ಬೆಂಗಳೂರು: ಚಳಿಗಾಲ ಆರಂಭವಾಗುತ್ತಿದ್ದಂತೆ ಮನೆಮನೆಗಳಲ್ಲಿ ಬಿಸಿನೀರಿಗಾಗಿ ವಾಟರ್ ಹೀಟರ್ ಅಥವಾ ಇಮ್ಮರ್ಶನ್ ರಾಡ್‌ಗಳ ಬಳಕೆ ಸಾಮಾನ್ಯ. ಆದರೆ, ಸಣ್ಣ ನಿರ್ಲಕ್ಷ್ಯವೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಇತ್ತೀಚೆಗೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದ ಘಟನೆಯೇ ಸಾಕ್ಷಿ.
ಏನಿದು ಘಟನೆ? ಮುಜಫರ್ ನಗರದ ನಿಧಿ (21) ಮತ್ತು ಲಕ್ಷ್ಮಿ (19) ಎಂಬ ಇಬ್ಬರು ಸಹೋದರಿಯರು ಸ್ನಾನಕ್ಕಾಗಿ ನೀರು ಕಾಯಿಸಲು ವಾಟರ್ ಹೀಟರ್ ಬಳಸಿದ್ದರು. ಬಕೆಟ್‌ನಿಂದ ಹೊಗೆ ಬರುತ್ತಿರುವುದನ್ನು ಕಂಡು, ಗಾಬರಿಯಿಂದ ಹೀಟರ್ ಹೊರತೆಗೆಯಲು ಹೋದ ನಿಧಿಗೆ ವಿದ್ಯುತ್ ಆಘಾತ (Electric Shock) ಉಂಟಾಗಿದೆ. ಆಕೆಯನ್ನು ರಕ್ಷಿಸಲು ಹೋದ ಸಹೋದರಿ ಲಕ್ಷ್ಮಿ ಕೂಡ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಮನಕಲಕುವ ಘಟನೆ ವಾಟರ್ ಹೀಟರ್ ಬಳಸುವಾಗ ಎಷ್ಟು ಜಾಗರೂಕರಾಗಿರಬೇಕು ಎಂಬುದನ್ನು ನೆನಪಿಸಿದೆ.
ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ:
ಪ್ಲಾಸ್ಟಿಕ್ ಬಕೆಟ್ ಬಳಸಿ: ನೀರು ಕಾಯಿಸಲು ಯಾವಾಗಲೂ ಪ್ಲಾಸ್ಟಿಕ್ ಬಕೆಟ್ ಮಾತ್ರ ಬಳಸಿ. ಲೋಹದ (ಸ್ಟೀಲ್ ಅಥವಾ ಅಲ್ಯೂಮಿನಿಯಂ) ಬಕೆಟ್ ಗಳನ್ನು ಅಪ್ಪಿತಪ್ಪಿಯೂ ಬಳಸಬೇಡಿ.
ರಾಡ್ ಇಡುವ ವಿಧಾನ: ಹೀಟರ್ ಅನ್ನು ಬಕೆಟ್‌ನ ಅಂಚಿಗೆ ಒರಗಿಸಿ ಇಡಬೇಡಿ. ಬದಲಾಗಿ, ಬಕೆಟ್‌ನ ಮಧ್ಯದಲ್ಲಿ ರಾಡ್ ಇರುವಂತೆ ಮರದ ತುಂಡಿನ ಸಹಾಯ ಪಡೆದುಕೊಳ್ಳಿ.
ಕ್ರಮಬದ್ಧ ಬಳಕೆ: ಮೊದಲು ಬಕೆಟ್‌ಗೆ ನೀರು ತುಂಬಿಸಿ, ನಂತರವಷ್ಟೇ ಹೀಟರ್ ರಾಡ್ ಇರಿಸಿ. ಆ ಬಳಿಕವಷ್ಟೇ ಸ್ವಿಚ್ ಆನ್ ಮಾಡಿ.
ಮುಟ್ಟುವ ಮೊದಲು ಎಚ್ಚರ: ನೀರು ಬಿಸಿಯಾದ ನಂತರ ಮೊದಲು ಸ್ವಿಚ್ ಆಫ್ ಮಾಡಿ, ಪ್ಲಗ್ ಹೊರತೆಗೆಯಿರಿ. ನಂತರವಷ್ಟೇ ನೀರನ್ನು ಮುಟ್ಟಿ ಅಥವಾ ಬಕೆಟ್ ಸ್ಥಳಾಂತರಿಸಿ. ಸ್ವಿಚ್ ಆನ್ ಇರುವಾಗ ನೀರನ್ನು ಪರೀಕ್ಷಿಸಲು ಹೋಗಬೇಡಿ.
ದೀರ್ಘಕಾಲ ನೀರಿನಲ್ಲಿ ಬಿಡಬೇಡಿ: ನೀರು ಕಾಯಿಸಿದ ನಂತರ ರಾಡ್ ಅನ್ನು ದೀರ್ಘಕಾಲ ನೀರಿನಲ್ಲೇ ಬಿಡುವುದರಿಂದ ಅದು ತುಕ್ಕು ಹಿಡಿಯಬಹುದು ಮತ್ತು ವಿದ್ಯುತ್ ಸೋರಿಕೆಯ ಅಪಾಯ ಹೆಚ್ಚಿರುತ್ತದೆ.
ವಿದ್ಯುತ್ ಉಪಕರಣಗಳನ್ನು ಬಳಸುವಾಗ ತೋರುವ ಒಂದು ನಿಮಿಷದ ತಾಳ್ಮೆ ಮತ್ತು ಮುನ್ನೆಚ್ಚರಿಕೆ ನಿಮ್ಮ ಮತ್ತು ನಿಮ್ಮ ಕುಟುಂಬದ ಜೀವವನ್ನು ಉಳಿಸಬಲ್ಲದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


