ತುರುವೇಕೆರೆ:ತಾಲ್ಲೂಕಿನ ಮಾಯಸಂದ್ರ ಹೋಬಳಿ ಚಿಕ್ಕಪುರ ಗ್ರಾಮದಲ್ಲಿ ಜೆ.ಡಿ.ಎಸ್. ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ರಾಜು, ಷಡಕ್ಷರಿ, ನರಸಿಂಹಮೂರ್ತಿ, ವೆಂಕಟೇಶ್ ಎಂ, ಚಂದ್ರಣ್ಣ, ಕುಮಾರ್ ಸಿ.ಎಂ. ವೇದ, ರವಿಕುಮಾರ್, ರಾಜೇಂದ್ರಬಾಬು, ಚಂದ್ರಣ್ಣ, ಜಗದೀಶ್ , ನಾಗರಾಜ್, ರಾಜಪ್ಪ, ಎಲ್ಲಪ್ಪ, ಕಾಂತರಾಜ್, ಕುಮಾರಯ್ಯ ಸದಾಶಿವಯ್ಯ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಬಿ.ಜೆ.ಪಿ. ತೊರೆದು ಮಾಜಿ ಶಾಸಕ ಎಂ. ಟಿ. ಕೃಷ್ಣಪ್ಪನವರ ನೇತೃತ್ವದಲ್ಲಿ ಜೆ.ಡಿ.ಎಸ್. ಪಕ್ಷವನ್ನು ಸೇರ್ಪಡೆಯಾದರು.
ಮಾಜಿ ಶಾಸಕ ಕೃಷ್ಣಪ್ಪ ಈ ವೇಳೆ ಮಾತನಾಡಿ, ನಮ್ಮನ್ನು ನಂಬಿ ಪಕ್ಷ ಸೇರ್ಪಡೆಯಾಗುತ್ತಿರುವ ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳಲಾಗುವುದು. ನಿಮಗೆ ಆತಂಕ ಬೇಡ ಎಂದರು.
ಕೆಲ ಕಿಡಿಗೇಡಿಗಳು ಜೆ.ಡಿ.ಎಸ್. ಪಕ್ಷದ ಕಾರ್ಯಕ್ರಮದ ಪೋಸ್ಟರ್ ಗಳನ್ನು ಹರಿಯುವುದು ಅವರ ಸಂಸ್ಕೃತಿಯನ್ನು ತೋರುತ್ತದೆ. ನಮ್ಮ ಕಾರ್ಯಕರ್ತರು ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ಅವರು ಮಾಡಿದಂಥ ಕೆಲಸವನ್ನು ನೀವು ಮಾಡಬೇಡಿ. ಆ ರೀತಿ ಮಾಡಿದರೆ ನಿಮಗೂ ಅವರಿಗೂ ವ್ಯತ್ಯಾಸ ವಿರುವುದಿಲ್ಲ. ಇನ್ನು 45 ದಿನಗಳಲ್ಲಿ ಅವರ ಬಲ ಗೊತ್ತಾಗುತ್ತದೆ. ತುರುವೇಕೆರೆ ಕ್ಷೇತ್ರದಲ್ಲಿ ವೀರಶೈವರು ಜೆ.ಡಿ.ಎಸ್. ಪಕ್ಷಕ್ಕೆ ಭಾರೀ ಬೆಂಬಲ ತೋರುತ್ತಿರುವುದರಿಂದ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದರು.
ಮೊದಲು ನಮ್ಮ ಕ್ಷೇತ್ರ ಚೆನ್ನಾಗಿತ್ತು. ಯಾವುದೇ ಭ್ರಷ್ಟಾಚಾರವಿರಲಿಲ್ಲ, ಬಿ.ಜೆ.ಪಿ. ಸರ್ಕಾರ ಬಂದ ಮೇಲೆ ಇದೆಲ್ಲ ಜಾಸ್ತಿಯಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿ ಯಾರಿಂದಲೂ ಒಂದು ರೂಪಾಯಿಯೂ ಲಂಚ ಸ್ವೀಕರಿಸಿಲ್ಲ, ಇವತ್ತು ಪ್ರತಿ ಭೂಮಿ ಪೂಜೆ ಮಾಡಲೂ ಸಹ 30 ರಿಂದ 40% ಕಮಿಷನ್ ಕೊಟ್ಟರೆ ಪೂಜೆ ನಡೆಯುತ್ತದೆ. ಇದು ಭ್ರಷ್ಟಾಚಾರದ ಪರಮಾವಧಿ. ಮತದಾರ ಓಟನ್ನು ಕೊಡುವುದು ನಿಮ್ಮ ಸೇವೆಯನ್ನು ಮಾಡಲು ಶೋಕಿಮಾಡಲು ಅಲ್ಲ, ಚುನಾವಣೆ ದಿನಾಂಕ ನಿಗದಿಯಾದ ಮೇಲೆ ಅವರ ಹತ್ತಿರ ಯಾರು ಇರುತ್ತಾರೆಂದು ಕಾದುನೋಡ ಬೇಕಿದೆ. ಗುತ್ತಿಗೆದಾರರು ಯಾರೂ ಅಲ್ಲಿ ಉಳಿಯುವುದಿಲ್ಲ ಎಂದರು.
ವೀರಶೈವ ಸಮಾಜದವರಾರೂ ಅವರ ಹತ್ತಿರ ಉಳಿಯುವುದಿಲ್ಲ, ಅವರು ಆ ಸಮಾಜದ ಯಾರನ್ನು ಬೆಳೆಯಲು ಬಿಟ್ಟಿಲ್ಲ, ಇದು ನನ್ನ ಕೊನೆಯ ಚುನಾವಣೆ ನನಗೆ ಆಶೀರ್ವದಿಸಿ, ಒಂದು ಸಾವಿರ ಒಟ್ಟಿನಲ್ಲಿ ನಾನು ಸೋತಿದ್ದೆ ಅವು ಇವತ್ತು ವಾಪಸ್ ಬಂದಿದೆ. ಸ್ವಲ್ಪ ವ್ಯತ್ಯಾಸಗಳಾಗಿ ಕಳೆದ ಸಲ ನಾನು ಸೋತಿದ್ದೆ. ಈ ಸಲ ನನನ್ನು ಗೆಲ್ಲಿಸುತ್ತೀರಾ ಎಂಬ ನಂಬಿಕೆ ನನಗಿದೆ, ಎಲ್ಲ ಊರುಗಳಲ್ಲಿ ಪಕ್ಷಕ್ಕೆ ಸೇರುತ್ತಿದ್ದಾರೆ ಪಕ್ಷ ಬಿಟ್ಟಂತಹವರು ಮರಳಿದ್ದಾರೆ. ನಾನು 5 ಸಾವಿರ ಜನರಿಗೆ ಜಾಮೀನು ಮಂಜೂರು ಮಾಡಿದ್ದೇನೆ. ನನ್ನ ಮಾತು ಸ್ವಲ್ಪ ಒರಟು ಇಲ್ಲವಾದರೆ ಅಧಿಕಾರಿಗಳ ಹತ್ತಿರ ಕೆಲಸ ತೆಗೆಯುವುದಕ್ಕಾಗುವುದಿಲ್ಲ ಎಂದು ಹೇಳಿ ಮುಂದಿನ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.
ಕಾರ್ಯಕರ್ತರನ್ನುದ್ದೇಶಿಸಿ ಜೆ.ಡಿ.ಎಸ್. ರಾಜ್ಯ ಯುವ ಕಾರ್ಯದರ್ಶಿ ಚಂದ್ರೇಶ್ ಮಾತನಾಡಿ, ನೀವೆಲ್ಲ ಪಕ್ಷ ಸೇರುತ್ತಿರುವುದು ಸಂತಸದ ವಿಷಯವಾಗಿದೆ. ಜೆ.ಡಿ.ಎಸ್. ಪಕ್ಷ ಗಟ್ಟಿಯಾಗಿದೆ, ಕಾರ್ಯಕರ್ತರು ಪ್ರಾಮಾಣಿಕವಾಗಿದ್ದಾರೆ. ಇವತ್ತು ಕೃಷ್ಣಪ್ಪನವರು ಮಾಡಿದಂತಹ ಕೆಲಸಗಳು ಮಾತನಾಡುತ್ತಿವೆ, ಈ ಪಕ್ಷ ಶ್ರೀಮಂತರ ಪಕ್ಷವಲ್ಲ ರೈತರ ಪಕ್ಷ ತಾಲ್ಲೂಕಿನಾದ್ಯಂತ ಕೃಷ್ಣಪ್ಪನವರ ಮೇಲೆ ನಂಬಿಕೆ ವಿಶ್ವಾಸವನ್ನಿಟ್ಟು ವೀರಶೈವರು ಪಕ್ಷ ಸೇರುತ್ತಿದ್ದಾರೆ ಇದಕ್ಕಿಂತ ಇನ್ನೇನು ಬೇಕು ಗೆಲ್ಲಲಿಕ್ಕೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ್, ಡಿ.ಸಿ.ಸಿ. ಬ್ಯಾಂಕ್ ಮಾಜಿ ನಿರ್ದೇಶಕ ದೇವರಾಜ್, ಬಾಣಸಂದ್ರರಮೇಶ್, ಒಬ್ಬೆನಾಗಸಂದ್ರ ಸೋಮಣ್ಣ, ವೆಂಕಟಾಪುರ ಯೋಗೀಶ್, ಬಸವರಾಜು, ಚಿಕ್ಕಪುರ ಗಂಗಣ್ಣ, ವಿಜಯೇಂದ್ರ ಸೇರಿದಂತೆ ಹಲವರು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy