ಜಗತ್ತನ್ನೇ ಕಾಡಿದ್ದ ಕೋವಿಡ್ ಸೋಂಕು ಉತ್ತರ ಕೊರಿಯಾವನ್ನು ಆವರಿಸಿದ್ದು, ಉದ್ದೇಶ ಪೂರ್ವಕವಾಗಿ ಅಲ್ಲಿನ ಸರ್ಕಾರ ಮಾಹಿತಿಗಳನ್ನು ಮುಚ್ಚಿಟ್ಟಿತ್ತೆ ಎಂಬ ಅನುಮಾನಗಳು ಕಾಡಲಾರಂಭಿಸಿವೆ.
ಗುರುವಾರವಷ್ಟೆ ಕೋವಿಡ್‍ನ ರೂಪಾಂತರ ಓಮಿಕ್ರಾನ್‍ನ ಮೊದಲ ಪ್ರಕರಣ ದೃಢಪಟ್ಟಿದೆ ಎಂದು ವರದಿಯಾಗಿತ್ತು, ಅದರ ಬೆನ್ನಲೇ ಆಡಳಿತದ ಮುಖ್ಯಸ್ಥ ಕಿಮ್ ಜೊಂಗ್ ಉನ್ ದೇಶದಲ್ಲಿ ಲಾಕ್‍ಡೌನ್ ಘೋಷಿಸಿದರು. ಮೊದಲ ಬಾರಿಗೆ ತಾವು ಮಾಸ್ಕ್ ಧರಿಸಿ ಅಧಿಕಾರಿಗಳ ಸಭೆ ನಡೆಸಿದರು. ಆದರೆ ಮಾರನೇಯ ದಿನವೇ ಆತಂಕಕಾರಿ ಮಾಹಿತಿಗಳು ಹೊರ ಬಂದಿವೆ.
26 ದಶ ಲಕ್ಷ ಜನ ಸಂಖ್ಯೆ ಇರುವ ಉತ್ತರ ಕೊರಿಯಾದಲ್ಲಿ 1,74,440 ಜನರಿಗೆ ಕೋವಿಡ್ ಲಕ್ಷಣಗಳು ಕಂಡು ಬಂದಿವೆ. ನಿನ್ನೆ ಒಂದೇ ದಿನ 21 ಹೊಸ ಸಾವಿನ ಪ್ರಕರಣಗಳು ದಾಖಲಾಗಿವೆ. ಈವರೆಗೂ 27 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ, 5,24,440 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. 2,43,630 ಮಂದಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಉತ್ತರ ಕೊರಿಯಾದಲ್ಲಿ ಲಸಿಕೀಕರಣ ಪರಿಣಾಮಕಾರಿಯಾಗಿ ನಡೆದಿಲ್ಲ. ದೇಶದ ಆರೋಗ್ಯ ವ್ಯವಸ್ಥೆ ಕೂಡ ದುರ್ಬಲವಾಗಿದೆ ಎನ್ನಲಾಗಿದೆ. ಸೋಂಕು ವ್ಯಾಪಿಸುತ್ತಿರುವ ನಡುವೆ ಲಸಿಕೆ ಅಭಿಯಾನಕ್ಕೆ ಕಿಮ್ ಸರ್ಕಾರ ಆದ್ಯತೆ ನೀಡಿದೆ. ಖಾಸಗಿ ಕಂಪೆನಿಗಳು ಲಸಿಕೆ ಉತ್ಪಾದನೆ ಹೆಚ್ಚಿಸಲು ಮುಂದಾಗಬೇಕು ಎಂದು ಆದೇಶಿಸಿದ್ದಾರೆ. ಜಗತ್ತಿನ ಇತರ ದೇಶಗಳು ಸೋಂಕನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚೀನಾ ಮಾದರಿಯಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ಸರ್ಕಾರದ ವಲಯದಿಂದ ಕೇಳಿ ಬಂದಿದೆ. ಆರ್ಥಿಕ ಚಟುವಟಿಕೆಗಳು ನಿಲ್ಲಬಾರದು, ಜನರು ಉತ್ಪಾದನಾ ವಲಯದಲ್ಲಿ ಗುಂಪು ಸೇರುವುದನ್ನು ನಿರ್ಬಂಧಿಸಬಾರದು ಎಂದು ಸೂಚಿಸಲಾಗಿದೆ.
ಶನಿವಾರ ನಡೆದ ಪಾಲಿಟ್ ಬ್ಯೂರೋ ಸಭೆಯಲ್ಲಿ ಕಿಮ್, ಕೋವಿಡ್ ಹರಡುವಿಕೆಯನ್ನು ದೊಡ್ಡ ಕ್ರಾಂತಿ ಎಂದು ಕರೆದಿದ್ದಾರೆ. ಸೋಂಕನ್ನು ಶೀಘ್ರವೇ ಹತ್ತೋಟಿಗೆ ತರಲು ಜನರ ಸಹಕಾರ ಅಗತ್ಯ ಎಂದಿದ್ದಾರೆ.
ಜನರ ನೆರವಿಗೆ ಕೆಲವು ತುರ್ತು ಮೀಸಲುಗಳನ್ನು ಬಿಡುಗಡೆ ಮಾಡಲಾಗಿದೆ. ವೈದ್ಯಕೀಯ ಸಲಕರಣೆಗಳನ್ನು ಪೂರೈಸಲಾಗುತ್ತಿದೆ. ಈವರೆಗೂ ಬೇರೆ ಯಾವುದೇ ದೇಶದಿಂದಲೂ ನೆರವು ಕೇಳಿಲ್ಲ ಎಂದು ಆಡಳಿತ ಕೇಂದ್ರಿತ ಸುದ್ದಿ ಸಂಸ್ಥೆ ತಿಳಿಸಿದೆ.
ಈಗಾಗಲೇ ಅಮೆರಿಕಾದ ಜೊತೆ ವೈರತ್ವ ಸಾಸಿರುವ ಉತ್ತರ ಕೊರಿಯಾ, ಅಲ್ಲಿಂದ ಬರುವ ಲಸಿಕೆಯನ್ನು ಪಡೆಯದೆ ತಿರಸ್ಕರಿಸಿತ್ತು. ನೆರೆಯ ದಕ್ಷಿಣ ಕೊರಿಯಾದೊಂದಿಗೆ ಸಂಬಂಧ ಹದಗೆಡಿಸಿಕೊಂಡಿದೆ. ಆದಾಗ್ಯೂ ಉತ್ತರ ಕೊರಿಯಾಗೆ ನೆರವು ನೀಡಲು ಮುಕ್ತ ಮನಸ್ಸು ಹೊಂದಿರುವುದಾಗಿ ದಕ್ಷಿಣ ಕೊರಿಯಾದ ನೂತನ ಅಧ್ಯಕ್ಷ ಯೂನ್ ಸುಕ್ ಯೋಲ್ ತಿಳಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB