ಬೆಂಗಳೂರು: ತನ್ನ ಟಾಟಾ ಸುಮೋಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಬೈಕ್ ಸವಾರನನ್ನ ಬೆನ್ನಟ್ಟಿ ಹಿಡಿಯಲು ಹೋದ ಚಾಲಕನನ್ನ ಬೈಕ್ ಸವಾರ 1 ಕಿ.ಮೀ ಎಳೆದೊಯ್ದಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಈ ಘಟನೆ ನಡೆದಿದೆ. ಟೋಲ್ ಗೇಟ್ ಬಳಿ ಟಾಟಾ ಸುಮೋಗೆ ಬೈಕ್ ಸವಾರ ಸಾಹಿಲ್ ಎಂಬುವವನು ಡಿಕ್ಕಿ ಹೊಡೆದಿದ್ದು, ಇದನ್ನು ಟಾಟಾ ಸುಮೋ ಚಾಲಕ ಮುತ್ತಪ್ಪ ಪ್ರಶ್ನಿಸಿದ್ದಾರೆ.
ಈ ವೇಳೆ ಬೈಕ್ ಏರಿ ಸವಾರ ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಮಯದಲ್ಲಿ ಕಾರು ಚಾಲಕ ಮುತ್ತಪ್ಪ ಬೈಕ್ ಹಿಂಭಾಗ ಹಿಡಿದು ಜೋತು ಬಿದ್ದಿದ್ದು, ಬೈಕ್ ಸವಾರ ಸಾಹಿಲ್ ಮುತ್ತಪ್ಪರನ್ನ ಒಂದೂವರೆ ಕಿಲೋ ಮೀಟರ್ ದೂರಕ್ಕೆ ಎಳೆದೊಯ್ದಿದ್ದಾನೆ.ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ಎಳೆದೊಯ್ದಿದ್ದಾನೆ.
ವಯಸ್ಸಾದ ಚಾಲಕನನ್ನ ಬೈಕ್ನಲ್ಲಿಎಳೆದೊಯ್ಯುತ್ತಿರುವುದನ್ನು ನೋಡಿದ ಇತರೆ ವಾಹನ ಸವಾರರು ಬೈಕ್ ಅನ್ನು ಅಡ್ಡಹಾಕಿ ಪ್ರಶ್ನಿಸಿ ಸಾಹಿಲ್ ಗೆ ಧರ್ಮದೇಟು ನೀಡಿದ್ದಾರೆ. ಮಾಹಿತಿ ತಿಳಿದ ವಿಜಯ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಸಾಹಿಲ್ ನನ್ನ ವಶಕ್ಕೆ ಪಡೆದಿದ್ದಾರೆ.
ಬೈಕಿನ ಹಿಂದೆ ನೇತುಬಿದ್ದು ಒಂದುವರೆ ಕಿಮೀ ಎಳೆದೊಯ್ತಲ್ಪಟ್ಟ ಟಾಟಾಸುಮೋ ಚಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


