ತುಮಕೂರು: ತುಮಕೂರು ನಗರದ ಗೆದ್ದಲಹಳ್ಳಿ ರಸ್ತೆಯಲ್ಲಿರುವ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಅಪ್ರಾಪ್ತ ಬಾಲಕಿಯರ ಹಾಸ್ಟೆಲ್ ನಲ್ಲಿ ತಡರಾತ್ರಿ ದೀಪಾವಳಿ/ಮಕ್ಕಳ ದಿನಾಚರಣೆ ಆಚರಿಸುವ ನೆಪದಲ್ಲಿ, ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ ಕೈ ಕೈ ಹಿಡಿದು ಅಶ್ಲೀಲ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿದ್ದ ತುಮಕೂರಿನ ಹಿಂದಿನ ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ, ತುಮಕೂರು ತಹಸಿಲ್ದಾರ್ ಸಿದ್ದೇಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಸಹಾಯಕ ನಿರ್ದೇಶಕ ದಿನೇಶ್ ಹಾಗೂ ಇತರರ ವಿರುದ್ದ ಪೊಲೀಸ್ ಇಲಾಖೆಗೆ ನೈಜ ಹೋರಾಟಗಾರರ ವೇದಿಕೆ ದೂರು ನೀಡಿದ್ದು ಪೊಲೀಸ್ ಇಲಾಖೆಯು ಆರೋಪಿತರನ್ನು ರಕ್ಷಿಸುವ ಸಲುವಾಗಿ ಪ್ರಥಮ ವರ್ತಮಾನ ವರದಿ ದಾಖಲಿಸದೆ ಸದರಿ ಅಧಿಕಾರಿಗಳಿಗೆ ರಕ್ಷಣೆಗೆ ನಿಂತಿದೆ ಎಂದು ನೈಜ ಹೋರಾಟಗಾರರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಅಧಿಕಾರಿಗಳ ಮೇಲೆ ದೂರು ನೀಡಿದ ಹೋರಾಟಗಾರರ ವಿರುದ್ದವೇ ಎಫ್.ಐ.ಆರ್ ದಾಖಲಿಸಿರುವುದು ಹೋರಾಟಗಾರರನ್ನು ಕುಗ್ಗಿಸುವ ಕೆಲಸವನ್ನು ಮಾಡುವಂತಾಗಿರುತ್ತದೆ. ಆದ್ದರಿಂದ, ನೈಜ ಹೋರಾಟಗಾರರ ವೇದಿಕೆಯು ದಿನಾಂಕ:15-12-2023 ರಂದು ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಿಗೆ ದೂರು ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.
ಈ ವೇಳೆ ನೈಜ ಹೋರಾಟಗಾರರ ವೇದಿಕೆ ಬೆಂಗಳೂರಿನ ಹಿರಿಯ ಹೋರಾಟಗಾರರಾದ ಹೆಚ್.ಎಂ, ವೆಂಕಟೇಶ್, ತುಮಕೂರು ಮಲ್ಲಿಕಾರ್ಜುನಯ್ಯ, ಮಲ್ಲಿಕಾರ್ಜುನ್ ಭಟ್ಟರಹಳ್ಳಿ, ಹಂದ್ರಾಳ್ ನಾಗಭೂಷಣ್, ಕುಣಿಗಲ್ ನರಸಿಂಹಮೂರ್ತಿ, ಸರಸ್ಪತಿ ಪುರಂ ಮಂಜುನಾಥ್, ಹನುಮಂತರಾಜು, ಪ್ರಕಾಶ್, ಜಯಣ್ಣ ಕುಮಾರ್, ಬೆಳಗುಲಿ ಮಂಜುನಾಥ್, ಮುನಿರಾಜು ಇತರರು ಹಾಜರಿದ್ದರು.


