ತುಮಕೂರು: ವಿದ್ಯಾರ್ಥಿ ಜೀವನದಲ್ಲಿ ಯಾವುದು ಕಠಿಣವಲ್ಲ. ಶ್ರದ್ಧೆ ಮತ್ತು ಏಕಾಗ್ರತೆ ಇದ್ದರೆ ಎಲ್ಲವೂ ಸಾಧ್ಯ. ಉಜ್ವಲ ಭವಿಷ್ಯ ನಿಮ್ಮದಾಗಿಸಿಕೊಳ್ಳಲು ಕಠಿಣ ಪರಿಶ್ರಮ ಪಡಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಜಿಲ್ಲೆಯ ಕುಣಿಗಲ್ ತಾಲ್ಲೂಕು ಭಕ್ತರಹಳ್ಳಿ ಇಂದಿರಾ ಗಾಂಧಿ ವಸತಿ ಶಾಲೆ(ಪ.ಜಾ)ಗೆ ಅನಿರೀಕ್ಷಿತ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಕಿರು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿರುವ ಮತ್ತು ವಿಷಯ ಗ್ರಹಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಏರ್ಪಡಿಸಿ ಪಠ್ಯಾಭ್ಯಾಸ ಮಾಡಿಸಬೇಕು ಎಂದು ಶಿಕ್ಷಕರಿಗೆ ಸೂಚನೆ ನೀಡಿದರಲ್ಲದೇ, ಶಾಲೆಯ ಆಡಳಿತಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸದ ಶಾಲಾ ಮುಖ್ಯಸ್ಥರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕೊತ್ತಗೆರೆ ನಾಡ ಕಚೇರಿ, ಕುಣಿಗಲ್ ಪಟ್ಟಣದ ಮಹಾತ್ಮ ಗಾಂಧಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಣಿಗಲ್ ತಾಲೂಕು ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ತವ್ಯಕ್ಕೆ ಗೈರು ಹಾಜರಾದ ವೈದ್ಯರಿಗೆ ಶೋಕಾಸ್ ನೋಟೀಸ್ ನೀಡಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಡಿ. ಎನ್. ಮಂಜುನಾಥ್ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.
ನಂತರ ಕೊತ್ತಗೆರೆ ಗ್ರಾಮದ ನಾಡ ಕಚೇರಿಗೆ ಭೇಟಿ ನೀಡಿದ ಅವರು ಪಹಣಿಗೆ ಆಧಾರ್ ಜೋಡಣೆ, ಮರಣ ಪ್ರಮಾಣ ಪತ್ರ, ಪಿಂಚಣಿ ವಿತರಣೆ, ಪೌತಿ ಖಾತೆ ಅರ್ಜಿಗಳನ್ನು ವಿಲೇವಾರಿ ಮಾಡಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ ಶಿಲ್ಪ ಅವರಿಂದ ಮಾಹಿತಿ ಪಡೆದು, ಪೌತಿ ಖಾತೆ ಆಂದೋಲನದಲ್ಲಿ ವಾರಸುದಾರರು ಪೌತಿ ಖಾತೆಗೆ ಅಗತ್ಯವಿರುವ ವಂಶವೃಕ್ಷ, ಮರಣ ಪ್ರಮಾಣ ಪತ್ರ, ಪಹಣಿ ಪತ್ರಗಳನ್ನು ಒದಗಿಸಿದಲ್ಲಿ ೧೫ ದಿನಗಳೊಳಗಾಗಿ ಪೌತಿ ಖಾತೆ ಬದಲಾವಣೆ ಮಾಡಿಕೊಡಬೇಕೆಂದು ಸೂಚನೆ ನೀಡಿದರು.
ಮಹಾತ್ಮ ಗಾಂಧಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ೧೦ನೇ ತರಗತಿ ಕೊಠಡಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿ ಪರಿಶೀಲಿಸಿದ ಅವರು ಗೈರು ಹಾಜರಾಗಿದ್ದ ೧೩ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡದ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು, ವಿದ್ಯಾರ್ಥಿಗಳ ಹಾಜರಾತಿ ಬಗ್ಗೆ ನಿಗಾ ವಹಿಸಬೇಕೆಂದು ತಿಳಿಸಿದರು.
ಬಳಿಕ ಕುಣಿಗಲ್ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ತೆರಳಿದ ಅವರು ಹೊರರೋಗಿ ಚೀಟಿ ವಿತರಣಾ ಕೇಂದ್ರ, ಪ್ರಸವಪೂರ್ವ ಹಾಗೂ ಪ್ರಸವ ನಂತರದ ವಾರ್ಡು, ಐಸಿಯು, ಇಎನ್ಟಿ, ವಿಶೇಷ ಚಿಕಿತ್ಸಾ ಘಟಕ, ಶಸ್ತಚಿಕಿತ್ಸಾ ಕೊಠಡಿ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ತಾಯಿ ಮತ್ತು ಮಕ್ಕಳ ಆರೋಗ್ಯ ವಿಚಾರಿಸಿದರು. ಪ್ರಕರಣಗಳ ದಾಖಲು ವಹಿ ಪರಿಶೀಲಿಸುತ್ತಾ ನವಜಾತ ಶಿಶುಗಳಲ್ಲಿ ಜಾಂಡೀಸ್ ಕಂಡು ಬಂದರೆ ಫೋಟೋಥೆರಪಿ ಚಿಕಿತ್ಸೆ ನೀಡುವ ಬಗ್ಗೆ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು ಅವರಿಂದ ಮಾಹಿತಿ ಪಡೆದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಆಸ್ಪತ್ರೆಯಲ್ಲಿ ಸಿಬ್ಬಂದಿ ವರ್ಗದ ಕೊರತೆ ಇದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ತಾಲ್ಲೂಕಿನಲ್ಲಿ ನಗು-ಮಗು ಆ್ಯಂಬುಲೆನ್ಸ್ ವಾಹನ ವ್ಯವಸ್ಥೆ ಮಾಡಬೇಕೆಂದು ಆಡಳಿತ ವೈದ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.
ಆಸ್ತಿ ತೆರಿಗೆ ಸಂಗ್ರಹದಲ್ಲಿ ಹಿಂದುಳಿದ ಪುರಸಭೆ :
ಕುಣಿಗಲ್ ಪುರಸಭೆಯು ಆಸ್ತಿ ತೆರಿಗೆ ಸಂಗ್ರಹದಲ್ಲಿ ಹಿಂದುಳಿದಿದ್ದು, ಮುಂದಿನ ಒಂದು ವಾರದೊಳಗೆ ಆಸ್ತಿ ತೆರಿಗೆ ಸಂಗ್ರಹದಲ್ಲಿ ಪ್ರಗತಿ ಸಾಧಿಸಬೇಕೆಂದು ಮುಖ್ಯಾಧಿಕಾರಿ ಶಿವ ಪ್ರಸಾದ್ ಅವರಿಗೆ ಸೂಚನೆ ನೀಡಿದರು.
ಡೆಂಗ್ಯೂ ನಿಯಂತ್ರಣಕ್ಕೆ ಸಹಕರಿಸಲು ಸಾರ್ವಜನಿಕರಲ್ಲಿ ಮನವಿ:
ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ನಿರಂತರವಾಗಿ ಸ್ವಚ್ಛತೆ ಕಾಪಾಡುವ ಮೂಲಕ ಸೊಳ್ಳೆಗಳು ಉತ್ಪತ್ತಿಯಾಗದಂತೆ ಕ್ರಮ ವಹಿಸಲು ಎಲ್ಲರ ಸಹಕಾರ ಇರಬೇಕು. ಡೆಂಗಿ ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಸಾರ್ವಜನಿಕರು ಉದಾಸೀನ ಮಾಡದೆ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಿಸಿ ಡೆಂಗ್ಯೂ ದೃಢಪಟ್ಟಲ್ಲಿ ತಪ್ಪದೇ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ತಹಶೀಲ್ದಾರ್ ರಶ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296