ಶಿರಾ: ತಾಲ್ಲೂಕಿನ ಗೌಡಗೆರೆ ಹೋಬಳಿಯ ಹೊನ್ನೇನಹಳ್ಳಿಯಲ್ಲಿ ತೀವ್ರಗೊಂಡಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಬುಧವಾರ ಗ್ರಾಮಸ್ಥರು ಕೊಳವೆಬಾವಿ ಕೊರೆಯುವ ವಾಹನವನ್ನು ತಡೆದು ಪ್ರತಿಭಟನೆ ನಡೆಸಿದರು.
ಹೊನ್ನೇನಹಳ್ಳಿಯಲ್ಲಿ ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಗ್ರಾಮಸ್ಥರು ಈ ಬಗ್ಗೆ ಹಲವು ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಯುಗಾದಿ ಹಬ್ಬದ ಸಂದರ್ಭದಲ್ಲೂ ನೀರಿಲ್ಲದೆ ಪರದಾಡುವಂತಾಗಿತ್ತು. ಗ್ರಾಮಸ್ಥರು ಅನಿವಾರ್ಯವಾಗಿ ಖಾಸಗಿ ವ್ಯಕ್ತಿಗಳ ಜಮೀನುಗಳಿಗೆ ತೆರಳಿ ನೀರು ತರುತ್ತಿದ್ದರು.
ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಇತ್ತೀಚೆಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಇದರ ಫಲವಾಗಿ ಬುಧವಾರ ಹೊಸ ಕೊಳವೆಬಾವಿ ಕೊರೆಸಲು ಅಧಿಕಾರಿಗಳು ವಾಹನವನ್ನು ಕಳುಹಿಸಿಕೊಟ್ಟಿದ್ದರು.
ಸುಮಾರು 1,100 ಅಡಿಗಳಷ್ಟು ಆಳಕ್ಕೆ ಕೊಳವೆಬಾವಿ ಕೊರೆದರೂ ನೀರು ಸಿಗದ ಕಾರಣ, ಅಧಿಕಾರಿಗಳು ವಾಹನವನ್ನು ವಾಪಸ್ ಕಳುಹಿಸಲು ಮುಂದಾದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ವಾಹನವನ್ನು ತಡೆದು ನಿಲ್ಲಿಸಿದರು. “ನಮಗೆ ಕುಡಿಯುವ ನೀರು ಅತ್ಯಗತ್ಯವಾಗಿದ್ದು, ಮತ್ತೊಂದು ಹೊಸ ಕೊಳವೆಬಾವಿ ಕೊರೆಯಲೇಬೇಕು” ಎಂದು ಪಟ್ಟು ಹಿಡಿದು ಸ್ಥಳದಲ್ಲೇ ಪ್ರತಿಭಟನೆ ಕುಳಿತರು.
ಈಗಾಗಲೇ ಎರಡು ಕಡೆ ಕೊಳವೆಬಾವಿ ಕೊರೆದಿದ್ದು, ಎರಡರಲ್ಲೂ ನೀರು ಬಾರದೆ ವಿಫಲವಾಗಿದೆ. ಹೊಸದಾಗಿ ಮತ್ತೊಂದು ಕಡೆ ಕೊರೆಯಲು ಮೇಲಧಿಕಾರಿಗಳ ಅನುಮತಿ ಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಗ್ರಾಮಸ್ಥರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
ಗ್ರಾಮದಲ್ಲಿ ನೀರಿನ ಬರ ಇಷ್ಟೊಂದು ತೀವ್ರವಾಗಿದ್ದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


