ಚಿತ್ರದುರ್ಗ: ಗರ್ಭಿಣಿ ಪತ್ನಿಯನ್ನು ನೋಡಲು ತನ್ನ ತಾಯಿಯ ಜೊತೆಗೆ ಹೋಗುತ್ತಿದ್ದ ಪತಿ ಅಪಘಾತದಲ್ಲಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಐಮಂಗಲ ಹೋಬಳಿ ಯರಬಳ್ಳಿ ಗ್ರಾಮದ ಗೊಲ್ಲಹಳ್ಳಿ ಸಮೀಪ ನಡೆದಿದೆ.
ಬೆಂಗಳೂರಿನ ಬಿ ಎಸ್ ಎಫ್ ನಲ್ಲಿ ಎಲೆಕ್ಟ್ರಿಕಲ್ ಆಗಿ ಕೆಲಸ ನಿರ್ವಹಿಸುತ್ತಿದ್ದಂತಹ ರಾಮಾಚಾರಿ ಮೃತಪಟ್ಟವರಾಗಿದ್ದು, ಇವರ ತಾಯಿ ಪೆದ್ದಕ್ಕನವರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಐಮಂಗಲ ಹೋಬಳಿ ಯರಬಳ್ಳಿ ಗ್ರಾಮದ ಗೊಲ್ಲಹಳ್ಳಿ ಸಮೀಪ ಅಪರಿಚಿತ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಪರಿಣಾಮವಾಗಿ ರಾಮಾಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಬ್ಯಾಡರಹಳ್ಳಿ ಮಜರೆ ಆರ್.ಎಸ್.ಉಪ್ಪಾರಹಟ್ಟಿ ಗ್ರಾಮ ನಿವಾಸಿ ರಾಮಾಚಾರಿ ಅವರು ತಮ್ಮ ಗರ್ಭಿಣಿ ಪತ್ನಿ ಚಂದ್ರಕಲಾ ಅವರನ್ನು ನೋಡಲು ರಾತ್ರಿ ಸುಮಾರು 8 ಗಂಟೆಯ ವೇಳೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಹಿರಿಯೂರು ತಾಲ್ಲೂಕಿನ ವೇದಾವತಿ ನಗರದಿಂದ ಹಿಡಿದು ಚಳ್ಳಕೆರೆ ಹೋಗುವ ಈ ಮಾರ್ಗವನ್ನು ಆ್ಯಕ್ಸಿಡೆಂಟ್ ಜೋನ್ ಎಂದೇ ತಾಲ್ಲೂಕಿನ ಸಾರ್ವಜನಿಕರು ಕರೆಯುತ್ತಾರೆ. ಈ ರಸ್ತೆಯು ದುರಸ್ತಿಗೊಂಡು ಸುಮಾರು ವರ್ಷಗಳೇ ಕಳೆದರೂ , ತಾಲ್ಲೂಕಿನ ಶಾಸಕರಾಗಲಿ , ಅಧಿಕಾರಿಯಾಗಲಿ ಇಲ್ಲಿಯವರೆಗೂ ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ರಸ್ತೆ ಅವ್ಯವಸ್ಥೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಬೇಜಾವ್ದಾರಿತನವಾಗಿದ್ದು, ಇನ್ನೂ ಎಷ್ಟು ಬಲಿ ಬೇಕು? ಎಂದು ಜನರು ಪ್ರಶ್ನಿಸುತ್ತಿದ್ದು. ಇನ್ನೆಷ್ಟು ಕುಟುಂಬಗಳನ್ನು ಬೀದಿಗೆ ತರತ್ತೀರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಐಮಂಗಲ ಹೋಬಳಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಲಾರಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy