ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ದೇಶದ ಜನರು ನಿರೀಕ್ಷೆ ಮಾಡಿರದ ಫಲಿತಾಂಶ ಹೊರಬಿದ್ದಿದೆ. ಮೂರನೇ ಸಲಕ್ಕೂ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇನೆಂದು ಭೀಗುತ್ತಿದ್ದ ಬಿಜೆಪಿ 240 ಕ್ಕೆ ತೃಪ್ತಿಪಟ್ಟಿದೆ. NDA ಗೆ ಸರಳ ಬಹುಮತ ದೊರೆತರೂ ಮಿತ್ರಪಕ್ಷಗಳನ್ನು ನಂಬಿ ಕೂರುವಂತಿಲ್ಲ. ಹೀಗಾಗಿ ಸರ್ಕಾರ ರಚನೆಗೆ ಬಿಜೆಪಿ ಭಾರೀ ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ NDA ಮೈತ್ರಿ ಕೂಟಗಳ ಸಭೆ ಕೂಡ ನಡೆದಿದೆ. ಈ ಸಭೆಯಲ್ಲಿ ಇತರ ಪಕ್ಷಗಳು ಬಿಜೆಪಿಗೆ ದೊಡ್ಡ ದೊಡ್ಡ ಬೇಡಿಕೆಯನ್ನೇ ಇಟ್ಟಿದ್ದಾವೆ ಎಂದು ತಿಳಿದು ಬಂದಿದೆ.
ಬಿಜೆಪಿಗೆ ಸ್ಪಷ್ಟ ಬಹುಮತ ಬರದ ಕಾರಣ ಮೈತ್ರಿ ಪಕ್ಷಗಳೊಂದಿಗೆ ಸಮ್ಮಿಶ್ರ ಸರಕಾರ ರಚಿಸಬೇಕಿದೆ. ಅದರಲ್ಲಿ ಟಿಡಿಪಿಮತ್ತು ಜೆಡಿಯು ಪಕ್ಷಗಳದ್ದೇ ಪ್ರಮುಖ ಪಾತ್ರ. ಹೀಗಾಗಿ ನೂತನ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ತಮ್ಮ ಪಕ್ಷಗಳಿಗೆ ನೀಡಬೇಕು ಎಂದು ಮೈತ್ರಿಕೂಟದ ನಾಯಕರು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ, ಬಿಜೆಪಿ ನಾಯಕತ್ವ ಇಕ್ಕಟ್ಟಿಗೆ ಸಿಲುಕಿದೆ.
ಎನ್ ಡಿಎ 2.0 ಸರ್ಕಾರದ ಅವಧಿಯಲ್ಲಿ ಪ್ರಮುಖ ಖಾತೆಗಳನ್ನು ಬಿಜೆಪಿಯೇ ಇಟ್ಟುಕೊಂಡಿತ್ತು. ಕಮಲ ಪಾಳಯಕ್ಕೆ ಸರ್ಕಾರ ರಚನೆಗೆ ಬೇಕಿರುವ ‘ಮ್ಯಾಜಿಕ್’ ಸಂಖ್ಯೆ ದೊರಕದ ಕಾರಣ ಮಿತ್ರ ಪಕ್ಷಗಳಿಗೆ ಪ್ರಮುಖ ಖಾತೆಗಳನ್ನು ಬಿಟ್ಟುಕೊಡಬೇಕಿದೆ. ಈ ಸಂಬಂಧ ಮೈತ್ರಿ ಕೂಟದ ನಾಯಕರು ಬಿಜೆಪಿ ಕೇಂದ್ರ ನಾಯಕತ್ವದ ಜತೆಗೆ ಈಗಾಗಲೇ ಚೌಕಾಸಿ ಆರಂಭಿಸಿದ್ದಾರೆ.
ಪಕ್ಷಗಳು ಇಟ್ಟ ಬೇಡಿಕೆ?
* ಟಿಡಿಪಿ – ನಾಲ್ಕು ಖಾತೆಗಳು
* ಜೆಡಿಯು – ರೈಲ್ವೆ ಸೇರಿದಂತೆ ಮೂರು ಖಾತೆಗಳು
* ಶಿವಸೇನೆ- ಒಂದು ಸಂಪುಟ ದರ್ಜೆ ಹಾಗೂ ಎರಡು ರಾಜ್ಯ ಖಾತೆಗಳು
* ಲೋಕಜನಶಕ್ತಿ – ಒಂದು ಸಂಪುಟ ದರ್ಜೆ ಹಾಗೂ ಒಂದು ರಾಜ್ಯ ಖಾತೆ
* ಎಚ್‌ಎಎಂಎಸ್ – ಸಂಪುಟ ದರ್ಜೆ ಖಾತೆ
* ಜೆಡಿಎಸ್ – ಕೃಷಿ ಖಾತೆ
ಇಷ್ಟೇ ಅಲ್ಲದೆ ಲೋಕಸಭಾಧ್ಯಕ್ಷ ಸ್ಥಾನವನ್ನು ತಮ್ಮ ಪಕ್ಷಕ್ಕೆ ನೀಡಬೇಕು ಎಂದು ನಾಯ್ಡು ಹಾಗೂ ನಿತೀಶ್ ಅವರು ಹಟ ಹಿಡಿದಿದ್ದಾರೆ. ಆದರೆ, ಈ ಬೇಡಿಕೆಗೆ ಬಿಜೆಪಿ ನಾಯಕತ್ವ ಒಪ್ಪುವ ಸಾಧ್ಯತೆ ಕಡಿಮೆ ಎಂದು ಗೊತ್ತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296