ಮಂಡ್ಯ: ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದ ಭೀತಿಯ ಹಿನ್ನೆಲೆಯಲ್ಲಿ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮಂಡ್ಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುದ್ಧದ ಪರ ಇರುವ ರಾಷ್ಟ್ರಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಕೇವಲ ಮೂರು ದೇಶಗಳಿಗೆ ಸೀಮಿತವಾಗಿಲ್ಲ, ಇದು ಇಡೀ ಪ್ರಪಂಚಕ್ಕೆ ಯುದ್ಧದ ಭೀತಿಯನ್ನು ಹರಡಿದೆ ಎಂದು ವಾಟಾಳ್ ನಾಗರಾಜ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಯುದ್ಧದಲ್ಲಿ ಅಸಂಖ್ಯಾತ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮನುಷ್ಯತ್ವ ಮತ್ತು ಮಾನವ ಕುಲಕ್ಕೆ ಬೆಲೆಯೇ ಇಲ್ಲದಂತಾಗಿದೆ. ಯುದ್ಧದಿಂದಾಗಿ ದೇಶಗಳು ಆರ್ಥಿಕವಾಗಿ ಕುಸಿದು, ಬೆಲೆ ಏರಿಕೆ ಮತ್ತು ಅಸುರಕ್ಷಿತ ಭಾವನೆ ಮೂಡುತ್ತಿದೆ ಎಂದು ಅವರು ಹೇಳಿದ್ದಾರೆ.
ಟ್ರಂಪ್ ನಿರ್ಧಾರಕ್ಕೆ ವಿರೋಧ: ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಈ ವಿಷಯದಲ್ಲಿ ಅತ್ಯಂತ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಪ್ರಮುಖ ನಾಯಕರು ಹತರಾಗಿದ್ದು, ಇದಕ್ಕೆ ಪ್ರತಿಯಾಗಿ ಅಮೆರಿಕದ ಪ್ರಜೆಗಳು ಮತ್ತು ಸೈನಿಕರು ಕೂಡ ಬಲಿಯಾಗುತ್ತಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಯುದ್ಧ ಯಾರಿಗೂ ಬೇಕಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಸಂಸ್ಥೆಯ ಮೌನಕ್ಕೆ ಆಕ್ಷೇಪ: ಪ್ರಪಂಚ ಇಷ್ಟೊಂದು ಸಂಕಷ್ಟದಲ್ಲಿರುವಾಗ ವಿಶ್ವ ಸಂಸ್ಥೆ (United Nations) ಮೌನವಾಗಿರುವುದು ಸರಿಯಲ್ಲ. ಕೂಡಲೇ ವಿಶ್ವ ಸಂಸ್ಥೆ ಮಧ್ಯಪ್ರವೇಶಿಸಿ ಯುದ್ಧವನ್ನು ನಿಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಮತ್ತು ಮಾನವ ಹಕ್ಕುಗಳ ಆಯೋಗವು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


