ತುಮಕೂರು: ರಾಜ್ಯ ಚುನಾವಣಾ ಆಯೋಗವು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ 28 ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
ವೇಳಾಪಟ್ಟಿಯನ್ವಯ ಡಿಸೆಂಬರ್ 13 ರಂದು ಚುನಾವಣಾ ನೋಟೀಸನ್ನು ಹೊರಡಿಸಲಾಗಿದ್ದು, ಡಿಸೆಂಬರ್ 17 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ನಾಮಪತ್ರಗಳ ಪರಿಶೀಲನೆಯನ್ನು ಡಿಸೆಂಬರ್ 18ರಂದು ನಡೆಸಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 20 ಕಡೆಯ ದಿನವಾಗಿದೆ.
ಮತದಾನ(ಅವಶ್ಯವಿದ್ದರೆ)ವನ್ನು ಡಿಸೆಂಬರ್ 27ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಹಾಗೂ ಮರು ಮತದಾನದ ಅವಶ್ಯವಿದ್ದಲ್ಲಿ ಡಿ.29ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಚುನಾವಣೆ ನಡೆಸಲಾಗುವುದು. ಮತಗಳ ಎಣಿಕೆಯು ಡಿಸೆಂಬರ್ 30 ರ ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡಿಸೆಂಬರ್ 13 ರಿಂದ ೩೦ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಗ್ರಾಮ ಪಂಚಾಯತಿಯ ಯಾವುದೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದೆ ಚುನಾವಣಾ ಪ್ರಕ್ರಿಯೆ ಮುಂದುವರೆಯಲಾಗದೆ ಇರುವಂತಹ ಗ್ರಾಮ ಪಂಚಾಯತಿಗಳಲ್ಲಿ ಹಾಗೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ/ ನಾಮಪತ್ರ ಹಿಂತೆಗೆತ ಮತ್ತಿತರ ಕಾರಣಗಳಿಂದ ಯಾವುದೇ ಅಭ್ಯರ್ಥಿಯು ಕಣದಲ್ಲಿರದೆ ಆ ಗ್ರಾಮ ಪಂಚಾಯತಿಯ ಯಾವುದೇ ಸ್ಥಾನಕ್ಕೂ ಚುನಾವಣೆ ನಡೆಯದೇ ಇದ್ದಲ್ಲಿ ಅಥವಾ ಗ್ರಾ.ಪಂ.ನ ಚುನಾವಣೆ ಘೋಷಿಸಿರುವ ಎಲ್ಲಾ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗಿ, ಆಯ್ಕೆಯಾದ ಅಭ್ಯರ್ಥಿಯ ಫಲಿತಾಂಶವನ್ನು ಚುನಾವಣಾಧಿಕಾರಿ ಘೋಷಿಸಿದಲ್ಲಿ ಅಂತಹ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ತಕ್ಷಣದಿಂದ ನಿಂತು ಹೋಗುತ್ತದೆ ಎಂದು ತಿಳಿಸಿದರು.
ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತದಾನವು ಮುಕ್ತಾಯಗೊಳ್ಳುವ ನಲವತ್ತೆಂಟು ಗಂಟೆಗಳ ಮೊದಲಿನ ಅವಧಿಯಲ್ಲಿ ಎಲ್ಲಾ ಮದ್ಯದಂಗಡಿ ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಮಾಲೀಕರು/ ಅಧಿಭೋಗದಾರರು ಮುಚ್ಚಬೇಕು. ಈ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟುಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡು ಬಂದರೆ ಮುನ್ನಚ್ಚರಿಕಾ ಕ್ರಮವಾಗಿ ಅಂತಹವರನ್ನು ಚುನಾವಣಾ ಆಯೋಗದ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ವರದಿ: ರಾಜೇಶ್ ರಂಗನಾಥ್
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700