ಎರಡು ವರ್ಷಗಳ ನಂತರ ಕುಂದಾನಗರಿ ಬೆಳಗಾವಿಯ ಸುವರ್ಣ ವಿದಾನಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಲಿದೆ. ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಕಾಂಗ್ರೆಸ್ ಸಜ್ಜಾಗಿದೆ.
ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗಳೊಗಾದ ಪ್ರದೇಶಗಳಿಗೆ ಪರಿಹಾರ ನೀಡುವಲ್ಲಿ ವಿಫಲ, ಮತಾಂತರ ನಿಷೇಧ ಕಾಯ್ದೆ, ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಜನಪ್ರತಿನಿಗಳು 40% ಕಮಿಷನ್ ವಸೂಲಿ ಆರೋಪ, ಬಿಟ್ ಕಾಯಿನ್ ದಂಧೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಸಚಿವರ ವಿರುದ್ಧ ಸ್ವಪಕ್ಷೀಯರೇ ಆರೋಪ ಸೇರಿದಂತೆ ಪ್ರಚಲಿತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಕ್ಸಮರ ನಡೆಸಲು ಕಾಂಗ್ರೆಸ್ ತಯಾರಿ ನಡೆಸಿದೆ.ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಪೂರ್ವ ತಯಾರಿ ಮಾಡಿಕೊಂಡಿದೆ. ಸದನದಲ್ಲಿ ಪ್ರತಿಪಕ್ಷಗಳು ಏನೇ ಆರೋಪಿಸಿದರೂ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಆಡಳಿತಾರೂಢ ಬಿಜೆಪಿ ಸರ್ಕಾರವು ಕೂಡ ಸಜ್ಜಾಗಿದೆ.13ರಿಂದ 24ರವರೆಗೆ ನಡೆಯಲಿರುವ ಈ ಅಧಿವೇಶನವು ವಿಶೇಷವಾಗಿ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದ ಪ್ರಚಲಿತ ಸಮಸ್ಯೆಗಳಾದ ಮಹದಾಯಿ, ಕೃಷ್ಣ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ಪರಿಹಾರ ಸಿಗುವ ಸಾಧ್ಯತೆಯೂ ಇದೆ. ಅಧಿವೇಶನದ ಮೊದಲ ದಿನವಾದ ಸೋಮವಾರ ವಿಧಾನಮಂಡಲದ ಕಾರ್ಯಕಲಾಪದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ನಿರ್ಣಯ ಮಂಡನೆಯಾಗಲಿದೆ.ಹಠಾತ್ ನಿಧನರಾದ ಕನ್ನಡದ ಖ್ಯಾತನಟ ಪುನೀತ್ ರಾಜ್‍ಕುಮಾರ್, ಇತ್ತೀಚೆಗೆ ತಮಿಳುನಾಡಿನ ಕುನೂರು ಬಳಿ ಹೆಲಿಕಾಪ್ಟರ್ ಪತನಗೊಂಡು ಸಾವನ್ನಪ್ಪಿದ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಅಗಲಿದ ಎಲ್ಲರಿಗೂ ಉಭಯ ಸದನಗಳಲ್ಲಿ ಸಂತಾಪ ಸೂಚಿಸಲಾಗುವುದು. ಬಳಿಕ 2ನೇ ದಿನ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಈ ಬಾರಿ ರಣತಂತ್ರವನ್ನು ರೂಪಿಸಿದೆ.
ಬಿಟ್ ಕಾಯಿನ್ ಪ್ರಸ್ತಾಪ?:
ಬಿಟ್ ಕಾಯಿನ್ ವಿವಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸರ್ಕಾರದ ಹಲವು ನಾಯಕರ ಪಾಲಿಗೆ ತಲೆನೋವಾಗಿ ಕಾಡುವ ಸಾಧ್ಯತೆಗಳು ದಟ್ಟವಾಗಿವೆ. ರೈತರು, ಕೋವಿಡ್ ಸಂತ್ರಸ್ತರು, ಬಡ-ಮಧ್ಯದ ವರ್ಗದ ಜನರು ಎದುರಿಸುತ್ತಿರುವ ಸಂಕಟಗಳು ಮಿತಿ ಮೀರಿದ್ದು, ಈ ಅಂಶವೇ ಸರ್ಕಾರಕ್ಕೆ ದೊಡ್ಡ ಮಟ್ಟದ ತಲೆನೋವಾಗಿ ಕಾಡುವುದು ಖಚಿತ.ಅಕಾಲಿಕ ಮಳೆಯಿಂದಾಗಿ ರಾಜ್ಯಾದ್ಯಂತ 10 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಬೆಳೆ ಮತ್ತು ಆಸ್ತಿ-ಪಾಸ್ತಿಗೆ ಹಾನಿಯಾಗಿದ್ದು, ಇದಕ್ಕೆ ಪ್ರತಿಯಾಗಿ ಸರ್ಕಾರದಿಂದ ಸೂಕ್ತ ಪರಿಹಾರ ಕ್ರಮವಾಗಿಲ್ಲ.ಕೋವಿಡ್ ಕಂಟಕ ಎದುರಾದ ನಂತರ ರಾಜ್ಯ ಸರ್ಕಾರದ ಬೊಕ್ಕಸ ಕ್ಷೀಣಿಸಿದ್ದು ಅದರ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.
ಬಿಟ್ ಕಾಯಿನ್ ಹಗರಣದಲ್ಲಿ ಹಲವು ಬಿಜೆಪಿ ನಾಯಕರ ಹೆಸರು ಕೇಳಿಬರುತ್ತಿವೆ. ಹ್ಯಾಕಿಂಗ್ ವಿಚಾರದಲ್ಲಿ ಹಲವು ಆಯಾಮಗಳು ಕೇಳಿಬರುತ್ತಿದ್ದು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮತ್ತು ಇನ್ನಷ್ಟು ವಿವರಗಳನ್ನು ಪಡೆಯಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ. ಕಲಾಪ ಆರಂಭ ಹೊತ್ತಿನಲ್ಲಿ ಆದಷ್ಟು ಮಾಹಿತಿ ಕಲೆಹಾಕಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ.
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಇತರ ಕಾಂಗ್ರೆಸ್ ನಾಯಕರು ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಇನ್ನು ಬಿಡಿಎಯಲ್ಲಿ ಸಾಕಷ್ಟು ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಆ ವಿಚಾರದಲ್ಲಿ ಕೂಡ ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷ ಕಾಂಗ್ರೆಸ್ ಸಜ್ಜಾಗಿದೆ.ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಇತರ ಕಾಂಗ್ರೆಸ್ ನಾಯಕರು ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಇನ್ನು ಬಿಡಿಎಯಲ್ಲಿ ಸಾಕಷ್ಟು ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಆ ವಿಚಾರದಲ್ಲಿ ಕೂಡ ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷ ಕಾಂಗ್ರೆಸ್ ಸಜ್ಜಾಗಿದೆ.
ಕಾಮಗಾರಿಗಳಿಗೆ ಅನುಮೋದನೆ ಪಡೆಯಲು ಶೆ.40ರಷ್ಟು ಲಂಚ ನೀಡಬೇಕೆಂದು ಗುತ್ತಿಗೆದಾರರು ಹೇಳಿರುವುದು ಭಾರೀ ಸದ್ದು ಮಾಡುತ್ತಿದೆ. ಕಳೆದ ವಾರ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೊಟ್ ಅವರನ್ನು ಭೇಟಿ ಮಾಡಿ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ತರಬೇಕೆಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು.
ಗುತ್ತಿಗೆದಾರರು ಆರೋಪಿಸಿರುವಂತೆ ಸರ್ಕಾರದಿಂದ ಯೋಜನೆ ಪಡೆಯಲು ಲಂಚ ಪಡೆಯುತ್ತಾರೆ ಎಂಬ ಆರೋಪವನ್ನು ಸಾಬೀತುಪಡಿಸುವ ಜವಾಬ್ದಾರಿ ಮತ್ತು ಕೆಲಸ ಈಗ ವಿರೋಧ ಪಕ್ಷಗಳ ಮುಂದಿದೆ.
ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಆರೋಗ್ಯ ಮತ್ತು ಇತರ ಇಲಾಖೆಗಳಲ್ಲಿ ಶೇ.5ರಿಂದ 7ರಷ್ಟು ಗುತ್ತಿಗೆದಾರರು ತಕ್ಷಣ ಹಣ ನೀಡಬೇಕೆಂದು ಗುತ್ತಿಗೆದಾರರು ಆರೋಪಿಸಿದ್ದರು. ಅದನ್ನೀಗ ಸಾಬೀತುಪಿಸಬೇಕಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇನ್ನೆರಡು ದಿನಗಳೊಳಗೆ ತಮ್ಮ ಪಕ್ಷದ ಶಾಸಕರ ಸಭೆಯನ್ನು ಕರೆಯುವ ಸಾಧ್ಯತೆಯಿದ್ದು ಈ ಸಂಬಂಧ ಸಭೆಯಲ್ಲಿ ಗಂಭೀರ ಚರ್ಚೆ ಏರ್ಪಡುವ ನಿರೀಕ್ಷೆಯಿದೆ.
ಸರ್ಕಾರ ವಿರುದ್ಧ ಕಾಂಗ್ರೆಸ್ ನಾಯಕರು ಮಾತ್ರ ಆರೋಪ ಮಾಡುತ್ತಿದ್ದಾರೆ, ಇನ್ನು ಅಧಿವೇಶನಕ್ಕೆ ಮುನ್ನ ಕುಮಾರಸ್ವಾಮಿಯವರು ಕೂಡ ಸೋಟಗೊಳ್ಳುವ ನಿರೀಕ್ಷೆಯಿದೆ. ಇನ್ನು ಅಕಾಲಿಕ ಮಳೆಯಿಂದ ಸಾವಿರಾರು ಎಕರೆ ಜಮೀನು ಜಲಾವೃತವಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಬೆಳೆಹಾನಿಯಾಗಿದೆ. ಮನೆಗಳು ಕುಸಿದಿವೆ. ಇನ್ನೂ ಸಾಕಷ್ಟು ನಷ್ಟವಾಗಿದೆ. ಸಂಕಷ್ಟಪೀಡಿತ ಜನರಿಗೆ ಪರಿಹಾರ ನೀಡಲು ಸರ್ಕಾರ ವಿಫಲವಾಗಿದೆ ಎಂಬುದನ್ನು ವಿರೋಧ ಪಕ್ಷಗಳು ಸದನದಲ್ಲಿ ತೋರಿಸಬೇಕಿದೆ. ಪ್ರತಿ ವರ್ಷ ಬಂಪರ್ ಆದಾಯ ತಂದುಕೊಡುತ್ತಿದ್ದ ಅಬಕಾರಿ ಬಾಬ್ತಿನಲ್ಲೂ ಈ ಬಾರಿ ನಿರೀಕ್ಷಿತ ಪ್ರಮಾಣದ ಆದಾಯ ಲಭ್ಯವಾಗದೇ ಇರುವುದು ಸರ್ಕಾರದ ಪಾಲಿಗೆ ತಲೆನೋವಾಗಿದೆ. ಕೇಂದ್ರ ಸರ್ಕಾರದ ಜಿ.ಎಸ್.ಟಿ ನೀತಿಯಿಂದ ಗಣನೀಯ ಪ್ರಮಾಣದ ಆದಾಯವನ್ನು ಕಳೆದುಕೊಂಡಿರುವ ಸರ್ಕಾರ, ಹೀಗೆ ತನಗಾಗುತ್ತಿರುವ ಕೊರತೆಗೆ ಪ್ರತಿಯಾಗಿ ಕೇಂದ್ರದಿಂದ ನಿರೀಕ್ಷಿಸಿದಷ್ಟು ಹಣ ಬರುತ್ತಿಲ್ಲ.
ಇದೇ ಕಾರಣಕ್ಕಾಗಿ ಕಳೆದ ಬಜೆಟ್‍ನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಬಜೆಟ್ ಗಾತ್ರವನ್ನು ಕಡಿತಗೊಳಿಸಲಾಗಿತ್ತಾದರೂ ಈ ಬಾರಿ ನಿಗದಿಗೊಳಿಸಿದ ಹಣವನ್ನೂ ಇಲಾಖಾವಾರು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜ್ಯದ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದ ಕೆಲಸ ಕಾರ್ಯಗಳಾಗದೆ ಆಡಳಿತಾರೂಢ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರು ಕುಪಿತಗೊಂಡಿದ್ದಾರೆ.
ಈ ಮಧ್ಯೆ ಕೋವಿಡ್‍ನಿಂದ ನಿಧನರಾದವರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಘೋಷಿಸಲಾಗಿತ್ತಾದರೂ ಇದುವರೆಗೆ ಪರಿಹಾರದ ಮೊತ್ತ ಸಂಬಂಧಿಸಿದವರಿಗೆ ತಲುಪಿಲ್ಲ. ಈ ಅಂಶವನ್ನು ಹಿಡಿದುಕೊಂಡು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ನಿಶ್ಚಿತವಾಗಿದೆ.
ಇನ್ನು ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಬಾಕಿ ಇರುವುದು ಕೇವಲ 17 ತಿಂಗಳು. ಈ ಸಂದರ್ಭದಲ್ಲಿ ಸರ್ಕಾರದ ವೈಫಲ್ಯವನ್ನು ಜನತೆ ಮುಂದೆ ಎತ್ತಿಹಿಡಿಯಬೇಕೆಂಬ ಮನಸ್ಥಿತಿಯಲ್ಲಿ ವಿರೋಧ ಪಕ್ಷಗಳಿವೆ.
ವರದಿ: ಆಂಟೋನಿ ಬೇಗೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700