ಸುಮಾರು 300 ಅತಿಥಿಗಳ ಸಮ್ಮುಖದಲ್ಲಿ ವೇದಿಕೆ ಮೇಲೆ ಮದುಮಗ ಕಿಸ್ ಕೊಟ್ಟಿದ್ದಕ್ಕೆ ಯುವತಿ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಸಾಂಬಲ್ ಎಂಬ ನಗರದಲ್ಲಿ ಈ ಘಟನೆ ನಡೆದಿದೆ. ವೇದಿಕೆ ಮೇಲೆ ವಧು-ವರರು ಹೂವಿನ ಹಾರ ಬದಲಾಯಿಸಿಕೊಳ್ಳುತ್ತಿದ್ದಂತೆ ವರ ಕಿಸ್ ಮಾಡಿದ್ದಾನೆ. ಈ ಅನಿರೀಕ್ಷಿತ ಘಟನೆಯಿಂದ ಆಘಾತಕ್ಕೆ ಒಳಗಾದ ಯುವತಿ ಕೂಡಲೇ ವೇದಿಕೆಯಿಂದ ಇಳಿದು ಹೋಗಿದ್ದು, ನಂತರ ಮದುವೆಯನ್ನು ರದ್ದುಗೊಳಿಸಿದ್ದಾಳೆ.
ಹುಡುಗಿಗೆ ಮುತ್ತು ಕೊಡುವುದಾಗಿ ಯುವಕ ಸ್ನೇಹಿತರ ಬಳಿ ಪಂದ್ಯ ಕಟ್ಟಿದ್ದ. ಬೆಟ್ ಕಟ್ಟಿ ಹೀಗೆ ಮಾಡುತ್ತಾನೆ ಅಂದರೆ ಅವರ ಚಾರಿತ್ರ್ಯದ ಬಗ್ಗೆ ನನಗೆ ಅನುಮಾನ ಮೂಡಿದೆ. ಆದ್ದರಿಂದ ಮದುವೆ ರದ್ದುಗೊಳಿಸಿದ್ದಾಗಿ 23 ವರ್ಷದ ಪದವೀಧರ ಯುವತಿ ಹೇಳಿದ್ದಾಳೆ.
ಯುವತಿ ನಿರ್ಧಾರದಿಂದ ವರನ ಕಡೆಯವರು ಆಘಾತಕ್ಕೆ ಒಳಗಾದರೆ, ಮದುವೆ ಬಂದಿದ್ದ ಅತಿಥಿಗಳು ವಾಪಸ್ ಹೋದರು. ಆದರೆ ಪಟ್ಟು ಬಿಡದ ವರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಪೊಲೀಸರು ಎರಡೂ ಕುಟುಂಬಗಳನ್ನು ಕರೆಸಿ ಮಾತುಕತೆ ನಡೆಸಿ ರಾಜಿ ಸಂಧಾನ ಮಾಡಲು ಯತ್ನಿಸಿದರೂ ಫಲ ನೀಡಲಿಲ್ಲ.
ವೇದಿಕೆ ಮೇಲೆಯೇ ಆತ ನನ್ನನ್ನು ಅಸಭ್ಯವಾಗಿ ಮುಟ್ಟಿದ. ಆದರೆ ನಾನು ಅದನ್ನು ಪರಿಗಣಿಸಲಿಲ್ಲ. ಆದರೆ ಅನಿರೀಕ್ಷಿತವಾಗಿ ಎಲ್ಲರ ಎದುರು ಮುತ್ತು ಕೊಟ್ಟಿದ್ದಾನೆ. ಅವನ ಈ ವರ್ತನೆಯಿಂದ ನನಗೆ ಆಘಾತ ಮತ್ತು ಅಪಮಾನ ಆದಂತಾಯಿತು. ನನಗೆ ಗೌರವ ಕೊಡದ ವ್ಯಕ್ತಿ ಮುಂದೆ ಹೇಗೆ ನೋಡಿಕೊಳ್ಳಬಹುದು? ಆದ್ದರಿಂದ ಆತನನ್ನು ಮದುವೆ ಆಗುವುದಿಲ್ಲ ಎಂದು ಯುವತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.
ಸ್ನೇಹಿತರ ಪ್ರಚೋದನೆಯಿಂದ ಹುಡುಗ ಹಾಗೆ ಮಾಡಿದ್ದಾನೆ. ನಾವು ಏನೇ ಹೇಳಿದರೂ ಮಗಳು ಒಪ್ಪುತ್ತಿಲ್ಲ. ನಾವು ಸ್ವಲ್ಪ ಸಮಯ ಕೊಡಿ ಎಂದು ಕೇಳಿದ್ದೇವೆ ಎಂದು ಯುವತಿ ತಾಯಿ ಹೇಳಿದ್ದಾರೆ.
ಪದ್ಧತಿಗಳು ಹಾಗೂ ಸಂಪ್ರದಾಯಗಳು ಮುಗಿದಿರುವುದರಿಂದ ತಾಂತ್ರಿಕವಾಗಿ ಇಬ್ಬರಿಗೂ ಮದುವೆ ಆಗಿದೆ. ಆದರೆ ಯುವತಿ ಮದುವೆಯನ್ನೇ ನಿರಾಕರಿಸಿದ್ದಾಳೆ. ಮುಂದೆ ವರ ವಿವೇಕ್ ಅಗ್ನಿಹೋತ್ರಿ ಏನು ಮಾಡುತ್ತಾನೆ ಎಂಬುದು ಕಾದು ನೋಡಬೇಕಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy