ಕುಂದಗೋಳ: ಭರತ ಖಂಡದಲ್ಲಿ ಜೈನ ಧರ್ಮ ಪುರಾತನವಾದ ಧರ್ಮವಾಗಿದ್ದು ಅದರ ಸಂಸ್ಕೃತಿ –ಸಂಸ್ಕಾರಗಳು ಪ್ರಾಚೀನವಾಗಿದ್ದು, ಇಂತಹ ಜಿನಬಿಂಬದ ದರ್ಶನ ಹಾಗೂ ಮಾನ ಸ್ತಂಭದ ಪ್ರತಿಷ್ಠಾಪನೆಯಿಂದ ಆತ್ಮ ಶುದ್ಧಿ ಸಾಧ್ಯವಾಗಲಿದೆ ಎಂದು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನ ಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಅವರಿಂದು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುಡಿಗೇರಿ ಗ್ರಾಮದ ಶ್ರೀ ಶಾಂತಿನಾಥ ಸ್ವಾಮಿ ಜೈನ್ ಟ್ರಸ್ಟ್ ವತಿಯಿಂದ ನೂತನ ಮಾನ ಸ್ತಂಭ ಪ್ರತಿಷ್ಠಾಪನ ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜೈನ ಬಸದಿ ಎದುರು ಮಾನಸ್ತಂಭ ನಿರ್ಮಾಣ ಮಾಡುವ ಉದ್ದೇಶ ಮಾನ ಕಷಾಯದಿಂದ ಮುಕ್ತಗೊಂಡು ಜಿನಬಿಂಬದ ದರ್ಶನ ಮಾಡಿದಾಗ ಆತ್ಮಶುದ್ಧಿಗೊಳ್ಳುತ್ತದೆ. ಈ ಹಿಂದೆ ಗುಡಿಗೇರಿ ಸುತ್ತಮುತ್ತಲ ಪ್ರದೇಶದಲ್ಲಿ 72 ಜಿನಮಂದಿರಗಳಿದ್ದವು ಈಗ ನಶಿಸಿ ಹೋಗಿವೆ ಜಿನಮಂದಿರ ನಿರ್ಮಾಣ ಕಾರ್ಯ ಸಂತಸ ತಂದಿದೆ ಎಂದರು.
ನಾನು ಎಂಬ ಅಹಂ ತೊರೆದಾಗ ಆತ್ಮ ಶುದ್ಧ ಗೊಳ್ಳುತ್ತದೆ. ಪ್ರತಿಯೊಬ್ಬರು ಧರ್ಮ ರಕ್ಷಣೆ ಧರ್ಮದ ಮಾರ್ಗದಲ್ಲಿ ನಡೆಯಬೇಕೆಂದ ಭಟ್ಟರಕ ಶ್ರೀಗಳು, ಈ ಜಿನಮಂದಿರದ ಪಂಚಕಲ್ಯಾಣ ಶ್ರದ್ಧಾ ಭಕ್ತಿಯಿಂದ ನೆರವೇರಿಸೋಣ ಎಂದರು.
ಪಾವನ ಸನ್ನಿಧಿಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕೊಲ್ಲಾಪುರ ದಿಗಂಬರ ಜೈನಮಠದ ಸ್ವಸ್ತಿ ಶ್ರೀ ಲಕ್ಷ್ಮಿ ಭಟ್ಟರಕ ಪಟ್ಟಾಚಾರ್ಯ ಶ್ರೀಗಳು, ಪಾಪ ಪುಣ್ಯಗಳ ಬಗ್ಗೆ ಅರಿತಾಗ ಜೀವನ ಸನ್ಮಾರ್ಗದಲ್ಲಿ ಸಾಗುತ್ತದೆ ಪ್ರತಿನಿತ್ಯವೂ ತಿಳಿದೋ, ತಿಳಿಯದೆಯೋ ಪಾಪ ಕ್ರಮಗಳನ್ನು ಬಂಧನ ಮಾಡಿಕೊಳ್ಳುತ್ತೇವೆ, ಪುಣ್ಯ ಮಾರ್ಗ ಹಾಗೂ ತೀರ್ಥಂಕರ ಬೋಧನಾ ಮಾರ್ಗದಲ್ಲಿ ನಡೆಯಬೇಕು ಎಂದ ಭಟ್ಟರಕ ಶ್ರೀಗಳು , ಪಂಚಾಮೃತ ಅಭಿಷೇಕಗಳೊಂದಿಗೆ ಮಾನ ಸ್ತಂಭ ಪ್ರತಿಷ್ಠಾಪನ ವಿಧಾನ ಸಂತಸ ತಂದಿದೆ ಎಂದರು.
ಮಾನಸ್ತಂಭದ ದಾನಿಗಳಾದ ಸುಭಾಷ್ ಅಕ್ಕಿ ಹಾಗೂ ಪರಿವಾರದವರನ್ನು ಶ್ರೀಗಳು ಇದೇ ವೇಳೆ ಸನ್ಮಾನಿಸಿದರು. ಬೆಳಗ್ಗೆ ನೂತನ ಮಾನಸ್ತಂಭ ದ ಪ್ರತಿಷ್ಠಾಪನ ಪೂಜೆ ಆರಾಧನೆಗಳು ನಡೆದವು. ಪ್ರತಿಷ್ಠಾಪನಾಚಾರ್ಯ ಶ್ರೀ ಮಂದಾರ ಪಂಡಿತರು ಹಾಗೂ ಸ್ಥಳೀಯ ಪುರೋಹಿತರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಜೈನ ಸಮಾಜದ ಅಧ್ಯಕ್ಷ ದಯಾನಂದ ಕುಂದೂರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖಂಡ ಜೈನ ಮುಖಂಡರಾದ ರಾಮಚಂದ್ರ ಮುರಗಿ, ಎಂ.ಜೆ.ಅಕ್ಕಿ , ಭರತೇಶ್ ಸೋಮಾಪುರ, ಶೀತಲ್ ಮುರಗಿ ,ಪಿ.ಜಿ . ಅಕ್ಕಿ, ದಯಾನಂದ ಪಾಟೀಲ್, ಬಾಬು ಸೋಮಪುರ, ಶ್ರೀಪಾಲ ಚಿವಟಿ, ಪ್ರಮೋದ್ ದುಂಡಸಿ, ಪದ್ಮರಾಜು ಕುಂದೂರು, ಗೋಮ್ಮಟೇಶ್ ಅಂಗಡಿ, ಧರಣೇಂದ್ರ ಅಕ್ಕಿ, ಧರ್ಮಣ್ಣ ಮುರಗಿ, ಸೇರಿದಂತೆ ಜೈನ ಸಮಾಜದ ಮುಖಂಡರು ಜೈನ ಮಹಿಳಾ ಸಮಾಜದ ಪದಾಧಿಕಾರಿಗಳು, ಗುಡಿಗೇರಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಶ್ರಾವಕ – ಶ್ರಾವಕಿಯರು ಉಪಸ್ಥಿತರಿದ್ದರು.
ವರದಿ: ಜೆ.ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q