ತುಮಕೂರು/ಕೊರಟಗೆರೆ: ರಾಜ್ಯದಲ್ಲಿ KPS — ಮ್ಯಾಗ್ನೆಟ್ ಹೆಸರಿನಲ್ಲಿ 40 ಸಾವಿರ ಶಾಲೆಗಳನ್ನು ಮುಚ್ಚುವ ಸರ್ಕಾರದ ಹುನ್ನಾರವನ್ನು ವಿರೋಧಿಸಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಉಳಿಸಲು ಆಗ್ರಹಿಸಿ ! ಕೊರಟಗೆರೆ ತಾಲೂಕಿನ ಗುಂಡಿನ ಪಾಳ್ಯದಲ್ಲಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ AIDSO ಜಿಲ್ಲಾ ಅಧ್ಯಕ್ಷರಾದ ಅಶ್ವಿನಿ ಮಾತನಾಡಿ, ಪೋಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ವಿರೋಧವಿದ್ದರೂ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಪಟ್ಟು ಹಿಡಿದು ನಿಂತಿದೆ. ಪಂಚಾಯತಿಗೆ ಒಂದು ಹೈಟೆಕ್ ಶಾಲೆ ಎನ್ನುವ ಸರ್ಕಾರ ಅದರ ಆರ್ಥಿಕ ನಿರ್ವಹಣೆ ಜವಾಬ್ದಾರಿಯನ್ನು ಪೋಷಕರ ಮೇಲೆ ಹಾಕಲು ಹೊರಟಿದೆ ಮತ್ತು ಇಲಾಖೆಯಲ್ಲಿ ತೀವ್ರವಾದ “ಆರ್ಥಿಕ ನಿರ್ಬಂಧಗಳಿವೆ” ಎಂದು ಒಪ್ಪಿಕೊಂಡ ಸಚಿವರು, ಮೂಲಸೌಕರ್ಯಗಳನ್ನು ನಿರ್ಮಿಸಲು ಅಜೀಂ ಪ್ರೇಮ್‌ಜಿ ಫೌಂಡೇಶನ್, ಇನ್ಫೋಸಿಸ್ ಮತ್ತು ಗಣಿಗಾರಿಕೆ ಕಂಪನಿಗಳಂತಹ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಗಳ ಮೇಲೆ ಅತಿಯಾಗಿ ಅವಲಂಬಿತವಾಗಿರುವುದನ್ನು ಎತ್ತಿ ತೋರಿಸಿದರು. ಈ ಅವಲಂಬನೆಯನ್ನು ಅಧಿಕೃತಗೊಳಿಸಲು ಹೊಸ ಮಾರ್ಗಸೂಚಿಗಳನ್ನು ರಚಿಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು.
ಇದು ಶಿಕ್ಷಣಕ್ಕೆ ಹಣ ಒದಗಿಸುವ ತನ್ನ ಸಂವಿಧಾನಾತ್ಮಕ ಕರ್ತವ್ಯದಿಂದ ರಾಜ್ಯ ಸರ್ಕಾರ ನುಣುಚಿಕೊಳ್ಳುವುದನ್ನು ಪ್ರತಿನಿಧಿಸುತ್ತದೆ. ಇನ್ನು ಮುಂದುವರೆದು ಸರ್ಕಾರಿ ಶಾಲೆಗಳನ್ನು ಸಂಪೂರ್ಣವಾಗಿ ದುರ್ಬಲಗೊಳಿಸುವ ಯೋಜನೆ ಇದಾಗಿದೆ ರೈತ ,ಕಾರ್ಮಿಕರ, ಬಡವರ ಮಕ್ಕಳನ್ನು ಬಾಲಕಾರ್ಮಿಕರನ್ನು ಮಾಡುವ ಹುನ್ನಾರವನ್ನು ನಾವು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಂಡಿನ ಪಾಳ್ಯದ ಎನ್. ನರಸಿಂಹ ಮೂರ್ತಿ ಮಾತನಾಡಿ, ನಮ್ಮ ಮಕ್ಕಳನ್ನು ದಾಸ್ಯಕ್ಕೆ ತಳ್ಳುವ, ಬಡಜನರಿಂದ ಶಿಕ್ಷಣವನ್ನು ಕಿತ್ತುಕೊಳ್ಳುವ ಈ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನ ನಾವು ಒಪ್ಪುವುದಿಲ್ಲ , ಯಾವುದೇ ಕಾರಣಕ್ಕೂ ನಮ್ಮ ಊರಿನ ಶಾಲೆ ಮುಚ್ಚಲು ನಾವು ಬಿಡುವುದಿಲ್ಲ ನಮ್ಮ ಶಾಲೆ ಉಳಿಸಿಕೊಳ್ಳಲು ನಾವು ಎಂತಹ ಉಗ್ರ ಹೋರಾಟಕ್ಕೂ ಸಿದ್ದ ಎಂದರು.
ಪ್ರತಿಭಟನೆಯ ನಂತರ ಸರ್ಕಾರಿ ಶಾಲೆ ಉಳಿಸಿ ಪೋಷಕರ ಸಮಿತಿ ಮಾಡಲಾಯಿತು ಸಮಿತಿಯ ಅಧ್ಯಕ್ಷರಾಗಿ ಕುಂಬೈಯ್ಯಾ ಮತ್ತು ಕಾರ್ಯದರ್ಶಿಯಾಗಿ ಎನ್. ನರಸಿಂಹಮೂರ್ತಿ ಮತ್ತು ಸದಸ್ಯರು ಮುಂದಿನ ಹೋರಾಟದ ಜವಾಬ್ದಾರಿ ತೆಗೆದುಕೊಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


