ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಇಂದಿನಿಂದ ಪಕ್ಷದ ನಾಯಕರುಗಳು ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಬಿಜೆಪಿ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್, ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ನೇತೃತ್ವದ ಮೂರು ತಂಡಗಳಲ್ಲಿ ಬಿಜೆಪಿಯ ಪ್ರಮುಖ ಮುಖಂಡರುಗಳು, ಶಾಸಕರು, ಸಂಸದರು ಪಕ್ಷ ಬಲವರ್ಧನೆಗೆ ಇಂದಿನಿಂದ ಏ. 28ರವರೆಗೆ ರಾಜ್ಯಾದ್ಯಂತ ಪ್ರವಾಸ ನಡೆಸಿ ಸಭೆ ಸಮಾವೇಶಗಳಲ್ಲಿ ಭಾಗಿಯಾಗುವರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ, ಕೇಂದ್ರ ಸಚಿವ ಹ್ರಹ್ಲಾದ್ ಜೋಷಿ, ಸಚಿವರಾದ ಡಾ. ಅಶ್ವತ್ಥ ನಾರಾಯಣ, ಬಿ. ಶ್ರೀರಾಮುಲು, ಬಿಜೆಪಿ ರಾಜ್ಯ ಉಪಾಧ್ಯಕ್ಷರುಗಳಾದ ಬಿ.ವೈ ವಿಜಯೇಂದ್ರ,, ಲಕ್ಷಣ ಸವದಿ, ನಿರ್ಮಲ್‌ಕುಮಾರ್ ಸುರಾನಾ, ನಯನಾ ಗಣೇಶ್ ಇವರುಗಳಿದ್ದು, ರಾಜ್ಯ ಕಾರ್ಯದರ್ಶಿ ವಿನಯ್ ಬಿದಿರೆ ಈ ತಂಡದ ಸಂಯೋಜಕರಾಗಿದ್ದು, ಈ ತಂಡ ಇಂದು ಮತ್ತು ನಾಳೆ ಮಂಗಳೂರು ವಿಭಾಗದಲ್ಲಿ ಸರಣಿ ಸಭೆ ನಡೆಸಲಿದ್ದು, 19, 20 ರಂದು ಶಿವಮೊಗ್ಗ ವಿಭಾಗದಲ್ಲಿ, 21, 22 ರಂದು ಕಲಬುರಗಿ ವಿಭಾಗದಲ್ಲಿ ಪ್ರವಾಸ ಕೈಗೊಳ್ಳಲಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ನೇತೃತ್ವದ ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ರಾಜ್ಯ ಉಪಾಧ್ಯಕ್ಷರಾದ ಮಾಲೀಕಯ್ಯ ಗುತ್ತೇದಾರ್, ಎಂ. ಶಂಕರಪ್ಪ, ಎಂ.ಬಿ ನಂದೀಶ್ ಇವರುಗಳಿದ್ದು, ರಾಜ್ಯಕಾರ್ಯದರ್ಶಿ ಕೆ.ಎಸ್ ನವೀನ್, ತಂಡದ ಸಂಯೋಜಕರಾಗಿದ್ದು, ಈ ತಂಡ ಇಂದು ಮತ್ತು ನಾಳೆ ಬೆಳಗಾವಿ ವಿಭಾಗದಲ್ಲಿ ಸರಣಿ ಸಭೆ ನಡೆಸಿ 19 ಮತ್ತು 20 ರಂದು ದಾವಣಗೆರೆ ವಿಭಾಗದಲ್ಲಿ, 21, 22 ರಂದು ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ಪ್ರವಾಸ ಕೈಗೊಳ್ಳಲಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್ ಕಟೀಲು ನೇತೃತ್ವದ ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ಶೇಟ್ಟರ್, ಸಚಿವರಾದ ವಿ. ಸೋಮಣ್ಣ, ಕೆ.ಎಸ್ ಈಶ್ವರಪ್ಪ, ರಾಜ್ಯ ಉಪಾಧ್ಯಕ್ಷರಾದ ಪ್ರತಾಪ್‌ಸಿಂಹ, ತೇಜಸ್ವಿನಿ ಅನಂತ್‌ಕುಮಾರ್, ಎಂ. ರಾಜೇಂದ್ರ ಇವರುಗಳಿದ್ದು, ರಾಜ್ಯಕಾರ್ಯದರ್ಶಿ ಮುನಿರಾಜುಗೌಡ ತಂಡದ ಸಂಯೋಜಕರಾಗಿದ್ದಾರೆ. ಈ ತಂಡ ಇಂದು ಮತ್ತು ನಾಳೆ ಮೈಸೂರು ವಿಭಾಗದಲ್ಲಿ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ನಡೆಸಿ, ಏ.19 ಮತ್ತು 20ರಂದು ಬಳ್ಳಾರಿ ವಿಭಾಗ, 21, 22 ಧಾರವಾಡ ವಿಭಾಗ, 23, 24 ಬೆಂಗಳೂರು ನಗರ ವಿಭಾಗದಲ್ಲಿ ಪ್ರವಾಸ ಕೈಗೊಳ್ಳಲಿದೆ.
ವರದಿ: ಆಂಟೋನಿ


