ಮಂಡ್ಯ: ಅದ್ದೂರಿ ಆಡಂಬರವಿಲ್ಲ, ಕೇಕ್ ಕತ್ತರಿಸಿ ಪಟಾಕಿ ಸಿಡಿಸಲಿಲ್ಲ, ಕಟೌಟ್ ಪ್ಲೆಕ್ಸ್ ಹಾಕಲಿಲ್ಲ, ಅಚ್ಚಹಸಿರಿನ ಸುಂದರ ವಾತಾವರಣದಲ್ಲಿ ಸುಮಧುರ ವಚನಗಾಯನದೊಂದಿಗೆ ಹಿರಿಯ ನಾಗರಿಕರು ವಾಯುವಿಹಾರಿಗಳ ಜೊತೆಗೂಡಿ ಸಸಿನೆಟ್ಟು ಪುಸ್ತಕ ವಿತರಿಸಿ ಸರಳವಾಗಿ ಮಾದರಿ ಜನ್ಮದಿನ ಆಚರಣೆ ಮಾಡಲಾಯಿತು.
ಈ ಅಪರೂಪದ ಜನ್ಮದಿನಕ್ಕೆ ಮಂಡ್ಯ ನಗರದ ಪರಮಪೂಜ್ಯ ಡಾ.ಶ್ರೀಶಿವಕುಮಾರ ಮಹಾಸ್ವಾಮೀಜಿಯವರ ಭಾನುವಾರ ಸಂಜೆ ದೇವರವನ ಸಾಕ್ಷಿಯಾಯಿತು.
ಕಾಯಕಯೋಗಿ ಫೌಂಡೇಶನ್ ಹಾಗೂ ಸಿದ್ದಗಂಗಾ ಶ್ರೀ ಸೇವಾಸಮಿತಿ ಆಯೋಜಿಸಿದ್ದ ಎಲ್ಲರೊಳಗೆ ಒಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜಮುಖಿ ಚಿಂತಕ ವಿನಯ್ ಅವರ 36ನೇ ಜನ್ಮದಿನಾಚರಣೆ ಪ್ರಯುಕ್ತದ ‘ ದಾಸೋಹ’ ಕಾರ್ಯಕ್ರಮ ವಿನೂತನವಾಗಿತ್ತು.
ಉದ್ಯಾನವನದಲ್ಲಿ ಸಸಿನೆಟ್ಟು ಅಮೂಲ್ಯವಾದ ಪುಸ್ತಕಗಳನ್ನು ನಾಗರೀಕರಿಗೆ ವಿತರಿಸಿ ದಾಸೋಹಕ್ಕೆ ಚಾಲನೆ ನೀಡಿ ವಿನಯ್ ಮಾತನಾಡಿದರು.
ಸಿದ್ದಗಂಗಾ ಶ್ರೀಗಳ ಅನ್ನ, ಅರಿವು, ಆಸರೆಯಂತಹ ತ್ರಿವಿಧ ದಾಸೋಹ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅಂತಹ ಶತಾಯುಷಿ ಸಂತರ ಸೇವಾ ಮಾರ್ಗ ನನಗೆ ಸ್ಪೂರ್ತಿದಾಯಕ ಎಂದರು.
ಹಸಿದವರಿಗೆ ಅನ್ನ ನೀಡುವುದೇ ಧರ್ಮ ಎಂಬ ಸತ್ಯ ಸಂದೇಶವನ್ನು ಸಾರಿದ ಪರಮಪೂಜ್ಯರ ಉದ್ಯಾನವನದಲ್ಲಿ ಸಸಿನೆಟ್ಟು ಹಸಿರೀಕರಣಕ್ಕೆ ಅಳಿಲುಸೇವೆ ಸಲ್ಲಿಸಿರುವುದು ತೃಪ್ತಿ ತಂದಿದೆ. ಪುಸ್ತಕದ ಮೂಲಕ ಮಸ್ತಕದ ಜ್ಞಾನ ವೃದ್ದಿಯಾಗಬೇಕು. ವಿಶೇಷವಾಗಿ ಮಕ್ಕಳು ಮೊಬೈಲ್ ಬಿಟ್ಟು ಪುಸ್ತಕಗಳನ್ನು ಓದುವತ್ತ ಆಸಕ್ತಿ ತೋರಿಸಬೇಕೆಂದರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಜನ್ಮದಿನಗಳು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಆಚರಣೆಯಾದಾಗ ಜನಮಾನಸದಲ್ಲಿ ಅಂತಹ ವ್ಯಕ್ತಿಗಳು ಶಾಶ್ವತವಾಗಿ ನೆಲೆಸುತ್ತಾರೆ. ವಿದೇಶಿಗರ ಕೇಕ್ ಸಂಸ್ಕೃತಿಯನ್ನು ಬಿಟ್ಟು ಪ್ರತಿಯೊಬ್ಬರೂ ತಮ್ಮ ಹುಟ್ಟಿದ ದಿನದಂದು ಒಂದೊಂದು ಸಸಿನೆಟ್ಟು ಕಾಪಾಡಿದರೆ ಜೀವನ ಸಾರ್ಥಕ, ಪರಿಸರಕ್ಕೆ ಪೂರಕ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಶಿವರುದ್ರಪ್ಪ ಮಾತನಾಡಿ, ಆಧುನೀಕತೆ ಅಬ್ಬರದಲ್ಲಿ ಸಿಲುಕಿರುವ ಯುವಸಮುದಾಯ ನಮ್ಮ ಸಂಸ್ಕೃತಿ, ಪರಂಪರೆಯನ್ನು ಮರೆತಿರುವ ಈ ದಿನಮಾನದಲ್ಲಿ ಅನ್ನದಾಸೊಹ, ಪರಿಸರ ಹಾಗೂ ಪುಸ್ತಕಗಳ ವಿತರಣೆ ಮೂಲಕ ಸಮಾಜಮುಖಿಯಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ವಿನಯ್ ಮಾದರಿಯಾಗಿದ್ದಾರೆ ಎಂದು ಶುಭಹಾರೈಸಿದರು.
ಕಾಯಕಯೋಗಿ ಫೌಂಡೇಶನ್ ವತಿಯಿಂದ ವಿನಯ್ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಸಾಪ ಮಾಜಿ ಅಧ್ಯಕ್ಷ ಧರಣೇಂದ್ರಯ್ಯ, ಬಿಜೆಪಿ ಮುಖಂಡ ಜಿ.ಮಹಾಂತಪ್ಪ, ಹಿರಿಯ ಪತ್ರಕರ್ತ ಬಸವೇಗೌಡ, ನಗರಸಭೆ ಮಾಜಿ ಸದಸ್ಯೆ ಕೆ.ವಿದ್ಯಾಮಂಜುನಾಥ್, ಎಂ.ಅರ್.ಮಂಜುನಾಥ್, ಸಮಾಜಸೇವಕ ಡಾ.ಮಲ್ಲಿಕಾರ್ಜುನಯ್ಯ, ಕೆರಗೋಡು ಮಹೇಸ್, ಹರ್ಷಿತ್, ರಾಜೂಗೌಡ, ಶಿವಲಿಂಗು ಹಾಗೂ ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು. ಖ್ಯಾತ ಗಾಯಕ ಗೊರವಾಲೆ ರುದ್ರಪ್ಪ ತಂಡದವರು ತತ್ವಪದ ಹಾಗೂ ವಚನಗಾಯನ ನಡೆಸಿಕೊಟ್ಟರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


