ಬೆಂಗಳೂರು: ಗೋಲ್ಡನ್ ಚಾರಿಯೇಟ್ (ಸುವರ್ಣ ರಥ) ರೈಲು ಪ್ರವಾಸ ದಕ್ಷಿಣ ಭಾರತದ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಐತಿಹಾಸಿಕ ಸ್ಥಳಗಳ ಅನಾವರಣಕ್ಕೆ ಮುಕುಟಪ್ರಾಯವೆನಿಸಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಅವರು ಯಶವಂತಪುರ ರೈಲು ನಿಲ್ದಾಣದ ಫ್ಲಾಟ್ ಫಾರಂ 6 ರಲ್ಲಿ ಗೋಲ್ಡನ್ ಚಾರಿಯೇಟ್ ಐಷಾರಾಮಿ ರೈಲು ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಗೋಲ್ಡನ್ ಚಾರಿಯೇಟ್ ರೈಲು ಸೇವೆಗಳು 2018 ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು ಅದನ್ನು ಮರುಚಾಲನೆಗೊಳಿಸಲಾಗಿದೆ. ಈ ರೈಲಿನ ಮಾಲೀಕತ್ವವನ್ನು 50% ಭಾರತೀಯ ರೈಲ್ವೇ, 25% ಪ್ರವಾಸೋದ್ಯಮ ಸಚಿವಾಲಯ ಭಾರತ ಸರ್ಕಾರ ಹಾಗೂ ಕೆಎಸ್ಟಿಡಿಸಿಯ 25% ರಷ್ಟು ಷೇರುಗಳ ಮೂಲಕ ರಾಜ್ಯ ಸರ್ಕಾರ ಹೊಂದಿದೆ. ರೈಲಿನ ಒಳಾಂಗಣವನ್ನು ಕಲಾತ್ಮಕವಾಗಿ ನಿರ್ಮಿಸಲಾಗಿದೆ.
18 ಕೋಚ್ಗಳಲ್ಲಿ ಕರ್ನಾಟಕ ಆಳಿದ ರಾಜವಂಶಸ್ಥರುಗಳಾದ ಕದಂಬ, ಹೊಯ್ಸಳ, ವಿಜಯನಗರ ಚಾಲುಕ್ಯರ ಹೆಸರನ್ನು ಇಡಲಾಗಿದೆ. ಊಟ, ವಸತಿಗೆ ಐಷಾರಾಮಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಗೋಲ್ಡನ್ ಚಾರಿಯೇಟ್ ಪ್ರವಾಸೋದ್ಯಮ ವಿಶ್ವದ ಪ್ರಸಿದ್ಧ ಪರಂಪರೆಯ ತಾಣಗಳ ಜೊತೆಗೆ ಪಶ್ಚಿಮ ಘಟ್ಟಗಳು, ಪ್ರಾಚೀನ ಕಡಲತೀರಗಳು, ಸಾಂಸ್ಕøತಿಕ ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತದೆ. ಇದರಿಂದ ರೈಲು ಹೋಟೆಲ್ಗಳು, ಕುಶಲಕರ್ಮಿಗಳು, ಪ್ರವಾಸ ನಿರ್ವಾಹಕರಿಗೆ ಆದಾಯ ಕಲ್ಪಿಸಿದಂತಾಗುತ್ತದೆ. ಈ ವಿಶೇಷ ರೈಲು ಪ್ರವಾಸ ಜಾಗತಿಕ ಮಟ್ಟದಲ್ಲಿ ವಿಶ್ವದ ಏಳು ಅತ್ಯುತ್ತಮ ಐಷಾರಾಮಿ ರೈಲು ಪ್ರಯಾಣಗಳಲ್ಲಿ ಗುರುತಿಸಲಾಗಿದ್ದು, ಹಲವಾರು ಪ್ರಶಸ್ತಿ ಪಡೆದುಕೊಂಡಿದೆ ಎಂದರು.
ಈ ರೈಲಿಗೆ 44 ಸುಸುಜ್ಜಿತ ಕ್ಯಾಬಿನ್ಗಳು, ಎನ್ ಸೂಟ್ ಸ್ನಾನಗೃಹ, ವೈಫೈ ಸಹ ಒಳಗೊಂಡಿದೆ. ರುಚಿ ಮತ್ತು ನಳಪಾಕ ಹೆಸರಿನ ಎರಡು ಹೋಟೆಲ್ಗಳು ಭಾರತೀಯ ಮತ್ತು ಅಂತರರಾಷ್ಟ್ರೀಯ ಪಾಕಪದ್ದತಿ ಸೇವೆ ನೀಡುತ್ತದೆ. ಲಾಂಜ್ ಬಾರ್, ಫಿಟ್ನೆಸ್ ಸೆಂಟರ್ ಇತರೆ ಸೌಕರ್ಯ ಕಲ್ಪಿಸಲಾಗಿದೆ ಎಂದರು.
ಎಲ್ಲೆಲ್ಲಿ ಪ್ರವಾಸ:
ಜೂವೆಲ್ ಆಫ್ ಸೌತ್ ಪ್ರವಾಸ ಇದೇ ಡಿಸೆಂಬರ್ 21 ರಿಂದ 26 ರವರೆಗೆ ಬೆಂಗಳೂರಿನಿಂದ ಆರಂಭಗೊಂಡು ಮೈಸೂರು, ಕಾಂಚೀಪುರಂ, ಮಹಾಬಲಿಪುರಂ, ತಂಜಾವೂರು, ಕೊಚ್ಚಿನ್, ಮರಾರಿಕುಲಂಗೆ ತೆರಳಿ ನಂತರ ಬೆಂಗಳೂರಿಗೆ ಹಿಂದಿರುಗುತ್ತದೆ. ಇದು ಐದು ದಿನಗಳ ಪ್ರವಾಸವಾಗಿದ್ದು, ಇದಕ್ಕೆ ತಗಲುವ ವೆಚ್ಚ ಒಬ್ಬರಿಗೆ ರೂ 4,07,700/-, ಪ್ರೈಡ್ ಆಫ್ ಕರ್ನಾಟಕ ಪ್ರವಾಸ ದಿನಾಂಕ: 01-02-2025 ರಿಂದ 06-02-2025 ರವರೆಗೆ ಬೆಂಗಳೂರಿನಿಂದ – ನಂಜನಗೂಡು- ಮೈಸೂರು- ಹಳೇಬೀಡು, ಚಿಕ್ಕಮಗಳೂರು, ಹೊಸಪೇಟೆ-ಗೋವಾ- ಬೆಂಗಳೂರನ್ನು ಒಳಗೊಂಡಿದ್ದು ಇದಕ್ಕೆ ತಗಲುವ ವೆಚ್ಚ 2,71,800 ರೂಪಾಯಿಗಳು. ಸೋಜರ್ನ್ ಆಪ್ ಸೌತ್ ಚಾರ್ಟರ್ಡ್ ಪ್ರವಾಸವನ್ನು 29-12-2024 ರಿಂದ 12-02-2025 ರವರೆಗೆ ಆಯೋಜಿಸಲಾಗಿದೆ.
ಭಾರತ ಅದರಲ್ಲೂ ದಕ್ಷಿಣ ಭಾರತದ ಪ್ರವಾಸೋದ್ಯಮವನ್ನು ಜಾಗತಿಕವಾಗಿ ಗುರುತಿಸಲು ಈ ಪ್ರವಾಸವು ಹೆಚ್ಚು ಸಹಕಾರಿಯಾಗಿದೆ. 2029 ರ ವೇಳೆಗೆ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲು ಕರ್ನಾಟಕ ಭಾರತೀಯ ರಾಜ್ಯಗಳ ಪಟ್ಟಿಯಲ್ಲಿ 3ನೇ ಅಗ್ರಸ್ಥಾನ ಪಡೆಯುವ ಗುರಿ ಸಹ ಹೊಂದಿದೆ. ಅಲ್ಲದೆ ಪ್ರವಾಸಿ ತಾಣದ ಮಹತ್ವವನ್ನು ಜನರಿಗೆ ತಿಳಿಸಲು ಈ ಪ್ರವಾಸ ಹೇಳಿ ಮಾಡಿಸಿದಂತಿದೆ.
ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸಲ್ಮಾ ಕೆ. ಫಾಹಿಮ್, ಕೆಎಸ್ಟಿಡಿಸಿ ಅಧ್ಯಕ್ಷ ಎಂ.ಶ್ರೀನಿವಾಸ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx