ರಾಮನಗರ: ಕಲ್ಲು ಒಡೆದುಕೊಂಡಿದ್ದವರನ್ನು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತದೆ ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಬಿಡದಿಯಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಡವರನ್ನು ಲೂಟಿ ಮಾಡಿಕೊಂಡು ಗುಡ್ಡೆ ಹಾಕಿದ್ದಾರೆ. ಅಂಥವರನ್ನು ದೇಶ ಕಟ್ಟು ಅಂತ ಕಳುಹಿಸಿದರೆ ಅವರು ದೇಶ ಕಟ್ಟುತ್ತಾರಾ? ಅವರ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾರೆ ಅಷ್ಟೇ. ಇಂಥವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.
ಸಂಸದ ಡಿ.ಕೆ.ಸುರೇಶ್ ನಿನ್ನೆ ದಿನ ದೇಶ ವಿಭಜನೆ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ಕೇಂದ್ರ ಸರ್ಕಾರ ಆರ್ಥಿಕ ತಾರತಮ್ಯ ಮಾಡುತ್ತಿದೆ, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ಕಾರಣ ಕೊಟ್ಟಿದ್ದಾರೆ. ಇದು ಅಪ್ರಬುದ್ಧ ಹೇಳಿಕೆ. ಕರ್ನಾಟಕದಲ್ಲಿ ಬಿರಿಯಾನಿ ಊಟ ಮಾಡಿ ಭಾರತ್ ಜೋಡೋ ಮಾಡಿದ್ದರು. ಈಗ ವಿಭಜನೆಯ ಮಾತನಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದುವೇಳೆ ವಿಭಜನೆ ಆಯ್ತು ಅಂತ ಇಟ್ಟುಕೊಳ್ಳಿ. ತಮಿಳುನಾಡಿನಿಂದ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.


