ಬೆಂಗಳೂರು: ಸಮಾನ ಅವಕಾಶಗಳಿಂದ ನೆಮ್ಮದಿ ಶಾಂತಿಯಿಂದ, ಸರ್ವಜನಾಂಗದ ಶಾಂತಿಯ ತೋಟವನ್ನು ಸೃಷ್ಟಿಸುವ ಮೂಲಕ ರಾಜ್ಯದಲ್ಲಿ ಕಟ್ಟುತ್ತೇವೆಂಬ ನಂಬಿಕೆಯಿಂದ ಜನರು ಕಾಂಗ್ರೆಸ್ ನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿ, ರಾಜ್ಯದ ಜನರು ಯಾವತ್ತು ಬಿಜೆಪಿಯವರಿಗೆ ಆರ್ಶೀವಾದ ಮಾಡಿಲ್ಲ. ಅವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದು, ಮ್ಯಾಂಡೇಟ್ ಇಲ್ಲದೆ ಆಡಳಿತ ನಡೆಸಿದ್ದಾರೆ ಎಂದರು.
ಜಾತ್ಯತೀತೆಯ ಸಿದ್ಧಾಂತಕ್ಕೆ ಕಾಂಗ್ರೆಸ್ ಬದ್ಧ :
ಎಲ್ಲ ಧರ್ಮ, ಜಾತಿ, ಆಚಾರಗಳನ್ನು ಗೌರವಿಸುತ್ತೇವೆ. ಮನುಷ್ಯ ಜಾತಿ ತಾನೊಂದೆ ವಲಂ ಎಂದು ಆದಿಕವಿ ಪಂಪ ಹೇಳಿದರು. ನಾವೆಲ್ಲರೂ ಮಾನವತಾವಾದಿಗಳು. ಇದೇ ನಮ್ಮ ಸಂವಿಧಾನದಲ್ಲಿರುವದರಿಂದ , ಸಂವಿಧಾನದ ಹೊರತಾಗಿ ಬೇರೆ ಯಾವುದಕ್ಕೂ ತಲೆಬಾಗುವುದಿಲ್ಲ. ಈ ಸಿದ್ದಾಂತಕ್ಕೆ ಕಾಂಗ್ರೆಸ್ ಪಕ್ಷ ಬದ್ಧತೆಯಾಗಿದೆ. ಇದನ್ನೇ ಜಾತ್ಯಾತೀತೆ ಎಂದು ಸಂವಿಧಾನ ತಿಳಿಸಿದೆ. ಭಾರತ ದೇಶದಲ್ಲಿ 142 ಕೋಟಿ ಜನತೆ ಇದೆ. ಅಷ್ಟು ಜನರೆಲ್ಲರೂ ಒಂದೇ , ನಾವೆಲ್ಲಾ ಭಾರತೀಯರೇ . ಯಾರದೋ ಸ್ವಾರ್ಥಕ್ಕಾಗಿ ಜಾತಿ ಮಾಡಲ್ಪಟ್ಟಿತ್ತು. 850 ವರ್ಷಗಳ ಹಿಂದೆಯೆ ಬಸವಣ್ಣನವರು ಹೇಳಿದಂತೆ , ಕಾಯಕ ಮತ್ತು ದಾಸೋಹ. ವೃತ್ತಿಯಲ್ಲಿ ಯಾರು ಮೇಲೂ ಅಲ್ಲ ಕೀಳೂ ಅಲ್ಲ. ಅನುಭವ ಮಂಟಪ ಅಲ್ಲಿಂದಲೇ ಬಂದಿದ್ದು . ವಿಧಾನಮಂಡಲದ ಪರಿಕಲ್ಪನೆ ಅಲ್ಲಿಂದಲೇ ಬಂದಿದೆ. ಜಾತಿ ಪದ್ದತಿಯಲ್ಲಿ ಮೇಲೊಬ್ಬ , ಕೆಳಗೊಬ್ಬ ಎಂಬ ಬೇಧಭಾವ ಇದೆ. Vertical society ಯನ್ನು horizontal society ಯಾಗಿ ಮಾಡಬೇಕು. ಮನುಷ್ಯರನ್ನು ಮೇಲೆ ಕೆಳಗೆ ಮಾಡಬಾರದು , ಎಲ್ಲರೂ ಸಮಾನಾಗಿರಬೇಕು ಎಂದರು.
ಮನುಷ್ಯ – ಮನುಷ್ಯರ ನಡುವೆ ಗೋಡೆ ಕಟ್ಟಬಾರದು :
ಬಿಜೆಪಿಯವರಿಗೆ ಜಾತಿಯತೆ ಮಾಡಬೇಡಿ ಎಂದು ಬಹಳ ಬಾರಿ ಹೇಳಿದ್ದೇನೆ. ನಾವೇ , ನಮ್ಮ ಧರ್ಮವೇ ಶ್ರೇಷ್ಠ ಎನ್ನಬಾರದು. ಇದನ್ನು ಜನ ಒಪ್ಪಲ್ಲ. 5 ಚುನಾವಣೆಯಲ್ಲಿಯೂ ಜನ ನಿಮ್ಮನ್ನು ನಂಬಲ್ಲ. ಹಿಟ್ಲರ್ ಬಗ್ಗೆ ಮಾತನಾಡಿದರೆ ಬಿಜೆಪಿಯವರಿಗೆ ಯಾಕೆ ಬೇಸರ? ಹಿಟ್ಲರ್ ಒಬ್ಬ ಮತಾಂಧ , ಬಿಜೆಪಿಯವರು ಅವನ ಪರವೇ ? ಮನುಷ್ಯ – ಮನುಷ್ಯರ ನಡುವೆ ಗೋಡೆ ಕಟ್ಟಬಾರದು. ಜಾತಿ ನಡುವೆ ಬೆಂಕಿ ಹಚ್ಚಿದರೆ ಅದು ನಮ್ಮನೇ ಸುಡುತ್ತದೆ. ನಮ್ಮ ಸಮಾಜ ಒಳಿತಿಗೆ ಏನು ಮಾಡಬೇಕು. ರಾಜಕೀಯವಾಗಿ, ಸಾಮಾಜಿಕವಾಗಿ ಅಸಮಾನತೆ ಇದ್ದು , ಅದನ್ನು ಹೋಗಲಾಡಿಸಬೇಕು. 1949 , ನವೆಂಬರ್ 29 ನಲ್ಲಿ ಅಂಬೇಡ್ಕರ್ ಅವರು ಐತಿಹಾಸಿಕ ಭಾಷಣ ಮಾಡಿದರು. ನಾವು ಎಲ್ಲರಿಗೂ ಸಮಾನತೆ ನೀಡಿದ್ದೇವೆ. ಒಂದು ಮತ , ಒಂದು ಮೌಲ್ಯ ಎಂದಿದ್ದಾರೆ. ಆದರೆ ಸಾಮಾಜಿಕವಾಗಿ , ಆರ್ಥಿಕವಾಗಿ ಅಸಮಾನತೆ ಇದೆ . ಪ್ರಜಾಪ್ರಭುತ್ವದ ಸೌಧ ಧ್ವಂಸವಾಗುತ್ತದೆ ಎಂದು ಆಗಲೇ ಎಚ್ಚರಿಕೆ ನೀಡಿದ್ದರು ಎಂದರು.
ವಿರೋಧ ಪಕ್ಷದವರದು ಅವಿವೇಕದ ತರ್ಕ :
20 ಮೇ ರಂದು ಅಧಿಕಾರಕ್ಕೆ ಬಂದ ತಕ್ಷಣ , ಸರ್ಕಾರ 5 ಗ್ಯಾರೆಂಟಿಗಳಿಗೆ ತಾತ್ವಿಕ ಅನುಮೋದನೆ ನೀಡಿತು. ಜೂನ್ 8 ರಂದು ಯಾವ ಯೋಜನೆಗಳು ಯಾವಾಗ ಜಾರಿಯಾಗಬೇಕೆಂದೂ ನಿರ್ಧರಿಸಲಾಯಿತು. ಆಯವ್ಯಯದಲ್ಲಿ 5 ಗ್ಯಾರೆಂಟಿಗಳಿಗೂ ಹಣ ನಿಗದಿಪಡಿಸಲಾಗಿದೆ. ಇಷ್ಟು ಹಣ ಎಲ್ಲಿಂದ ಬರುತ್ತದೆ , ರಾಜ್ಯ ಹೇಗೆ ನಡೆಸುತ್ತಾರೆ ಎಂದು ಟೀಕಿಸಿದರು. ಗ್ಯಾರೆಂಟಿಗಳಿಗೆ ಷರತ್ತುಗಳನ್ನು ಹಾಕಿದ್ದಿರಿ ಎಂದು ಈಗ ಟೀಕಿಸುತ್ತಿದ್ದಾರೆ. ಷರತ್ತುಗಳಿಲ್ಲದೇ ಯೋಜನೆ ಜಾರಿ ಮಾಡಿ ಎಂದು ಹೋರಾಟ ಮಾಡಿದರು. ಗೃಹ ಜ್ಯೋತಿಯಡಿ ಎಲ್ಲರಿಗೂ 200 ಯೂನಿಟ್ ಕೊಡಿ ಎನ್ನುವುದು ಅವಿವೇಕದ ತರ್ಕ . ಬಿಜೆಪಿಯವರು 7 ಜಿಲ್ಲೆಗಳಲ್ಲಿ ಮತಗಳನ್ನೇ ಪಡೆದಿಲ್ಲ. ಬಿಜೆಪಿ ಮುಕ್ತ ಭಾರತವನ್ನು ಮಾಡುತ್ತೇವೆ ಎಂದು ನಾವು ಹೇಳುವುದಿಲ್ಲ. ಬಿಜೆಪಿಯವರು ಎಂದಿಗೂ ಅಧಿಕಾರಕ್ಕೆ ಬರಬಾರದು . ರಾಜ್ಯ ಅಭಿವೃದ್ಧಿ ಆಗಲ್ಲ. ಜನಪರ ಕೆಲಸಗಳು ಆಗಲ್ಲ. ದಲಿತರಿಗೆ , ಬಡವರಿಗೆ , ರೈತರಿಗೆ ನ್ಯಾಯ ಸಿಗುವುದಿಲ್ಲ. ಬಿಜೆಪಿಯವರು ವಿರೋಧಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ರಾಜ್ಯದ ಜನತೆಯ ನಿರೀಕ್ಷೆಗೆ ತಕ್ಕಂತೆ ಮಾತನಾಡುತ್ತೇನೆ. ನಮ್ಮ ಸರ್ಕಾರದಿಂದ ರಾಜ್ಯದ ಜನತೆ ಸಂತುಷ್ಟರಾಗಿದ್ದಾರೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


