ನವದೆಹಲಿ: ಮತಗಳ್ಳತನ ವಿರುದ್ಧ ಕರ್ನಾಟಕದಲ್ಲಿ ಸಹಿಸಂಗ್ರಹ ಅಭಿಯಾನದಲ್ಲಿ ಸಕ್ರಿಯರಾಗದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಚ್ಚರಿಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. ಹರಿಯಾಣದಲ್ಲಿ ನಡೆದಿರುವ ಮತಗಳ್ಳತನ ವಿಚಾರವಾಗಿ ಕರ್ನಾಟಕ ರಾಜ್ಯದಲ್ಲಿ ಪ್ರತಿಭಟನೆ ಖಂಡಿತವಾಗಿ ಪ್ರತಿಭಟನೆ ಮಾಡುತ್ತೇವೆ. ಈಗಾಗಲೇ ಲಕ್ಷಾಂತರ ಸಹಿಸಂಗ್ರಹ ಮಾಡಿದ್ದೇವೆ. ಅದನ್ನು ನ.9 ರಂದು ದೆಹಲಿಗೆ ತೆಗೆದುಕೊಂಡು ಬರುತ್ತೇವೆ. ಬ್ಲಾಕ್ ಅಧ್ಯಕ್ಷರ ಜೊತೆ ಚರ್ಚೆ ಮಾಡಲಿದ್ದೇನೆ. ಈ ಅಭಿಯಾನದಲ್ಲಿ ಯಾರು ಕೆಲಸ ಮಾಡಿಲ್ಲವೋ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ.
ಸಹಿಸಂಗ್ರಹ ಅಭಿಯಾನದಲ್ಲಿ ಸರಿಯಾಗಿ ಜವಾಬ್ದಾರಿ ನಿಭಾಯಿಸದವರನ್ನು ಅವರ ಹುದ್ದೆಯಿಂದ ಕಿತ್ತೊಗೆಯಿರಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೂಚಿಸಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಜೊತೆಗೂ ಚರ್ಚೆ ಮಾಡುವೆ, ಶಾಸಕರಿಗೂ ತಿಳಿಸುವೆ. ಮತಗಳ್ಳತನ ರಾಷ್ಟ್ರ ಮಟ್ಟದ ಗಂಭೀರ ವಿಚಾರವಾಗಿದ್ದು, ನಮ್ಮ ರಾಜ್ಯದಲ್ಲಿ ಈಗಾಗಲೇ 70–80 ಲಕ್ಷ ಸಹಿ ಸಂಗ್ರಹ ಮಾಡಲಾಗಿದೆ.
ಕೆಲವು ಶಾಸಕರು ಹಾಗೂ ಬ್ಲಾಕ್ ಕಾಂಗ್ರೆಸ್ ನವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ, ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ನಾನು ನನ್ನ ವರದಿ ನೀಡುತ್ತೇನೆ. ಬ್ಲಾಕ್ ಅಧ್ಯಕ್ಷರನ್ನು ವಜಾಗೊಳಿಸಲು ನನಗೆ ಅಧಿಕಾರವಿದೆ. ಶಾಸಕರ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ತಿಳಿಸುತ್ತೇವೆ. ಎಐಸಿಸಿ ನಾಯಕರು ಸೂಚನೆ ನೀಡುತ್ತಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


