ಯುದ್ಧ ಪೀಡಿತ ಪ್ರದೇಶದಲ್ಲಿ ಜನ ಆತಂಕಗೊಳಗಾಗಿದ್ದು, ಸುಮಾರು 50 ಲಕ್ಷಕ್ಕೂ ಹೆಚ್ಚು ಮಂದಿ ಉಕ್ರೇನ್ ತೊರೆಯುತ್ತಿದ್ದಾರೆ. ಪೋಲ್ಯಾಂಡ್ ಗಡಿ ಭಾಗದಲ್ಲಿ ಸುಮಾರು ಎರಡೂವರೆ ಲಕ್ಷ ಜನ ಕಿಕ್ಕಿರಿದು ತುಂಬಿದ್ದು, ತಮಗೆ ಆಶ್ರಯ ಕಲ್ಪಿಸುವಂತೆ ಮೊರೆಯಿಡುತ್ತಿದ್ದಾರೆ.
ಉಕ್ರೇನ್ ಮೂರು ದಿಕ್ಕುಗಳ ನೆರೆ ರಾಷ್ಟ್ರಗಳಿಗೂ ಮಹಾವಲಸೆ ಆರಂಭವಾಗಿದೆ. ಸುಮಾರು 50 ಲಕ್ಷಕ್ಕೂ ಅಕ ಮಂದಿ ಉಕ್ರೇನ್ ತೊರೆದಿದ್ದಾರೆ. ರಷ್ಯಾ ನಾಗರಿಕ ಪ್ರದೇಶಗಳನ್ನೂ ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿರುವುದರಿಂದ ಜನ ಪ್ರಾಣ ಭೀತಿಯಿಂದ ಇದ್ದು, ಪೋಲ್ಯಾಂಡ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಆಶ್ರಯ ಬಯಸುತ್ತಿದ್ದಾರೆ. ಈವರೆಗೂ ಆತ್ಮವಿಶ್ವಾಸದಿಂದ ಹೋರಾಟ ನಡೆಸಿದ ಉಕ್ರೇನ್ ನಿನ್ನೆಯಿಂದ ಹಿನ್ನಡೆ ಅನುಭವಿಸುವಂತೆ ಭಾಸವಾಗಿದೆ.
ರಷ್ಯನ್ ಪಡೆ ಬಹುತೇಕ ಉಕ್ರೇನ್ ನಗರಗಳನ್ನು ಸುತ್ತುವರೆದು ಮಾರಣಾಂತಿಕ ಆಕ್ರಮಣಕ್ಕೆ ಸಜ್ಜುಗೊಂಡಿದೆ. ಕೊನೆ ಹಂತದ ಮಾತುಕತೆಯ ಫಲಶೃತಿಯನ್ನು ನಿರೀಕ್ಷಿಸಲಾಗುತ್ತಿದ್ದು, ಒಂದು ವೇಳೆ ಅಲ್ಲಿ ಸಂಧಾನ ಸಾಧ್ಯವಾಗದೇ ಹೋದರೆ ಶತ್ರು ಪಡೆ ಉಕ್ರೇನನ್ನು ಕೈ ವಶ ಮಾಡಿಕೊಳ್ಳಲು ಸಜ್ಜಾಗಿದೆ.
ಉಪಗ್ರಹ ಆಧಾರಿತ ಚಿತ್ರಗಳು, ಸೇನಾ ಪಡೆಯ ಜಮಾವಣೆಯನ್ನು ಖಚಿತ ಪಡಿಸಿವೆ. ಈ ನಡುವೆ ಅಣು ಶಕ್ತಿ ಬಳಕೆಯ ಬಗ್ಗೆಯೂ ಆತಂಕ ಎದುರಾಗಿದ್ದು, ವಿಶ್ವಸಂಸ್ಥೆ ಬೆಳವಣಿಗೆಯ ಮೇಲೆ ತೀವ್ರ ನಿಗಾ ಇರಿಸಿದೆ.
ಯಾವುದೇ ಸಂದರ್ಭದಲ್ಲೂ ಅಣುಶಕ್ತಿ ಬಳಸಬಾರದು ಎಂದು ಅಂತಾರಾಷ್ಟ್ರೀಯ ಸಮುದಾಯ ರಷ್ಯಾದ ಮೇಲೆ ಒತ್ತಡ ಹೇರುತ್ತಿದೆ. ಇಂದು ಬೆಳಗ್ಗೆ ರಷ್ಯಾದ ಕ್ಷಿಪಣಿ ಕರ್ಖಿವ್ ನಗರದ ಸ್ವತಂತ್ರ ಚೌಕದ ಜನವಸತಿ ಪ್ರದೇಶದ ಮೇಲೆ ದಾಳಿ ನಡೆಸಿದ್ದು, ಹಲವಾರು ಅಮಾಯಕ ಜೀವಗಳ ಹಾನಿಯಾಗಿದೆ. ದಾಳಿಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB