ಹೆಚ್.ಡಿ.ಕೋಟೆ: ಪುರಸಭಾ ವ್ಯಾಪ್ತಿಯಲ್ಲಿ ಬರುವ ವಡ್ಡರಗುಡಿ ಹಾಡಿಯನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತನೆ ಮಾಡಲು ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದರು.
ತಾಲೂಕಿನ ಹೊಸಹಳ್ಳಿ ಹಾಡಿ ವಿವೇಕಾನಂದ ಗಿರಿಜನ ಶೈಕ್ಷಣಿಕ ಕೇಂದ್ರದಲ್ಲಿ ಭಾನುವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಎರಡನೇ ದಿನದ ಗಿರಿಜನರ ಕುಂದುಕೊರತೆ ಸಮಾಲೋಚನೆ ಸಭೆಯಲ್ಲಿ ಗಿರಿಜನ ಮುಖಂಡರಿಂದ ಆಹುವಾಲು ಸ್ವೀಕರಿಸಿ ಮಾತನಾಡಿದರು.
ವಡ್ಡರಗುಡಿ ಹಾಡಿಯನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತನೆ ಮಾಡದೆ ಪುರಸಭೆ ವ್ಯಾಪ್ತಿಗೆ ಸೇರಿಸಿರುವುದರಮದ ಹಾಡಿಯ ಜನರು ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ತೊಂದರೆ ಆಗುತ್ತದೆ ಹಾಗಾಗಿ ಶೀಘ್ರವಾಗಿ ಪರಿಶೀಲನೆ ನಡೆಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.
ಹಾಡಿಯ ಮುಖಂಡ ವಡ್ಡರಗುಡಿ ಚಿಕ್ಕಣ್ಣ ಮಾತನಾಡಿ, ಜಿಲ್ಲೆಯಲ್ಲಿ 125 ಹಾಡಿಗಳ ಪೈಕಿ ವಡ್ಡರಗುಡಿ ಹಾಡಿ ಒಂದನ್ನು ಪುರಸಭಾ ವ್ಯಾಪ್ತಿಗೆ ಸೇರಿಸಲಾಗಿದೆ. ಆದರೆ ಕಂದಾಯ ಗ್ರಾಮವನ್ನಾಗಿ ಸೇರ್ಪಡೆ ಮಾಡದೆ ಪುರಸಭೆ ಸೇರ್ಪಡೆ ಮಾಡಿರುವುದರಿಂದ 86 ಕುಟುಂಬಗಳಿಗೆ ಸರ್ಕಾರಿ ಸೇವೆ ಪಡೆಯಲು ತೊಂದರೆ ಆಗಿದೆ. ಈ ಹಿಂದೆ ಸವ್ವೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದ್ದಾಗ ಡಿಮಾಂಡ್ ಸೇರಿಸಿಲ್ಲಾ, ಖಾತೆ ಆಗಿಲ್ಲ, ಭೂ ಪರಿವರ್ತನೆ ಕೂಡ ಆಗಿಲ್ಲ ಎಂದು ದೂರಿದರು. ಹಾಡಿಯ ಜನರಿಗೆ ಮಾಹಿತಿ ನೀಡದೆ ಅಧಿಕಾರಿಗಳು ಪುರಸಭೆಗೆ ಸೇರಿಸಿದ್ದಾರೆ. ಒಂದು ಚುನಾವಣೆಯಲ್ಲಿ ಪುರಸಭೆಗೆ ಮತ ಕೂಡ ಚಲಾಯಿಸಿದ್ದೇವೆ ಎಂದು ಸಚಿವರ ಗಮನಕ್ಕೆ ತಂದರು.
ನಂತರ ಕಂದಾಯ ಸಚಿವರು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಹಾಡಿಯ ಜನರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


