತ್ಯಾನುಸಾರ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು. ಹೆಸರು ನೋಂದಾಯಿಸಿದ್ದ ಬೆಳಗಾವಿ ಜಿಲ್ಲೆಯ ಒಟ್ಟಾರೆ 3500 ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಉದ್ಯೋಗಮೇಳದಲ್ಲಿ ಪಾಲ್ಗೊಂಡಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


