ಕೊರಟಗೆರೆ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಿಸಿದರೂ, ವೈದ್ಯನ ನಿರ್ಲಕ್ಷ್ಯತನದಿಂದಾಗಿ ಎರಡು ಜೀವ ಬಲಿಯಾದ ಘಟನೆ ಕೊರಟಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಇರಕಸಂದ್ರ ಕಾಲೋನಿ ಬಳಿ ಕೆಎಸ್ ಆರ್ ಟಿ ಸಿ ಬಸ್ ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿತ್ತು. ಪರಿಣಾಮವಾಗಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯರ ಸಹಕಾರದೊಂದಿಗೆ ತಕ್ಷಣವೇ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ತುರ್ತಾಗಿ ಚಿಕಿತ್ಸೆ ನೀಡಬೇಕಾದ ವೈದ್ಯರು ನಿರ್ಲಕ್ಷ್ಯವಹಿಸಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಓರ್ವ ಮೃತಪಟ್ಟಿದ್ದು, ಮತ್ತೋರ್ವ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ರವಾನಿಸಲು ಪ್ರಯತ್ನಿಸಲಾಯಿತಾದರೂ, ಆತ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ.
ಗಾಯಾಳುಗಳನ್ನು ಸರಿಯಾದ ಸಮಯಕ್ಕೆ ತಂದಿದ್ದರೂ, ತುರ್ತಾಗಿ ಚಿಕಿತ್ಸೆ ನೀಡುವ ಬದಲು ವೈದ್ಯ ನವೀನ್ ಕುಮಾರ್ ಸರಿಯಾಗಿ ಸ್ಪಂದಿಸದೇ ನಿರ್ಲಕ್ಷ್ಯವಹಿಸಿದ್ದು, ಇದರಿಂದಾಗಿ ಇಬ್ಬರ ಪ್ರಾಣ ಹೋಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಇನ್ನೂ ವೈದ್ಯನ ನಿರ್ಲಕ್ಷ್ಯತನದ ಪ್ರದರ್ಶನವನ್ನು ವಿಡಿಯೋ ಮಾಡಲು ತೆರಳಿದ ಪ್ರಗತಿ ಟಿವಿ ವರದಿಗಾರ ಹರೀಶ್ ಅವರ ಶರ್ಟ್ ಎಳೆದು ಹಲ್ಲೆಗೆ ಮುಂದಾದ ವೈದ್ಯ, “ನೀನ್ಯಾರು ವಿಡಿಯೋ ಮಾಡಲು?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಎಳೆದಾಡಿದ ಘಟನೆ ನಡೆದಿದೆ.
ಇನ್ನೂ ಸರ್ಕಾರಿ ಆಸ್ಪತ್ರೆಯಲ್ಲಿ ಕಿವಿ ಮತ್ತು ಗಂಟಲು ವಿಭಾಗದ ವೈದ್ಯ ನವೀನ್ ಸಮವಸ್ತ್ರವೂ ಧರಿಸದೇ, ಗುರುತಿನ ಚೀಟಿಯೂ ಧರಿಸದೇ ಬೇಕಾಬಿಟ್ಟಿ ಕಾಲ ಹರಣ ಮಾಡುತ್ತಿದ್ದು, ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಪ್ರಶ್ನಿಸಿದರೆ ಸಾರ್ವಜನಿಕರ ಮೇಲೆ ಗೂಂಡಾಗಿರಿ ತೋರುತ್ತಾರೆ ಎನ್ನುವ ಆಕ್ರೋಶ ಕೇಳಿ ಬಂದಿದೆ. ವೈದ್ಯನ ವಿರುದ್ಧ ತಕ್ಷಣ ಕಾನೂನು ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy