ಅಮರಾವತಿ, ಸೆ.22: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಎನ್‌ಟಿಆರ್ ಆರೋಗ್ಯ ವಿಶ್ವವಿದ್ಯಾಲಯಕ್ಕೆ ತಮ್ಮ ತಂದೆ ಮತ್ತು ದಿವಂಗತ ಮಾಜಿ ಮುಖ್ಯಮಂತ್ರಿ ಡಾ ವೈ ಎಸ್ ರಾಜಶೇಖರ್ ರೆಡ್ಡಿ ಅವರ ಹೆಸರನ್ನು ಮರುನಾಮಕರಣ ಮಾಡುವ ನಿರ್ಧಾರ ಬುಧವಾರ ರಾಜ್ಯದಲ್ಲಿ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ.
ತೆಲುಗು ದೇಶಂ ಪಕ್ಷ (ಟಿಡಿಪಿ) ಇಡೀ ದಿನ ಸದನದಲ್ಲಿ ಗದ್ದಲ ಸೃಷ್ಟಿಸಿತ್ತು. ಇದರ ನಡುವೆಯೂ ಎನ್‌ಟಿಆರ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಹೆಸರನ್ನು ಡಾ ವೈಎಸ್‌ಆರ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಎಂದು ಬದಲಿಸುವ ಮಸೂದೆಯನ್ನು ರಾಜ್ಯ ವಿಧಾನಸಭೆಯು ಅಂಗೀಕರಿಸಿತು.
ಬುಧವಾರ ರಾಜ್ಯ ಆರೋಗ್ಯ ಸಚಿವ ವಿಡದಾಳ ರಜಿನಿ ಮಸೂದೆಯನ್ನು ಮಂಡಿಸಿದರು. ಈ ನಿರ್ಧಾರದ ವಿರುದ್ಧ ಟಿಡಿಪಿ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿ ಪ್ರಶ್ನೋತ್ತರ ಕಲಾಪಕ್ಕೆ ಅಡ್ಡಿಪಡಿಸಿದರು.ವಿಧಾನಸಭೆಯು ಮಸೂದೆಯನ್ನು ಅಂಗೀಕರಿಸಿದ ಕೂಡಲೇ ಟಿಡಿಪಿ ಕಾರ್ಯಕರ್ತರು ವಿಜಯವಾಡದಲ್ಲಿ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿದರು. ಆರೋಗ್ಯ ವಿಶ್ವವಿದ್ಯಾಲಯದ ಬಳಿ ಧರಣಿ ನಡೆಸುವ ಮೂಲಕ ರಸ್ತೆಗಳನ್ನು ತಡೆದರು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.
ಮಸೂದೆಯ ಮೇಲಿನ ಚರ್ಚೆ ನಡೆಯುವಾಗ ಟಿಡಿಪಿ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು ಎಂದು ವಿಧಾನಸಭಾಧ್ಯಕ್ಷ ತಮ್ಮಿನೇನಿ ಸೀತಾರಾಂ ಹೇಳಿದ್ದಾರೆ. ಇದನ್ನು ವಿರೋಧಿಸಿದ ಟಿಡಿಪಿ ಸದಸ್ಯರು ಸಭಾಧ್ಯಕ್ಷರ ವೇದಿಕೆಗೆ ಮುತ್ತಿಗೆ ಹಾಕಿ, ಮಸೂದೆ ಪ್ರತಿಗಳನ್ನು ಹರಿದು ಹಾಕಿ ಸರ್ಕಾರ ಮಸೂದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಆದರೆ ಟಿಡಿಪಿ ಸದಸ್ಯರ ಘೋಷಣೆ ಮತ್ತು ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಪ್ರಶ್ನೋತ್ತರ ಅವಧಿಯನ್ನು ಮುಂದುವರಿಸಿದರು. ಪರಿಸ್ಥಿತಿ ಕೈಮೀರಿದಾಗ ಸ್ಪೀಕರ್ ಟಿಡಿಪಿ ಸದಸ್ಯರನ್ನು ಇಡೀ ದಿನ ಅಮಾನತುಗೊಳಿಸಿದರು.
ಮಸೂದೆ ಮೇಲಿನ ಸಂಕ್ಷಿಪ್ತ ಚರ್ಚೆಯಲ್ಲಿ ರಾಜ್ಯ ವಸತಿ ಸಚಿವ ಜೋಗಿ ರಮೇಶ್ ಅವರು, ಟಿಡಿಪಿ ನಾಯಕರಿಗೆ ಎನ್‌ಟಿಆರ್ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. “ಎನ್‌ಟಿಆರ್ ಬಗ್ಗೆ ಪ್ರೀತಿ ಮತ್ತು ಗೌರವ ಹೊಂದಿರುವವರು ಯಾರಾದರೂ ಇದ್ದರೆ ಅದು ಜಗನ್ ಮಾತ್ರ, ವಿಜಯವಾಡ ಜಿಲ್ಲೆಗೆ ಎನ್‌ಟಿಆರ್ ಅವರ ಹೆಸರನ್ನು ಇಟ್ಟವರು ಜಗನ್” ಎಂದು ರಮೇಶ್ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಜಗನ್ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಮರುನಾಮಕರಣ ಮಾಡುವ ತಮ್ಮ ಸರ್ಕಾರದ ನಿರ್ಧಾರವನ್ನು ಬಲವಾಗಿ ಚರ್ಚೆಗೆ ನೀಡಿದ ಉತ್ತರದಲ್ಲಿ ಸಮರ್ಥಿಸಿಕೊಂಡರು. ಆಂಧ್ರಪ್ರದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಪ್ರವರ್ತಕರಾಗಿದ್ದ ದಿವಂಗತ ವೈಎಸ್‌ಆರ್‌ಗೆ ಅರ್ಹ ಶ್ರೇಯಸ್ಸನ್ನು ನೀಡುವುದು ಉತ್ತಮ ಚಿಂತನೆ ಮತ್ತು ಇದರಿಂದ ಎನ್‌ಟಿಆರ್‌ಗೆ ಅಗೌರವ ತೋರಿಸಲಿಲ್ಲ” ಎಂದು ಹೇಳಿದ್ದಾರೆ.
”ಅರ್ಹರಿಗೆ ಮನ್ನಣೆ ನೀಡಬೇಕು. ರಾಜಕೀಯಕ್ಕೆ ಸೇರುವ ಮೊದಲು ವೈದ್ಯಕೀಯ ವೃತ್ತಿಯಲ್ಲಿದ್ದ ವೈಎಸ್‌ಆರ್ ಅವರು ಆರೋಗ್ಯ ಶ್ರೀಯಂತಹ ವಿನೂತನ ಯೋಜನೆಯೊಂದಿಗೆ ಸಾಮಾನ್ಯ ಜನರಿಗೆ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ನೀಡುವ ಪ್ರವರ್ತಕರಾಗಿದ್ದರು. ಜೊತೆಗೆ ಆಂಬ್ಯುಲೆನ್ಸ್ ಸೇವೆಗಳನ್ನು ಪರಿಚಯಿಸಿದ್ದಾರೆ” ಎಂದು ಜಗನ್ ಹೇಳಿದ್ದಾರೆ.
“ಆಂಧ್ರಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಹನ್ನೊಂದು ವೈದ್ಯಕೀಯ ಕಾಲೇಜುಗಳಲ್ಲಿ ಒಂಬತ್ತು ಟಿಡಿಪಿ ರಚನೆಗೆ ಮುಂಚೆಯೇ ಕಾರ್ಯನಿರ್ವಹಿಸುತ್ತಿದ್ದವು. ಉಳಿದವು ವೈಎಸ್ಆರ್ ಅವರ ಕಾರ್ಯಗಳಿಂದ ಸ್ಥಾಪಿಸಲ್ಪಟ್ಟಿವೆ. ನಾವು 2019 ರಲ್ಲಿ ಅಧಿಕಾರಕ್ಕೆ ಬಂದ ನಂತರ, ನಾವು ಆರೋಗ್ಯ ಕ್ಷೇತ್ರಕ್ಕೆ ಪೂರಕವಾಗಿ 17 ವೈದ್ಯಕೀಯ ಕಾಲೇಜುಗಳನ್ನು ಸೇರಿಸಿದ್ದೇವೆ. ಈ ಕೆಲಸಗಳು ಆರೋಗ್ಯ ವಿಶ್ವವಿದ್ಯಾನಿಲಯವನ್ನು ಮರುನಾಮಕರಣ ಮಾಡುವ ಅರ್ಹತೆ ಪಡೆದಿದೆ. ನಮಗೆ ಎನ್‌ಟಿಆರ್ ಬಗ್ಗೆ ಗೌರವವಿದೆ, ಅದಕ್ಕಾಗಿಯೇ ನಾವು ಒಂದು ಜಿಲ್ಲೆಗೆ ಎನ್‌ಟಿಆರ್ ಜಿಲ್ಲೆ ಎಂದು ಹೆಸರಿಸಿದ್ದೇವೆ” ಎಂದಿದ್ದಾರೆ.
ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು, 1986 ರಲ್ಲಿ ಎನ್‌ಟಿಆರ್ ಆಡಳಿತದಲ್ಲಿ ಸ್ಥಾಪಿಸಲಾದ ಆರೋಗ್ಯ ವಿಶ್ವವಿದ್ಯಾಲಯ ವೈಎಸ್‌ಆರ್ ಹೇಗೆ ಸಂಬಂಧಿಸಿದೆ ಎಂದು ಆಶ್ಚರ್ಯಪಟ್ಟರು. “ಇದು ಎನ್‌ಟಿಆರ್ ಅವರ ಕೂಸು. ಅವರು ವೈದ್ಯಕೀಯ ಶಿಕ್ಷಣಕ್ಕಾಗಿ ಪ್ರತ್ಯೇಕ ಸಂಸ್ಥೆಯನ್ನು ಬಯಸಿದ್ದರು. ಅವರ ನಿಧನದ ನಂತರ, ಆಗಿನ ಟಿಡಿಪಿ ಸರ್ಕಾರವು 1998 ರಲ್ಲಿ ವಿಶ್ವವಿದ್ಯಾನಿಲಯಕ್ಕೆ ಎನ್‌ಟಿಆರ್ ಅವರ ಹೆಸರನ್ನು ಇಟ್ಟಿತ್ತು” ಎಂದಿದ್ದಾರೆ.
“ದಿವಂಗತ ವೈಎಸ್‌ಆರ್ ಸೇರಿದಂತೆ ಸತತ ಸರ್ಕಾರಗಳು ರಾಷ್ಟ್ರೀಯ ಮನ್ನಣೆ ಗಳಿಸಿದ ವಿಶ್ವವಿದ್ಯಾಲಯದ ಹೆಸರನ್ನು ಬದಲಾಯಿಸುವ ಬಗ್ಗೆ ಎಂದಿಗೂ ಯೋಚಿಸಲಿಲ್ಲ. ಎನ್‌ಟಿಆರ್ ಹೆಲ್ತ್ ಯೂನಿವರ್ಸಿಟಿ ಸ್ಥಾಪನೆಯಾದ 36 ವರ್ಷಗಳ ನಂತರ ಈಗ ಅದರ ಹೆಸರನ್ನು ಬದಲಾಯಿಸುವ ಬಗ್ಗೆ ಯೋಚಿಸುವುದು ತರ್ಕಬದ್ಧವಲ್ಲ” ಎಂದು ಸರ್ಕಾರವನ್ನು ಟೀಕಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಸೋಮು ವೀರರಾಜು ಮತ್ತು ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಪಿ ಮಧು ಅವರಂತಹ ಹಲವಾರು ನಾಯಕರು ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ.ಇದೇ ವೇಳೆ ಮಾಜಿ ಸಂಸದ ಹಾಗೂ ರಾಜ್ಯ ಅಧಿಕೃತ ಭಾಷಾ ಆಯೋಗದ ಅಧ್ಯಕ್ಷ ಡಾ.ಯರ್ಲಗಡ್ಡ ಲಕ್ಷ್ಮೀ ಪ್ರಸಾದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. “ನಾನು ಜಗನ್ ಅವರನ್ನು ಇನ್ನೂ ನಾಯಕ ಎಂದು ಪರಿಗಣಿಸಿದ್ದರೂ, ಆರೋಗ್ಯ ವಿಶ್ವವಿದ್ಯಾಲಯದ ಎನ್‌ಟಿಆರ್ ಹೆಸರನ್ನು ಕೈಬಿಡುವ ಅವರ ನಿರ್ಧಾರದಿಂದ ನನಗೆ ನೋವಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy