ಅಂತರ ರಾಷ್ಟ್ರೀಯ ಸಮುದಾಯದ ಎಚ್ಚರಿಕೆಯ ನಡುವೆಯೂ ತಾಲಿಬಾನ್‍ಗಳ ಹಿಡಿತದಲ್ಲಿರುವ ಆಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡುವ ಹಲವು ಬೆಳವಣಿಗೆಗಳಾಗುತ್ತಿದ್ದು, ದಿನೇ ದಿನೇ ಜಾಗತಿಕ ಮಟ್ಟದ ಬೆದರಿಕೆ ಹೆಚ್ಚಾಗುತ್ತಿದೆ.ಸುಮಾರು ಎರಡು ದಶಕಗಳ ಕಾಲ ಆಫ್ಘಾನಿಸ್ತಾನದಲ್ಲಿ ನಾಗರಿಕ ಯುದ್ಧದಲ್ಲಿ ಭಾಗಿಯಾಗಿದ್ದ ಅಮೆರಿಕಾ ಸೇನೆ ಸಂಘರ್ಷ ಸ್ಥಗಿತಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೆ ತಾಲಿಬಾನ್‍ಗಳು ಕಳೆದ ವರ್ಷದ ಆಗಸ್ಟ್ 15ರಂದು ಕಾಬೂಲ್ ಗೆ ನುಗ್ಗಿ ರಾಜಧಾನಿಯನ್ನು ವಶ ಪಡಿಸಿಕೊಂಡಿದ್ದರು. ಆಗಿನ ಅಧ್ಯಕ್ಷರು ದೇಶ ಬಿಟ್ಟು ಪರಾರಿಯಾಗಿದ್ದರು.
ಸ್ಥಳೀಯ ನಾಗರಿಕರು, ವಿದೇಶಿ ಪ್ರಜೆಗಳು ಸುಮಾರು ಒಂದು ತಿಂಗಳ ಕಾಲ ಆಫ್ಘಾನಿಸ್ತಾನದಿಂದ ಹೊರ ಹೋಗುವ ಪ್ರಹಸನ ನಡೆಯಿತು. ಅಮೆರಿಕಾ, ಭಾರತ ಸೇರಿ ಹಲವು ರಾಷ್ಟ್ರಗಳು ವಿಶೇಷ ವಿಮಾನಗಳ ಮೂಲಕ ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ಕರೆಸಿಕೊಂಡಿದ್ದವು.ಬಳಿಕ ತಾಲಿಬಾನ್‍ಗಳು ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಪ್ರಜಾ ಸತಾತ್ಮಕವಾಗಿ ಚುನಾಯಿತವಾಗಿದ್ದ ಸರ್ಕಾರವನ್ನು ಒಳಗೊಂಡಂತೆ ಸಂಯುಕ್ತ ಸರ್ಕಾರ ರಚಿಸಬೇಕು ಎಂದು ವಿಶ್ವಸಂಸ್ಥೆ ಸೇರಿದಂತೆ ವಿವಿಧ ರಾಷ್ಟ್ರಗಳು ಒತ್ತಡ ಹೇರಿದ್ದರು. ಆದರೆ ತಾಲಿಬಾನಿಗಳು ಅದಕ್ಕೆ ಸೊಪ್ಪು ಹಾಕಿಲ್ಲ.
ಜಾಗತಿಕ ರಾಷ್ಟ್ರಗಳು ಹಲವು ಸುತ್ತಿನ ಸಭೆಗಳನ್ನು ನಡೆಸಿ ಆಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಅಂತಿಮವಾಗಿ ತಾನಿಬಾನಿಗಳು ತಮ್ಮ ನೆಲದಲ್ಲಿ ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡಬಾರದು. ನೆರೆಯ ರಾಷ್ಟ್ರಗಳ ಮೇಲೆ ಅಪಾಯಕಾರಿ ವರ್ತನೆಗೆ ಕುಮ್ಮಕ್ಕು ನೀಡಬಾರದು ಎಂಬ ಷರತ್ತಿನೊಂದಿಗೆ ನಿಧಾನವಾಗಿ ಹಲವು ರಾಷ್ಟ್ರಗಳು ತಾಲಿಬಾನ್ ಆಡಳಿತದ ಜೊತೆ ರಾಜತಾಂತ್ರಿಕ ಸಂಬಂಧವನ್ನು ಮರು ಸ್ಥಾಪಿಸುವ ಹಂತದಲ್ಲಿವೆ.
ಆದರೆ ಇತ್ತೀಚೆಗೆ ಆಲ್‍ಖೈದಾ ಉಗ್ರ ಸಂಘಟನೆಯ ಸಂಸ್ಥಾಪಕ ಒಸೆಮಾ ಬಿನ್ ಲಾಡೇನ್‍ರ ಪುತ್ರ ಆಫ್ಘಾನಿಸ್ಥಾನಕ್ಕೆ ಭೇಟಿ ನೀಡಿದ್ದಾನೆ. ಮೊದಲಿಗಿಂತಲೂ ಹೆಚ್ಚು ಸ್ವತಂತ್ರವಾಗಿ ಉಗ್ರ ನಾಯಕರು ಆಫ್ಘಾನಿಸ್ಥಾನದಲ್ಲಿ ಸಂಚರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಆತಂಕ ವ್ಯಕ್ತ ಪಡಿಸಿದೆ.ಇದೆಲ್ಲದ್ದಕ್ಕಿಂತ ಅಪಾಯಕಾರಿ ಬೆಳವಣಿಗೆ ಎಂದರೆ ಆಫ್ಘಾನಿಸ್ಥಾನದಲ್ಲಿ ಮುಜಾಹಿದ್ದೀನ್‍ಗಳಿಗೆ ಅತ್ಯಾಧುನಿಕ ಯುದ್ಧ ಮತ್ತು ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿದೆ. ಆಫ್ಘಾನಿಸ್ತಾನದ ರಕ್ಷಣಾ ಇಲಾಖೆಯೇ ಈ ಕುರಿತು ದಿನಕ್ಕೊಂದು ವಿಡಿಯೋ ಮತ್ತು ಪೋಟೋಗಳನ್ನು ಪ್ರಕಟಿಸುತ್ತಿದೆ.
ತಾಲಿಬಾನ್ ಸರ್ಕಾರ ರಚನೆಗೂ ಮೊದಲು ಮುಜಾಹಿದ್ದೀನ್‍ಗಳು ಆಫ್ಘಾನಿಸ್ತಾನದಲ್ಲಿ ಉಗ್ರಗಾಮಿಗಳ ಪಟ್ಟಿಯಲ್ಲಿದ್ದರು. ಈಗ ಅದೇ ಮುಜಾಹಿದ್ದೀನ್‍ಗಳಿಗೆ ರಷ್ಯನ್ ಟ್ಯಾಂಕ್‍ಗಳು ಮತ್ತು ಭಾರೀ ಆಯುಧಗಳ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತಿದೆ.
ಆಫ್ಘಾನಿಸ್ತಾನದ ಸೇನಾಧಿಕಾರಿಗಳು ಸ್ಥಳೀಯವಾಗಿ ಬಳಕೆ ಮಾಡುತ್ತಿದ್ದ ಮತ್ತು ವಿದೇಶಗಳಿಂದ ಕಲಿತುಕೊಂಡಿದ್ದ ಯುದ್ಧ ತಂತ್ರಗಳನ್ನು ಮುಜಾಹಿದ್ದೀನ್‍ಗಳು ಕಲಿತುಕೊಳ್ಳುತ್ತಿದ್ದಾರೆ. ಮುಜಾಹಿದ್ದೀನ್‍ಗಳು ಸೇನೆಯ ಭಾಗವಾಗುತ್ತಿದ್ದಾರೆ. ಆಲ್-ಬರ್ದ ಯೋಧರು ತಮ್ಮ ಸಾಮಥ್ರ್ಯ ವೃದ್ಧಿಸಿಕೊಳ್ಳುತ್ತಿದ್ದಾರೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB