ತುಮಕೂರು: ಜಿಲ್ಲೆಯಲ್ಲಿ ಮಾರ್ಚ್ 1ರ ಶನಿವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು, ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.
ಜಿಲ್ಲಾ ಪಂಚಾಯತಿ ಭೌಗೋಳಿಕ ಮಾಹಿತಿ ಕೇಂದ್ರದಲ್ಲಿ ಶನಿವಾರ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಪರಿಶೀಲಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 35 ಕೇಂದ್ರಗಳಲ್ಲಿ ಮಾರ್ಚ್ 1 ರಿಂದ 20ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ನಡೆಸಲು ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇರಿಸಲು 40 ಗಣಕಯಂತ್ರಗಳನ್ನು ವ್ಯವಸ್ಥೆ ಮಾಡಲಾಗಿದ್ದು, 40 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಪೊಲೀಸ್ ಕಣ್ಗಾವಲಿನಲ್ಲಿ ಪ್ರತೀ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ತಲುಪಿಸಲು ಪ್ರತಿ ತಾಲ್ಲೂಕಿನಲ್ಲಿ ಭದ್ರತಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಮೇಲುಸ್ತುವಾರಿಗಾಗಿ ಮೇಲುಸ್ತುವಾರಿ ಅಧಿಕಾರಿ, ಪ್ರತೀ ಪರೀಕ್ಷಾ ಕೊಠಡಿಗೆ ಮೇಲ್ವಿಚಾರಕರು, ಸ್ಕ್ವಾ ಡ್, ಪೊಲೀಸ್ ಹಾಗೂ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ದ್ವಿತೀಯ ಪಿಯುಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಪ್ರಸಕ್ತ ವರ್ಷ ಜಿಲ್ಲಾ ಪಂಚಾಯತಿಯಲ್ಲಿ ಕಣ್ಗಾವಲು ಕೇಂದ್ರವನ್ನು ತೆರೆಯಲಾಗಿದ್ದು, ಪರೀಕ್ಷೆ ಮುಕ್ತಾಯವಾಗುವವರೆಗೂ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ಕಣ್ಗಾವಲು ವ್ಯವಸ್ಥೆಯಡಿ ಪರೀಕ್ಷಾ ಕೊಠಡಿಗಳ ಮೇಲೆ ಸೂಕ್ಷö್ಮವಾಗಿ ನಿಗಾ ಇಡಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಾಲಗುರುಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಶನಿವಾರ ಮೊದಲ ದಿನ ಕನ್ನಡ ಭಾಷಾ ಪರೀಕ್ಷೆ ನಡೆದಿದ್ದು, ಕನ್ನಡ ಭಾಷಾ ಪರೀಕ್ಷೆಗೆ 22,502 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 21,560 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಉಳಿದಂತೆ 942 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ವೆಬ್ ಕಾಸ್ಟಿಂಗ್ ವ್ಯವಸ್ಥೆಯ ನೋಡಲ್ ಅಧಿಕಾರಿ ಗೋಪಾಲ್, ವೆಬ್ ಕಾಸ್ಟಿಂಗ್ ನಿಯೋಜಿತ ಸಿಬ್ಬಂದಿ, ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4