ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ಮೈದಾನಕ್ಕೆ ಅತಿಕ್ರಮ ಪ್ರವೇಶ ಮಾಡಿ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡ ಆರೋಪದ ಮೇಲೆ ಪೊಲೀಸ್ ಕಸ್ಟಡಿಗೆ ಪಡೆದು ಬಿಡುಗಡೆಗೊಂಡ ಯುವಕನಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೌಂಡರಿ ಗೆರೆ ಬಳಿ ನಿಂತಿದ್ದ ಕೊಹ್ಲಿ ಬಳಿ ಅಭಿಮಾನಿ ಓಡಿ ಬಂದು ವಿರಾಟ್ ರನ್ನು ಅಪ್ಪಿಕೊಂಡರು. ಆಗ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುವಕನನ್ನು ತುಕೋಗಂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಆತನನ್ನು ವಿವರವಾಗಿ ಪ್ರಶ್ನಿಸಲಾಯಿತು. ನಂತರ ಮಂಗಳವಾರ ಸಂಜೆ ಪೊಲೀಸರು ಅವರನ್ನು ಬಿಡುಗಡೆಗೊಳಿಸಿದರು. ಪೊಲೀಸ್ ಠಾಣೆಯಿಂದ ಹೊರಬಂದ ಅವರನ್ನು ಕುಟುಂಬಸ್ಥರು ಹಾಗೂ ಸ್ನೇಹಿತರು ಸ್ವಾಗತಿಸಿದರು. ಈ ಆರತಕ್ಷತೆ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.


