ಕೊರಟಗೆರೆ : ದೇವರ ದರ್ಶನ ಎಂದರೆ ಕಾಲುನಡಿಗೆಯಲ್ಲೇ ಆಗಬೇಕು ಎಂಬ ದೃಢ ನಂಬಿಕೆ, ಶ್ರಮ—ಭಕ್ತಿ–ಸಂಕಲ್ಪದೊಂದಿಗೆ ರಾಮನಗರ ಜಿಲ್ಲೆಯ ಮಾಗಡಿಯಿಂದ ಮಂತ್ರಾಲಯದವರೆಗೆ ಕಾಲುನಡಿಗೆಯಲ್ಲಿ ಸಾಗುತ್ತಿರುವ ಶ್ರೀ ಗುರುರಾಜ ಪಾದಯಾತ್ರೆ ಸೇವಾ ಸಮಿತಿಯ ಯಾತ್ರೆ ಇಡೀ ರಾಜ್ಯದ ಗಮನ ಸೆಳೆದಿದೆ.
ಲೋಕ ಕಲ್ಯಾಣಾರ್ಥವಾಗಿ ಕಳೆದ 14 ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆಗಳನ್ನು ಆಯೋಜಿಸುತ್ತಿರುವ ಈ ಸಮಿತಿ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
ಆರ್ಥಿಕ ಸ್ಥಿತಿ, ಆರೋಗ್ಯ ಸಮಸ್ಯೆ, ಊಟ–ವಾಸ್ತವ್ಯದ ಚಿಂತೆಗಳ ಕಾರಣದಿಂದ ಯಾತ್ರೆ ಕೈಗೊಳ್ಳಲಾಗದವರನ್ನೂ ಒಳಗೊಂಡು, ಪೂರ್ವನಿಯೋಜಿತ ಚಲಿಸುವ ನಕ್ಷೆ, ತಂಗುವ ಸ್ಥಳಗಳ ವ್ಯವಸ್ಥೆಯೊಂದಿಗೆ ಪಾದಯಾತ್ರೆಯನ್ನು ಯಶಸ್ವಿಯಾಗಿ ಸಂಘಟಿಸುವುದು ಈ ಸಮಿತಿಯ ವಿಶೇಷತೆ.
ಹಿರಿಯ ಮುತ್ಸದ್ದಿ ಸದಾಶಿವ ಶೆಟ್ಟರ್ ಅವರ ಮಾರ್ಗದರ್ಶನದಲ್ಲಿ, ಸಮಿತಿಯ ಗೌರವಾಧ್ಯಕ್ಷ ಸೀಬಣ್ಣಾಚಾರ್, ಅಧ್ಯಕ್ಷ ಗುರುಸಿದ್ದಪ್ಪ ನೇತೃತ್ವದಲ್ಲಿ ಈಗಾಗಲೇ ಕಾಶಿ, ತಿರುಪತಿ, ಧರ್ಮಸ್ಥಳ, ಮಲೆ ಮಹದೇಶ್ವರ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಿಗೆ ಕಾಲುನಡಿಗೆಯಲ್ಲಿ ಪಾದಯಾತ್ರೆ ಪೂರ್ಣಗೊಳಿಸಲಾಗಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯಾತ್ರೆಗಳನ್ನು ಕೈಗೊಳ್ಳುವ ಉದ್ದೇಶವನ್ನು ಸಮಿತಿ ಹೊಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ವಿಜಯಪುರದ ವಿಶ್ವ ವಿಜೇತ ಸ್ವಾಮಿ ವಿವೇಕಾನಂದ ಯುವ ಬಳಗದವರಿಂದ ರಾಯರ ಭಜನಾ ಕಾರ್ಯಕ್ರಮ ನಡೆಯಿತು.
ಯಾತ್ರೆಯ ಪಥವಿವರ: ಡಿ.23 ರಂದು ಮಾಗಡಿಯಿಂದ ಹೊರಟ ಸುಮಾರು 40 ಯಾತ್ರಾರ್ಥಿಗಳು ಮೊದಲ ದಿನ ಶಿವಗಂಗೆ ಕ್ಷೇತ್ರದಲ್ಲಿ ತಂಗಿದರು. ಡಿ.24ರಂದು ಪಟ್ಟಣದ ಹಿಂಧೂ ಸಾದರ ಸಮುದಾಯ ಭವನದಲ್ಲಿ ರಾತ್ರಿ ವಾಸ್ತವ್ಯ ಹೂಡಿದರು. ಮತ್ತೆ ಯಾತ್ರೆ ಆರಂಭಿಸಿ ಪಾವಗಡ ತಾಲೂಕಿನ ಚಂದ್ರಗಿರಿ, ದೊಡ್ಡಹಳ್ಳಿ, ಕಲ್ಯಾಣದುರ್ಗ, ಕಸಾಪುರ ಮಾರ್ಗವಾಗಿ ಆಂಧ್ರಪ್ರದೇಶದ ಗುಂತಕಲ್ಲು, ಡಿಬ್ಬಗಲ್ಲು, ಕೈರುಪಲಿ ಹಾದು ಹೊಸ ವರ್ಷದ ದಿನ ಮಂತ್ರಾಲಯದಲ್ಲಿ ಪೂಜೆ ಸಲ್ಲಿಸುವ ಗುರಿಯೊಂದಿಗೆ ಪಾದಯಾತ್ರೆ ಮುಂದುವರಿಯಲಿದೆ.
ಕೊರಟಗೆರೆಯ ಭಕ್ತರ ಸಹಕಾರ: ಪಾದಯಾತ್ರಾರ್ಥಿಗಳಿಗೆ ಪಟ್ಟಣದ ಭಕ್ತರು ಅಪಾರ ಸಹಕಾರ ನೀಡಿದ್ದು ಮಾನವ ಹಕ್ಕುಗಳ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷೆ ಹೇಮಲತಾ, ಅಶ್ವಥ್ ನಾರಾಯಣ್, ಹೋಟಲ್ ಬಾಲಸುಬ್ರಹ್ಮಣ್ಯ, ಆಟೋ ಕುಮಾರ್ ಸೇರಿದಂತೆ ಹಲವರು ರಾತ್ರಿಯ ಊಟ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡಿದರು.
ಹಿಂದೂ ಸಾಧರ ಸಮುದಾಯ ಭವನದ ಅಧ್ಯಕ್ಷ ಹನುಮಾನ್ ಮಾತನಾಡಿ, ಕಡಿಮೆ ಖರ್ಚಿನಲ್ಲಿ ಉತ್ತಮ ಆರೋಗ್ಯ ಮತ್ತು ಭಕ್ತಿ ಭಾವದೊಂದಿಗೆ ಯಾತ್ರೆ ನಡೆಸುತ್ತಿರುವ ಈ ಸಂಸ್ಥೆಯ ಉದ್ದೇಶ ಶ್ಲಾಘನೀಯ. ಮುಂದೆ ಇನ್ನೂ ಹೆಚ್ಚಿನ ಯಾತ್ರಾರ್ಥಿಗಳು ಇಂತಹ ಪಾದಯಾತ್ರೆಗಳಲ್ಲಿ ಭಾಗವಹಿಸಲಿ. ನಮ್ಮ ಸಹಕಾರ ಮುಂದುವರಿಯುತ್ತದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


