ಸರಗೂರು: ಮೇವು ಅರಸಿ ಕಾಡಿನಿಂದ ಹೊರ ಬಂದ ಹೆಣ್ಣಾನೆಯೊಂದು ಕಾಡು ಪ್ರಾಣಿಗಳ ಹಾವಳಿ ತಡೆಗೆ ಜಮೀನಿನಲ್ಲಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿಗೆ ಸಿಲುಕಿ ಮೃತಪಟ್ಟಿದೆ.
ತಾಲೂಕಿನ ದೊಡ್ಡಬರಗಿ ಗ್ರಾಮದ ಗೋಪಾಲ ಎಂಬುವರು ತಮ್ಮ ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಅಳವಡಿಸಿದ್ದು, ಗುರುವಾರ ರಾತ್ರಿ ಮೇವು ಅರಸಿ ಬಂದ ಕಾಡಾನೆಗೆ ವಿದ್ಯುತ್ ತಂತಿ ತಗುಲಿ ಸಿಲುಕಿಕೊಂಡಿದೆ. ಇದರಿಂದ ಗಾಬರಿಗೊಂಡ ಆನೆ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ವಿಫಲವಾಗಿದ್ದು, ಸ್ಥಳದಲ್ಲೆ ಸಾವನ್ನಪ್ಪಿದೆ ಎನ್ನಲಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹೆಡಿಯಾಲ ಉಪ ವಿಭಾಗದ ಹೆಡಿಯಾಲ ವಲಯ ಅಂಚಿನಲ್ಲಿರುವ ಸರಗೂರು ಪ್ರಾದೇಶಿಕ ವಲಯ ವ್ಯಾಪ್ತಿಯ ಚಿಕ್ಕಬರಗಿ ಶಾಖೆಯ ಹೆಬ್ಬಳ್ಳ ಗಸ್ತಿನ ದೊಡ್ಡಬರಗಿ ಗ್ರಾಮದ ಜಮೀನಿನಲ್ಲಿ ಸುಮಾರು 25ರಿಂದ 30 ವರ್ಷ ವಯಸ್ಸಿನ ಹೆಣ್ಣು ಕಾಡಾನೆಯೊಂದು ವಿದ್ಯುತ್ ತಂತಿಗೆ ಸಿಲುಕಿ ಸಾವನ್ನಪ್ಪಿದ ವಿಷಯ ತಿಳಿದ ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ಹೆಣ್ಣು ಕಾಡಾನೆಯೊಂದು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರುವುದು ಕಂಡು ಬಂದಿದೆ. ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಯಿತು.
ನಂತರ ಮೃತ ಹೆಣ್ಣಾನೆಯ ಮರಣೋತ್ತರ ಪರೀಕ್ಷೆ ನಡೆಸಿ, ದೇಹದ ಕೆಲ ಭಾಗದ ತುಂಡುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಸ್ಥಳದಲ್ಲೇ ಹೆಣ್ಣು ಕಾಡಾನೆ ಮೃತದೇಹವನ್ನು ಗುಂಡಿಯನ್ನು ತೆಗೆದು ಹೂಳಲಾಯಿತು. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ದ ಕ್ಷೇತ್ರ ನಿರ್ದೇಶಕ, ಅರಣ್ಯ ಸಂರಕ್ಣಣಾಧಿಕಾರಿ ಡಾ.ರಮೇಶ್ ಕುಮಾರ್, ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ, ಎಸಿಎಫ್ ಪರಮೇಶ್, ಹೆಡಿಯಾಲ ವಲಯ ಅಧಿಕಾರಿ ನಾರಾಯಣ್, ಸೆಸ್ಕಾಂ ಅಧಿಕಾರಿಗಳು, ಪೊಲೀಸರು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1


