ತುಮಕೂರು ತಾಲೂಕಿನ ಕುರುಗುಂದ ಗ್ರಾಮದ ಸರ್ಕಾರಿ ಶಾಲೆಯನ್ನ ಕೆಪಿಎಸ್ — ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಮುಚ್ಚಲು ಹೊರಟಿರುವುದನ್ನು ವಿರೋಧಿಸಿ, ಸರ್ಕಾರಿ ಶಾಲೆಯನ್ನು ಉಳಿಸಲು ಎಐಡಿಎಸ್ಓ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ಊರಿನ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ಎಸ್. ರಾಜು ಅವರು ಮಾತನಾಡಿ ಸರ್ಕಾರಿ ಶಾಲೆಗಳಿಗೆ ಒಳ್ಳೆ ನುರಿತ ಶಿಕ್ಷರನ್ನ ಕೊಟ್ಟು ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೆಲಸವನ್ನ ಮಾಡಿದರೆ ಯಾವ ಪೋಷಕರು ಕೂಡಾ ಖಾಸಗಿ ಶಾಲೆಗಳಿಗೆ ಕಳಿಸುವುದಿಲ್ಲ. ಇವತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿ, ಖಾಸಗಿಕರಣ ಮಾಡುತ್ತಿದ್ದಾರೆ. ನಮ್ಮೂರ ಸರ್ಕಾರಿ ಶಾಲೆಯನ್ನು ಮುಚ್ಚಲು ಯಾರೇ ಅಧಿಕಾರಿ ಬಂದರೂ ಊರಿನ ಜನರು ಒಗ್ಗಟ್ಟಾಗಿ ನಿಂತು ಸರ್ಕಾರಿ ಶಾಲೆಯನ್ನು ಉಳಿಸಲು ಹೋರಾಡಬೇಕು. ನಮ್ಮೂರ ಸರ್ಕಾರಿ ಶಾಲೆಯನ್ನ ಯಾವದೇ ಕಾರಣಕ್ಕೂ ಮುಚ್ಚಕ್ಕೆ ಬಿಡಲ್ಲ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿಗಳಾದ ಲಕ್ಕಪ್ಪ ಅವರು ಮಾತನಾಡಿ, ಈಗಾಗಲೇ ರಾಜ್ಯದ್ಯಂತ ಕೆಪಿಎಸ್- – ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಪೋಷಕರ ಪ್ರತಿಭಟನೆಗಳನ್ನ ನಡೆಸುತ್ತಿದ್ದಾರೆ. ಈ ಯೋಜನೆ ಅಡಿಯಲ್ಲಿ 40,000 ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ನಡೆ ಖಂಡನೀಯ. ಸಾರ್ವಜನಿಕ ಶಿಕ್ಷಣ ಉಳಿಸಿ ಎಂಬುದು ಬರೀ ಘೋಷಣೆ ಅಲ್ಲ. ದೇಶದಲ್ಲಿ ಹುಟ್ಟುವ ಪ್ರತಿ ಮಗುವಿಗೂ ಶಿಕ್ಷಣ ಮೂಲಭೂತ ಹಕ್ಕು. ನವೋದಯದ ಮಹಾನ್ ಹೋರಾಟಗಾರರ, ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳ ತ್ಯಾಗದಿಂದ ದೊರಕಿರುವ ಈ ಹಕ್ಕನ್ನು ನಮ್ಮಿಂದ ಕಸಿಯುತ್ತಿರುವಾಗ ನಾವೆಲ್ಲ ಒಂದಾಗಿ ಹೋರಾಡಬೇಕಾಗಿದೆ ಎಂದರು..
ಮತ್ತೊಂದು ನವೋದಯದ ಹೋರಾಟಕ್ಕೆ ಭಗತ್ ಸಿಂಗ್, ನೇತಾಜಿಯವರ ಸ್ಪೂರ್ತಿಯನ್ನು ಹೃದಯದಲ್ಲಿ ಹೊತ್ತು ಮುಂದಿನ ಹೋರಾಟಕ್ಕೆ ಸಜ್ಜಾಗೋಣ ಎಂದು ಕರೆ ನೀಡಿದರು. ಇದೇ ವೇಳೆ ಕುರುಗುಂದ ಸರ್ಕಾರಿ ಶಾಲೆ ಉಳಿಸಿ ಸಮಿತಿ ರಚಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


