ಮಂಡ್ಯ: ರಾಜ್ಯದ ಎರಡು ಪ್ರಮುಖ ನಗರಗಳಾದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ ಅಡಿಗಲ್ಲು ಹಾಕಿದ್ದು ನಾವೇ. ಇಂದು ಹೆದ್ದಾರಿ ಉದ್ಘಾಟನೆ ಮಾಡುತ್ತಿರುವುದು ನಾವೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಪಕ್ಷಗಳಿಗೆ ತಿರುಗೇಟು ನೀಡಿದರು.
ಪ್ರಧಾನಮಂತ್ರಿಗಳ ಮಂಡ್ಯ ಭೇಟಿ ಹಾಗೂ ಎಕ್ಸಪ್ರೆಸ್‌ವೇ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ಭಾನುವಾರ ನಡೆದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದ 2015ರಲ್ಲಿ ಹೆದ್ದಾರಿಯ ಡಿಪಿಆರ್ ಸಿದ್ಧವಾಯಿತು. 2016ಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರ್ಗಾವಣೆಯಾಯಿತು. ಅಂದಾಜು ವೆಚ್ಚ ಹೆಚ್ಚಾಗಿದ್ದರಿಂದ ಅದು ಮತ್ತೆ ಮೋದಿ ಅವರ ಬಳಿಗೆ ಹೋಯಿತು. ತಡ ಮಾಡದೆ ಮಂಜೂರಾತಿ ನೀಡಿದರು. ಹೀಗಾಗಿ ಈ ದಶಪಥ ಹೆದ್ದಾರಿ ನಮ್ಮ ಕೊಡುಗೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಬೊಮ್ಮಾಯಿ ಟಾಂಗ್ ನೀಡಿದರು.
ಬೆಂಗಳೂರು-ಮೈಸೂರು ಹೆದ್ದಾರಿಯು 2019ರಲ್ಲಿ ಶಂಕುಸ್ಥಾಪನೆಯಾಗಿ 2023ರಲ್ಲಿ ಉದ್ಘಾಟನೆ ಆಗುತ್ತಿದೆ. ಯೋಜನೆ ಆರಂಭದಿಂದ ಹಿಡಿದು ಕೊನೆಯವರೆಗೂ ಯೋಜನೆಯನ್ನು ಮುನ್ನಡೆಸಿದ್ದು ನಾವೇ ಎಂದು ಗಟ್ಟಿ ಧ್ವನಿಯಲ್ಲಿ ಮುಖ್ಯಮಂತ್ರಿಗಳು ಪುನರುಚ್ಚರಿಸಿದರು.
ಇದರ ಮಧ್ಯೆ ಕಾಂಗ್ರೆಸ್‌ನವರು ಇದು ನಮ್ಮ ಕೊಡುಗೆ ಎನ್ನುತ್ತಿದ್ದರೆ, ಜೆಡಿಎಸ್‌ನವರು ಪತ್ರಿಕಾ ಜಾಹೀರಾತು ನೀಡಿ ಇದು ನಮ್ಮ ಯೋಜನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ನಿಜವಾಗಿಯೂ ಯೋಜನೆ ಯಾರದ್ದು ಎನ್ನುವುದು ಜನರಿಗೆ ಗೊತ್ತಿದೆ ಎಂದು ಅವರು ಸಷ್ಟಪಡಿಸಿದರು.
ನಿರ್ದಿಷ್ಟ ಕಾಲಮಿತಿಯೊಳಗೆ ಹೆದ್ದಾರಿ ಯೋಜನೆ ಆರಂಭಿಸಿ ಪೂರ್ಣಗೊಳಿಸುವುದು ಪ್ರಧಾನಿ ನರೇಂದ್ರಮೋದಿ ಅವರ ಆಡಳಿತ ಶೈಲಿ ಮತ್ತು ಪದ್ಧತಿ. ಯೋಜನೆಯಲ್ಲಿ ಎಲ್ಲಿಯೂ ಅವ್ಯವಹಾರಕ್ಕೆ ಅವಕಾಶವಾಗದಂತೆ ಪಾರದರ್ಶಕವಾಗಿ ಜಾರಿಗೊಳಿಸುವಂತಹ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಸರ್ಕಾರದ ಕಾರ್ಯಕ್ಷಮತೆ ಬಗ್ಗೆ ಬಣ್ಣಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


