nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು: ಪಾಲಿಕೆ ಆಯುಕ್ತರಿಂದ ಇಂದಿರಾ ಕ್ಯಾಂಟೀನ್ ಪರಿಶೀಲನೆ

    May 8, 2025

    ಪ.ಜಾತಿಗಳ ಸಮಗ್ರ ಸಮೀಕ್ಷೆ: ಪ್ರತೀ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಡೀಸಿ ಸೂಚನೆ

    May 8, 2025

    ಮಳೆ ಹಾನಿ : 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ : ಡೀಸಿ ಖಡಕ್ ಸೂಚನೆ

    May 8, 2025
    Facebook Twitter Instagram
    ಟ್ರೆಂಡಿಂಗ್
    • ತುಮಕೂರು: ಪಾಲಿಕೆ ಆಯುಕ್ತರಿಂದ ಇಂದಿರಾ ಕ್ಯಾಂಟೀನ್ ಪರಿಶೀಲನೆ
    • ಪ.ಜಾತಿಗಳ ಸಮಗ್ರ ಸಮೀಕ್ಷೆ: ಪ್ರತೀ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಡೀಸಿ ಸೂಚನೆ
    • ಮಳೆ ಹಾನಿ : 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ : ಡೀಸಿ ಖಡಕ್ ಸೂಚನೆ
    • ಮಳೆಗಾಲದಲ್ಲಿ ವಿದ್ಯುತ್ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಡೀಸಿ ಸೂಚನೆ
    • ಶಿಥಿಲಗೊಂಡಿರುವ ಕಟ್ಟಡಗಳನ್ನು ತೆರವಿಗಾಗಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕೆಂದು ಸೂಚನೆ
    • ಭೂಕಬಳಿಕೆದಾರರಿಂದ ಶೀಬಿ ಅರಣ್ಯ ಭೂಮಿ ರಕ್ಷಣೆಗೆ ಈಶ್ವರ ಖಂಡ್ರೆ ಸೂಚನೆ
    • ಉತ್ತರಾಖಂಡದ ಗಂಗೋತ್ರಿ ದೇಗುಲಕ್ಕೆ ತೆರಳುತ್ತಿದ್ದ ಹೆಲಿಕಾಫ್ಟರ್ ಪತನ: 6 ಮಂದಿ ಸಾವು
    • ಭಾರತೀಯ ಯೋಧರ ಹೆಸರಿನಲ್ಲಿ ವಿಶೇಷ ಪೂಜೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಇನ್ನು ಮುಂದೆ ರಾಜ್ಯ ಸರ್ಕಾರದಿಂದಲೇ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿ ಎಂದ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದೆೇಕೆ?
    ಲೇಖನ March 3, 2025

    ಇನ್ನು ಮುಂದೆ ರಾಜ್ಯ ಸರ್ಕಾರದಿಂದಲೇ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿ ಎಂದ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದೆೇಕೆ?

    By adminMarch 3, 2025No Comments7 Mins Read
    jinaralkar

    2023 ಸೆಪ್ಟಂಬರ್ ತಿಂಗಳಿನಲ್ಲಿ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯನ್ನು ರಾಜ್ಯಪಾಲರ ಬದಲಿ ರಾಜ್ಯ ಸರ್ಕಾರವೇ ಇನ್ನು ಮುಂದೆ ಮಾಡುವ ನಿರ್ಧಾರ ಹಾಗೂ ನಂತರ  ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿಯನ್ನು ತಂದು ಮುಖ್ಯಮಂತ್ರಿಗಳನ್ನು ವಿಶ್ವವಿದ್ಯಾಲಯದ ಚಾನ್ಸಲರ್ ಆಗಿ ಮಾಡಿ, ಕುಲಪತಿಗಳ ನೇಮಕಾತಿಯನ್ನು ಇನ್ನು ಮುಂದೆ ಮುಖ್ಯಮಂತ್ರಿಗಳೇ ಮಾಡುವ ಅಧಿಕಾರ ನೀಡಿರುವ ನಿರ್ಧಾರವು ಅತ್ಯಂತ  ಸ್ವಾಗತಾರ್ಹವಾಗಿದ್ದು, ಅನೇಕ ಪ್ರಾಧ್ಯಾಪಕರ, ಬುದ್ಧಿಜೀವಿಗಳ ಹಾಗೂ ಶಿಕ್ಷಣ ತಜ್ಞರ ಪ್ರಸಂಶೆಗೆ ಪಾತ್ರವಾಗಿತ್ತು.

    ಈ ಹಿಂದೆಯೂ ಸಹ ಕುಲಪತಿಗಳ ನೇಮಕಾತಿಯಲ್ಲಿ ಇರುವ ತೊಂದರೆಗಳನ್ನು ನಿವಾರಿಸಲು ಇಂತಹ ಕ್ರಮಗಳನ್ನು ತೆಗೆದುಕೊಳ್ಳಲು ಹಿಂದಿನ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ಸಹ ಆಲೋಚಿಸಿ, ಅನೇಕ ಬಾರಿ ಪ್ರಯತ್ನಿಸಿರುವುದು ನಮ್ಮಲ್ಲೆರಿಗೂ ತಿಳಿದ ವಿಷಯವಾಗಿರುತ್ತದೆ.


    Provided by

    ಈಗಿನ ಪದ್ಧತಿಯಾದ ʼಶೋಧನಾ  ಸಮಿತಿʼಯಿಂದ ಶಿಪಾರಸ್ಸು ಮಾಡಿದ ಮೂರು ಪ್ರಾಧ್ಯಾಪಕರುಗಳ ಹೆಸರುಗಳನ್ನು ಸರ್ಕಾರದಿಂದ ರಾಜ್ಯಪಾಲರಿಗೆ ಕಳುಹಿಸಿ, ರಾಜ್ಯಪಾಲರು ಕೆಲವು ವಿಶ್ವವಿದ್ಯಾಲಯಗಳಲ್ಲಿ ಸರ್ಕಾರದೊಂದಿಗೆ ಸಮಾಲೋಚಿಸಿ, ಒಪ್ಪಿಗೆಯನ್ನು ಪಡೆದು, ನೇಮಕಾತಿ ಮಾಡುವ ಪದ್ಧತಿ ಇರುತ್ತದೆ ಹಾಗೂ ವಿಟಿಯು, ಬೆಳಗಾವಿ ಮತ್ತು ಕೆಎಸ್ಒಯು, ಮೈಸೂರು ವಿಶ್ವವಿದ್ಯಾಲಯಗಳಲ್ಲಿ ಮಾನ್ಯ ರಾಜ್ಯಪಾಲರೇ ʼಶೋಧನಾ ಸಮಿತಿʼಯನ್ನು ರಚಿಸಿ,  ಅವರಿಂದ ಮೂರು ಪ್ರಾಧ್ಯಾಪಕರುಗಳ ಹೆಸರುಗಳನ್ನು ಪಡೆದು, ರಾಜ್ಯ ಸರ್ಕಾರದೊಂದಿಗೆ ಯಾವುದೇ ಸಮಾಲೋಚನೆ ಮಾಡದೆ ಅಥವಾ ಒಪ್ಪಿಗೆ ಪಡೆಯದೆ ಕುಲಪತಿಗಳನ್ನು ನೇಮಕ ಮಾಡುವ ಪದ್ಧತಿ ಇರುತ್ತದೆ  ಹಾಗೂ ರಾಜ್ಯದ ಗ್ರಾಮೀಣಾಭಿವೃದ್ಧಿ  ವಿಶ್ವವಿದ್ಯಾಲಯ ಅಧಿನಿಯಮದಡಿಯಲ್ಲಿ ರಾಜ್ಯ ಸರ್ಕಾರದಿಂದ ʼಶೋಧನಾ ಸಮಿತಿʼಯನ್ನು ರಚಿಸಿ, ಅದರಿಂದ ಮೂರು ಪ್ರಾಧ್ಯಾಪಕರಗಳ ಹೆಸರುಗಳನ್ನು ಪಡೆದು, ಸರ್ಕಾರ ರಾಜ್ಯಪಾಲರಿಗೆ ಸಲ್ಲಿಸುವುದು ಮತ್ತು ರಾಜ್ಯಪಾಲರು ಅದರಲ್ಲಿ ಯಾರನ್ನಾದರೂ  ಒಬ್ಬರನ್ನು ಕುಲಪತಿಗಳನ್ನಾಗಿ ನೇಮಿಸಬಹುದಾಗಿದೆ.

    ಒಂದೇ ರಾಜ್ಯದಲ್ಲಿ ವಿವಿಧ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ನೇಮಕಾತಿಯಲ್ಲಿ ಈ ರೀತಿ ವ್ಯತಿರಿಕ್ತವಾದ ಪ್ರಕ್ರಿಯೆ ಹಾಗೂ ನಿಯಮಗಳು ಜಾರಿಯಲ್ಲಿರುವುದು ಅತ್ಯಂತ ದುರದೃಷ್ಟಕರ, ತಾರತಮ್ಯದ ಮತ್ತು ಗೊಂದಲದ ಪ್ರಕ್ರಿಯೆಯಾಗಿರುತ್ತದೆ. ಇದರಿಂದಾಗಿ ಅನೇಕ ಬಾರಿ ರಾಜ್ಯಪಾಲರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವ ಉದಾಹರಣೆಗಳು ಸಾಕಷ್ಟು ಇವೆ. ಇನ್ನೂ ಹಲವು ವಿಶ್ವವಿದ್ಯಾಲಯಗಳ ವಿಷಯದಲ್ಲಿ ಸರ್ಕಾರದೊಂದಿಗೆ ಸಮಾಲೋಚನೆ ಮಾಡಿ, ಸರ್ಕಾರದ ಒಪ್ಪಿಗೆಯೊಂದಿಗೆ ಕುಲಪತಿಗಳ ನೇಮಕಾತಿ ಮಾಡಬೇಕೆಂಬ ನಿಯಮವಿದ್ದರೂ ಸಹ, ರಾಜ್ಯಪಾಲರು ಕುಲಪತಿಗಳನ್ನು ತಮ್ಮ ಇಚ್ಛಾನುಸಾರ ಮಾಡಿ, ಅನೇಕ ಪ್ರಕರಣಗಳು ನ್ಯಾಯಾಲಯಗಳ ಮೆಟ್ಟಿಲೇರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ ಹಾಗೂ ಅನೇಕ ಇಂತಹ ಕುಲಪತಿಗಳನ್ನು ನಿಯಮಬಾಹಿರ ನೇಮಕಾತಿಯೆಂದು ಮಾನ್ಯ ಉಚ್ಚ ಹಾಗೂ ಸರ್ವೋಚ್ಚ  ನ್ಯಾಯಾಲಯಗಳಿಂದ ರದ್ದುಪಡಿಸಲಾಗಿರುತ್ತದೆ.

    ಇದರಿಂದಾಗಿ ಅನೇಕ ಬಾರಿ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ಮಧ್ಯೆ ಘೋರ ತಿಕ್ಕಾಟದಿಂದಾಗಿ ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಆಡಳಿತದ ಗುಣಮಟ್ಟ ಅಧೋಗತಿಗೆ ಹೋಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿರುತ್ತದೆ. ಅದೇ ರೀತಿ ಅನೇಕ ಬಾರಿ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿಯಲ್ಲಿ ರಾಜಭವನದಲ್ಲಿಯೇ ದೊಡ್ಡಮಟ್ಟದ ಭ್ರಷ್ಟಾಚಾರವಾಗುತ್ತಿರುವುದು ಸಹ ವರದಿಯಾಗಿರುವುದು ಕಂಡುಬಂದಿರುತ್ತದೆ. ಹಾಗೂ ಈ ಕುರಿತಾಗಿ ಬೆಳಗಾವಿ ಅಧಿವೇಶನದಲ್ಲಿ ಆರ್ ಡಿ ಪಿ ಆರ್ ವಿಶ್ವವಿದ್ಯಾಲಯ ತಿದ್ದುಪಡಿ ಅಧಿನಿಯಮದ ಮೇಲೆ ನಡೆದ ಚರ್ಚೆಯಲ್ಲಿ ಅನೇಕ ಶಾಸಕರು ಈ ಕುರಿತಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿರುವುದು ನಮ್ಮೆಲ್ಲರಿಗೂ ತಿಳಿದ ವಿಷಯವಾಗಿರುತ್ತದೆ.

    ಕುಲಪತಿಗಳಾಗುವ ಬಯಕೆ ಹೊಂದಿದ್ದ ಅನೇಕ ಪ್ರಾಧ್ಯಾಪಕರು ಅನಿವಾರ್ಯವಾಗಿ ತಮ್ಮ ಆಸ್ತಿಗಳನ್ನು ಮಾರಿ, ಸಾಲಾ-ಸೂಲ ಮಾಡಿ ಅಥವಾ ಯಾವುದೋ ಒಬ್ಬ ಶ್ರೀಮಂತರ ಪ್ರಾಯೋಜಕತ್ವ ಪಡೆದು, ಹಣ ಕೊಟ್ಟು ಕುಲಪತಿಗಳು ಸಹ ಆಗದೆ ಮಧ್ಯವರ್ತಿಗಳಿಂದ ಮೋಸ ಹೋಗಿ, ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಸಹ ವರದಿಯಾಗಿರುತ್ತವೆ. ಅಲ್ಲದೆ, ಅನೇಕ ಬಾರಿ ಅರ್ಹತೆ ಇಲ್ಲದವರನ್ನು ಸಹ ಕುಲಪತಿಗಳಾಗಿ ನೇಮಕಾತಿ ಮಾಡಿರುವ ಉದಾರಣೆಗಳು ಇರುತ್ತವೆ. ಮತ್ತು ಅಪಾರ ಪ್ರಮಾಣದ ಹಣ ಕೊಟ್ಟು ಕುಲಪತಿಗಳಾಗಿ ನಂತರ ಪ್ರಾಧ್ಯಾಪಕರ ಹಾಗೂ ಸಿಬ್ಬಂದಿಗಳ ನೇಮಕಾತಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ ಮಾಡಿ, ಜೇಲಿಗೆ ಹೋದಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣು ಮುಂದಿರುತ್ತವೆ.  ಇಂಥಹ ವಿಷಯಗಳನ್ನು ರಾಜ್ಯದ ವಿಧಾನ ಮಂಡಲಗಳಲ್ಲಿಯೂ ಚರ್ಚಿಸಿ, ಈ ಹಿಂದೆಯೂ ಸಹ ಅನೇಕ ಸದಸ್ಯರುಗಳು ಆಕ್ರೋಶವನ್ನು ವ್ಯಕ್ತಪಡಿಸಿರುವುದು ಜಗಜಾಹಿರವಾಗಿರುತ್ತದೆ. ಒಟ್ಟಾರೆಯಾಗಿ ಒಬ್ಬ ವಿಶ್ವವಿದ್ಯಾಲಯದ ಕುಲಪತಿಯ ನೇಮಕಾತಿಯು ಪಾರದರ್ಶಕವಾಗಿ ಹಾಗೂ ಭ್ರಷ್ಟಾಚಾರರಹಿತವಾಗಿ ಆಗುವುದು ಅತಿ ಅವಶ್ಯಕವಾಗಿದೆ. ಕುಲಪತಿಗಳು  ವಿಶ್ವವಿದ್ಯಾಲಯಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಮುಖ್ಯಸ್ಥರಾಗಿದ್ದು ವಿಶ್ವವಿದ್ಯಾಲಯದ ಕಲಿಕೆ, ಸಂಶೋಧನೆ ಹಾಗೂ ಇನ್ನಿತರ ಎಲ್ಲ ಚಟುವಟಿಕೆಗಳು ಅತ್ಯಂತ ಪರಿಣಾಮಕಾರಿಯಾಗಿ ಇಂದಿನ ಖಾಸಗಿ ವಿಶ್ವವಿದ್ಯಾಲಯಗಳು ವ್ಯಾಪಾರೀಕರಣದಿಂದಾಗಿ ಶಿಕ್ಷಣ ಪಡೆಯಲಾಗದ ಹಾಗೂ ಅತಿ ಕಡಿಮೆ ಖರ್ಚಿನಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯಗಳಿಂದ ಉತ್ತಮ ಶಿಕ್ಷಣ ಪಡೆಯುವ ಮಹತ್ವಾಕಾಂಕ್ಷೆ ಇಟ್ಟುಕೊಂಡ ಅನೇಕ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕಾದರೆ  ಒಬ್ಬ ಶ್ರೇಷ್ಠ ಶಿಕ್ಷಣ ತಜ್ಞರು ಹಾಗೂ ಶೈಕ್ಷಣಿಕ ಆಡಳಿತದಲ್ಲಿ ಅಪಾರ ಅನುಭವ ಹೊಂದಿರುವವರನ್ನು ಕುಲಪತಿಗಳಾಗಿ ನೇಮಕ ಮಾಡುವುದು ಅತಿ ಅವಶ್ಯಕವಾಗಿದೆ.

    ಈ ಎಲ್ಲ ಮೇಲಿನ ಸಂಗತಿಗಳಿಂದಾಗಿ ಅದರಲ್ಲಿಯೂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೇರೆ ಬೇರೆ ಪಕ್ಷಕ್ಕೆ ಸೇರಿದ ರಾಜ್ಯಗಳಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ಮಧ್ಯೆ ಕುಲಪತಿಗಳ ನೇಮಕಾತಿಯಲ್ಲಿ ಸಾಕಷ್ಟು ಗೊಂದಲ ಹಾಗೂ ತೊಡಕುಗಳು ಕಂಡುಬಂದಿವೆ. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ಪಕ್ಷಕ್ಕೆ ಸೇರಿದವುಗಳಾಗಿದ್ದರೂ ಸಹ, ಗುಜರಾತ್ ನಂತಹ ರಾಜ್ಯದಲ್ಲಿ ಸರಕಾರ ಹಾಗೂ ರಾಜ್ಯಪಾಲರ ಮಧ್ಯೆ ಕುಲಪತಿಗಳ ನೇಮಕಾತಿಯಲ್ಲಿ ಆಗುತ್ತಿರುವ ತೊಡಕುಗಳನ್ನು ನಿವಾರಿಸಲು ಹಾಗೂ ಪಾರದರ್ಶಕವಾಗಿ ಕುಲಪತಿಗಳನ್ನು ನೇಮಿಸಲು ಗುಜರಾತ್ ಸಾರ್ವಜನಿಕ ವಿಶ್ವವಿದ್ಯಾಲಯಗಳ ಅಧಿನಿಯಮ, 2023 (Gujarat Public Universities Act, 2023) ಅನ್ನು ಜಾರಿಗೊಳಿಸಲಾಗಿದೆ. ಅದಕ್ಕಿಂತಲೂ ಮೊದಲು ಅಲ್ಲಿಯೂ ಸಹ ಕುಲಪತಿಗಳು ರಾಜ್ಯಪಾಲರಿಂದಲೇ ನೇಮಕವಾಗುತ್ತಿದ್ದ ಪದ್ಧತಿಯನ್ನು ಕೈಬಿಟ್ಟು ಕುಲಪತಿಗಳನ್ನು ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ನೇಮಿಸುವ ಹಾಗೂ ಅವರುಗಳನ್ನು ಭ್ರಷ್ಟಾಚಾರ ಅಥವಾ ಇನ್ನಿತರ ಅಕ್ರಮಗಳನ್ನು ಮಾಡಿದಾಗ ಹುದ್ದೆಯಿಂದ ತೆಗೆದು ಹಾಕುವ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರ್ಕಾರವೇ ಇಟ್ಟುಕೊಂಡಿರುವುದು ಗಮನಾರ್ಹವಾಗಿದೆ.

    ಇದರಿಂದಾಗಿ ಈಗ ಗುಜರಾತ್ ರಾಜ್ಯದಲ್ಲಿ ಕುಲಪತಿಗಳ ನೇಮಕಾತಿಯಲ್ಲಿ ಯಾವುದೇ ಗೊಂದಲ ಅಥವಾ ಅನಾವಶ್ಯಕ ವಿಳಂಬವಾಗದೆ ಸಾರ್ವಜನಿಕ ವಿಶ್ವವಿದ್ಯಾಲಯಗಳು ಅತಿ ಪರಿಣಾಮಕಾರಿಯಾಗಿ ತಮ್ಮ ಚಟುವಟಿಕೆಗಳನ್ನು ನಿರ್ವಹಿಸುವಂತಾಗಿದೆ. ಅದರಂತೆ ಅರುಣಾಚಲಪ್ರದೇಶ ರಾಜ್ಯದಲ್ಲಿಯೂ ಸಹ  ಕುಲಪತಿಗಳನ್ನು ರಾಜ್ಯ ಸರ್ಕಾರವೇ ನೇಮಿಸುತ್ತದೆ. ಅದೇ ರೀತಿ ಕರ್ನಾಟಕ ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯದ ಕುಲಪತಿಗಳನ್ನು ರಾಜ್ಯ ಸರ್ಕಾರದಿಂದಲೇ ನೇಮಿಸಿದರೆ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ಮಧ್ಯದಲ್ಲಿಯ  ಸಂಘರ್ಷದಿಂದಾಗಿ ವಿಶ್ವವಿದ್ಯಾಲಯ ಕುಲಪತಿಗಳ ನೇಮಕಾತಿಯ ವಿಳಂಬವನ್ನು ತಪ್ಪಿಸಬಹುದು ಹಾಗೂ ಈಗ ಕುಲಪತಿಗಳ ನೇಮಕಾತಿಯಲ್ಲಿ ಕೇಳಿ ಬಂದ ರಾಜಭವನದಲ್ಲಿಯೂ ಸಹ ಆಗುತ್ತಿದೆ ಎಂದು ಹೇಳಲಾಗುವ ಅಪಾರ ಭ್ರಷ್ಟಾಚಾರವನ್ನು ಸಹ ತಡೆಗಟ್ಟಿ, ಶ್ರೇಷ್ಠ ಶಿಕ್ಷಣ ತಜ್ಞರು ಹಾಗೂ ಅನುಭವಿಗಳನ್ನು ಅವರ ಅರ್ಹತೆಯ ಆಧಾರದ ಮೇರೆಗೆ ನೇಮಕಾತಿ ಮಾಡಲು ಅನುಕೂಲವಾಗುತ್ತದೆ ಹಾಗೂ ವಿಶ್ವವಿದ್ಯಾಲಯಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರವು ಮಾಡಿದಂತ ಈ ನಿರ್ಣಯವು ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯಲ್ಲಿಯ ಸಮಸ್ಯೆಯನ್ನು ಬಗೆಹರಿಸಿ, ವಿಶ್ವವಿದ್ಯಾಲಯಗಳಲ್ಲಿ ಉತ್ತಮವಾದಂತಹ ಕಲಿಕೆ ಹಾಗು ಸಂಶೋಧನಾ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯಲು ದಾರಿದೀಪವಾಗುತ್ತದೆ ಎಂದು ಅನೇಕರ ಬಲವಾದ ನಂಬಿಕೆಯಾಗಿದೆ.

    ಇದರಂತೆ ರಾಜ್ಯ ಸರ್ಕಾರ ಶೀಘ್ರವಾಗಿ ರಾಜ್ಯದ  ಎಲ್ಲಾ ಸಾರ್ವಜನಿಕ ವಿಶ್ವವಿದ್ಯಾಲಯಗಳ ಸಂಬಂಧಿತ ಕಾನೂನುಗಳಲ್ಲಿ ತಿದ್ದುಪಡಿಯನ್ನು ತಂದು, ಖಾಲಿ ಇರುವ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯನ್ನು ಸದರಿ ವಿಶ್ವವಿದ್ಯಾಲಯಗಳ ಕಾಯ್ದೆಗಳ ತಿದ್ದುಪಡಿ ಆದ ನಂತರ, ಶೀಘ್ರವಾಗಿ ಮಾಡಿ, ಸಾರ್ವಜನಿಕ ವಿಶ್ವವಿದ್ಯಾಲಯಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಕ್ರಮ ಜರುಗಿಸುವುದು ಇಂದಿನ ಅವಶ್ಯಕತೆ ಎಂಬುವುದರಲ್ಲಿ ಸಂಶಯವಿಲ್ಲ. ಇಂತಹ ಕ್ರಮದಿಂದಾಗಿ ರಾಜ್ಯ ಸರ್ಕಾರದಿಂದ ಯುಜಿಸಿಯ ಯಾವುದೇ ನಿಯಮಗಳ ಉಲ್ಲಂಘನೆ ಆಗುವುದಿಲ್ಲ, ಏಕೆಂದರೆ ಯುಜಿಸಿ ನಿಯಮಗಳಲ್ಲಿ ʼಶೋಧನಾ ಸಮಿತಿʼ ಆಯ್ಕೆ ಮಾಡಿದ ಮೂರು ತಜ್ಞ ಪ್ರಾಧ್ಯಾಪಕರುಗಳ ಹೆಸರುಗಳಲ್ಲಿ ಒಬ್ಬರನ್ನು ವಿಶ್ವವಿದ್ಯಾಲಯದ ಚಾನ್ಸಲರ್ ಅಥವಾ ಕುಲಾಧಿಪತಿಗಳು  ನೇಮಕ ಮಾಡುವುದು ಎಂದು ಇರುತ್ತದೆ. ಆದ್ದರಿಂದ ವಿಶ್ವವಿದ್ಯಾಲಯಗಳ ಚಾನ್ಸಲರ್ ಅಥವಾ ಕುಲಾಧಿಪತಿಗಳು ರಾಜ್ಯಗಳ ಮಾನ್ಯ ರಾಜ್ಯಪಾಲರೇ ಆಗಬೇಕೆಂಬ ನಿಯಮ ಇರುವುದಿಲ್ಲ. ಆದ್ದರಿಂದಲೇ ಗುಜರಾತ್ ಪಬ್ಲಿಕ್ ಯೂನಿವರ್ಸಿಟಿ ಕಾಯ್ದೆ, 2023ರಲ್ಲಿ ಎಂ.ಎಸ್. ಯೂನಿವರ್ಸಿಟಿ ಬರೋಡದಲ್ಲಿ ಬರೋಡಾದ ಮಹಾರಾಣಿಯರನ್ನೇ ಸದರಿ ಸಾರ್ವಜನಿಕ ವಿಶ್ವವಿದ್ಯಾಲಯದ ಚಾನ್ಸ್‌ಲರ್ ಅಥವಾ ಕುಲಾಧಿಪತಿಗಳಾಗಿ ಹೊಂದಲಾಗಿದೆ. ಆದ್ದರಿಂದ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳನ್ನೇ  ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯಗಳ ಚಾನ್ಸಲರ್ ಅಥವಾ ಕುಲಾಧಿಪತಿಗಳಾಗಿಯೂ ಸಹ ಕಾನೂನಿನಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

    ಇದೇ ರೀತಿ ದೇಶದ ಅನೇಕ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಮಾನ್ಯ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳನ್ನು ಅಥವಾ ರಾಜ್ಯ ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳನ್ನು ವಿಶ್ವವಿದ್ಯಾಲಯಗಳ ಚಾನ್ಸಲರ್ ಅಥವಾ ಕುಲಾಧಿಪತಿಗಳೆಂದು ಆಯಾ ರಾಜ್ಯ ಸರ್ಕಾರಗಳಿಂದ ಮಾಡಿದ ಸದರಿ ವಿಶ್ವವಿದ್ಯಾಲಯಗಳ ಕಾನೂನುಗಳ ಅಡಿಯಲ್ಲಿ ಹೊಂದಲಾಗಿದೆ. ಅದರಂತೆ ರಾಜ್ಯದ ವಿಧಾನ ಮಂಡಲದಲ್ಲಿ ಅನುಮೋದನೆಗೊಂಡು ರಾಜ್ಯಪಾಲರಿಂದ ಅಂಕಿತ ಪಡೆದ ರಾಷ್ಟ್ರೀಯ ಕಾನೂನು ಶಾಲೆ ಅಧಿನಿಯಮದಡಿಯಲ್ಲಿ ಸ್ಥಾಪಿಸಲ್ಪಟ್ಟ (National Law School of India University Act) ರಾಜ್ಯದ ಬೆಂಗಳೂರಿನ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (National Law School of India University) ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಚಾನ್ಸಲರ್ ಅಥವಾ ಕುಲಾಧಿಪತಿಗಳಾಗಿರುತ್ತಾರೆ. ಅಲ್ಲದೆ ಕರ್ನಾಟಕದ ಅನೇಕ ಖಾಸಗಿ ವಿಶ್ವವಿದ್ಯಾಲಯಗಳ ಅಧಿನಿಯಮಗಳಲ್ಲಿ (ಸಂಬಂಧಪಟ್ಟ Karnataka Private Universities Act ಗಳಲ್ಲಿ) ಆಯಾ ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಯ ಅಧ್ಯಕ್ಷರನ್ನು ಅಥವಾ ವಿಶ್ವವಿದ್ಯಾಲಯಗಳ ಸ್ಥಾಪಕರನ್ನು ಚಾನ್ಸಲರ್ ಅಥವಾ ಕುಲಾಧಿಪತಿಗಳೆಂದು  ನೇಮಕಾತಿ ಮಾಡಲು ಸಹ ಅನುವು ಮಾಡಿಕೊಡಲಾಗಿದೆ. ಮತ್ತು ಕುಲಪತಿಗಳ ನೇಮಕಾತಿಯಲ್ಲಿ ಅನುಸರಿಸಬೇಕಾದ ಯುಜಿಸಿ ನಿಯಮಗಳ ಅಡಿಯಲ್ಲಿಯೇ ಮಾಡಲಾದ ದೇಶದ ಅನೇಕ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಯಾವುದೇ ಕುಲಪತಿಗಳ ನೇಮಕಾತಿಯೂ ಸಹ ರಾಜ್ಯದ ರಾಜ್ಯಪಾಲರುಗಳ ನೇಮಕಾತಿಯ ಪರಿಮಿತಿಗೆ ಅಥವಾ ಅನುಮೋದನೆಗೆ ಬರುವುದಿಲ್ಲ.  ಆದ್ದರಿಂದ ಈಗ ರಾಜ್ಯ ಸರ್ಕಾರ ಸರಿಯಾಗಿ ತೀರ್ಮಾನಿಸಿದ ಹಾಗೆ ಮುಖ್ಯಮಂತ್ರಿಗಳನ್ನು ಗ್ರಾಮೀಣಾಭಿವೃದ್ಧಿ  ವಿಶ್ವವಿದ್ಯಾಲಯದ ಕಲಾಧಿಪತಿಗಳನ್ನಾಗಿ ಮಾಡಿ ಸದರಿ ವಿಶ್ವವಿದ್ಯಾಲಯದ ಅಧಿನಿಯಮಕ್ಕೆ ಈಗಾಗಲೇ ಬೆಳಗಾವಿ ಅಧಿವೇಶನದಲ್ಲಿ ಎರಡು ಸದನಗಳಲ್ಲಿ ಸುದೀರ್ಘವಾಗಿ ಚರ್ಚೆಯಾಗಿ ಅನುಮೋದಿಸಿರುವುದು ಅತ್ಯಂತ ಸೂಕ್ತ ಹಾಗೂ ಸಮಂಜಸ ಕ್ರಮವಾಗಿದೆ.  ಆದ್ದರಿಂದ ರಾಜ್ಯದ ಇತರ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೂ ಸಹ ಮಾನ್ಯ ಮುಖ್ಯಮಂತ್ರಿಗಳನ್ನು ಚಾನ್ಸಲರ್ ಅಥವಾ ಕುಲಾಧಿಪತಿಗಳಾಗಿ ಮಾಡುವುದು ಅತಿ ಅವಶ್ಯಕವಾಗಿದೆ.

    ಇದರಲ್ಲಿ ಯಾವುದೇ ಗೊಂದಲ ಅಥವಾ ಕಾನೂನಿನ ತೊಡಕು ಬರುವುದಿಲ್ಲವೆಂಬುದು ಹಾಗೂ ಇಂಥ ತಿದ್ದುಪಡಿಗಳನ್ನು ತರುವ ಎಲ್ಲಾ ಅಧಿಕಾರವು ರಾಜ್ಯ ಸರ್ಕಾರಕ್ಕೆ ಇರುವುದೆಂದು ಅನೇಕ ಕಾನೂನು ತಜ್ಞರ ಅಭಿಪ್ರಾಯವಾಗಿದೆ. ಅದರಂತೆ ಅನೇಕ ಕುಲಪತಿಗಳ ನೇಮಕಾತಿ ಕುರಿತಾದ ಪ್ರಕರಣಗಳಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಯುಜಿಸಿ ನಿಯಮಗಳನ್ನು ರಾಜ್ಯದ ವಿಶ್ವವಿದ್ಯಾಲಯಗಳ ಅಧಿನಿಯಮಗಳಲ್ಲಿ ತಿದ್ದುಪಡಿ ಮೂಲಕ ಅಳವಡಿಕೆ ಮಾಡಿಕೊಳ್ಳಬೇಕೆಂದು ಸಹ ನಿರ್ದೇಶನವಿರುತ್ತದೆ. ಆದ್ದರಿಂದ ರಾಜ್ಯ ಸರ್ಕಾರವು ಮಾಡಿರುವ ಕಾನೂನು ತಿದ್ದುಪಡಿಗಳಿಗೆ ರಾಜ್ಯಪಾಲರು ಯಾವುದೇ ವಿಳಂಬ ಹಾಗೂ ಮೊಂಡು ಹಠ ಮಾಡದೆ, ಸಾರ್ವಜನಿಕ ವಿಶ್ವವಿದ್ಯಾಲಯಗಳ ತಿದ್ದುಪಡಿ ಅಧಿನಿಯಮಗಳಿಗೆ ಶೀಘ್ರವಾಗಿ ತಮ್ಮ ಅಂಗೀಕಾರ ನೀಡಿ, ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯಗಳು ಸುಗಮವಾಗಿ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕೆಂಬುದು ಹಾಗೂ ಒಂದು ಹೊಸ ಪ್ರಯೋಗಕ್ಕೆ ನಾಂದಿ ಹಾಡಬೇಕೆಂದು ಅನೇಕ ಸಾರ್ವಜನಿಕರ ಹಾಗೂ ಶಿಕ್ಷಣ ಮತ್ತು ಕಾನೂನು ತಜ್ಞರ ಅಭಿಪ್ರಾಯ ಹಾಗೂ ಒತ್ತಾಯವಾಗಿದೆ.

    ಮುಂದುವರೆದು ಈ ನಿರ್ಧಾರವನ್ನು ಪಕ್ಷಾತೀತವಾಗಿ ಯಾವುದೇ ರಾಜಕೀಯ ಮಾಡದೆ, ಸಾರ್ವಜನಿಕ ವಿಶ್ವವಿದ್ಯಾಲಯಗಳ ಹಿತಾಸಕ್ತಿಯಲ್ಲಿ ಹಾಗೂ ಅವುಗಳ ಪರಿಣಾಮಕಾರಿ ನಿರ್ವಹಣೆಗಾಗಿ ಸಹಕರಿಸಬೇಕೆಂದು ಸಹ ಅನೇಕರ ಒತ್ತಾಯವಾಗಿದೆ. ಈ ವಿಷಯದಲ್ಲಿ ಗುಜರಾತ್ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಮಾಡಿದ ಕ್ರಮವನ್ನು ನಮ್ಮ ರಾಜ್ಯದಲ್ಲಿಯೂ ಸಹ ತರುವುದು ಅತ್ಯಂತ ಅವಶ್ಯಕ ಹಾಗೂ ಅನಿವಾರ್ಯ ಎಂಬುದನ್ನು ಸಂಬಂಧಪಟ್ಟವರೆಲ್ಲರೂ ಸಹ ಅರ್ಥಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಬದಲಾವಣೆ ತಂದಿರುವುದನ್ನು ಸ್ವಾಗತಿಸುವ ಬದಲು ವಿರೋಧ ಪಕ್ಷದವರು ಹಾಗೂ ಕೆಲವು ವಿದ್ಯಾರ್ಥಿ ಸಂಘಟನೆಗಳು ಅನಾವಶ್ಯಕವಾಗಿ ವಿರೋಧಿಸುತ್ತಿರುವುದು ಅತ್ಯಂತ ದುರದಷ್ಟಕರ ಹಾಗೂ ವಿದ್ಯಾರ್ಥಿ ಮತ್ತು ಸುಧಾರಣೆ ವಿರೋಧಿ ಧೋರಣೆಯಾಗಿದೆ. ಆದ್ದರಿಂದ ಸದರಿ ಕಾನೂನುಗಳ ತಿದ್ದುಪಡಿಗಳಿಗೆ ಬೆಂಬಲಿಸಿ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಬಡವರಿಗೆ ಸಿಗುವಂತಾಗಲು ಸದರಿ ತಿದ್ದುಪಡಿಗಳನ್ನು ಬೆಂಬಲಿಸಬೇಕೆಂದು ಒತ್ತಾಯಿಸುತ್ತೇನೆ.

    ಆದರೆ ದುರದೃಷ್ಟವಶಾತ್ ಈಗ ಉನ್ನತ ಶಿಕ್ಷಣ ಇಲಾಖೆಯವರು ಸಚಿವ ಸಂಪುಟ ಹಾಗೂ ಉಭಯ ಸದನಗಳ ತೀರ್ಮಾನಗಳಿಗೆ ವ್ಯತಿರಿಕ್ತವಾಗಿ ರಾಜ್ಯದ ಐದು ವಿಶ್ವವಿದ್ಯಾಲಯಗಳಾದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ರಾಯಚೂರು ವಿಶ್ವವಿದ್ಯಾಲಯ ರಾಯಚೂರು, ಗುಲ್ಬರ್ಗ ವಿಶ್ವವಿದ್ಯಾಲಯ ಕಲ್ಬುರ್ಗಿ,  ಡಾ.ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ, ಮೈಸೂರು,  ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ  ವಿಜಯಪುರ ಇವುಗಳ ಕುಲಪತಿಗಳ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅರ್ಥಶಾಸ್ತ್ರ ವಿಶ್ವವಿದ್ಯಾಲಯ ಬೆಂಗಳೂರು ಇದರ ಕುಲಪತಿ ನೇಮಕಾತಿಗಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿ, ಅರ್ಜಿಗಳನ್ನು ಆಹ್ವಾನಿಸಿರುವುದು ಹಾಗೂ  ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಹಾಗೂ ಇತರ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿ ಪ್ರಕ್ರಿಯೆಯನ್ನು  ಪ್ರಾರಂಭಿಸಿರುವುದು ಅತ್ಯಂತ ಖೇದದ ಸಂಗತಿಯಾಗಿರುತ್ತದೆ. ಅದರಿಂದ ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ಹಾಗೂ ಇತರ ಸಂಬಂಧಪಟ್ಟ ಸಚಿವರಿಗೆ ಸೂಕ್ತ ನಿರ್ದೇಶನವನ್ನು ನೀಡಿ ಈಗಾಗಲೇ ನೀಡಲಾದ ಅಧಿಸೂಚನೆಗಳನ್ನು ಹಾಗೂ ಎಲ್ಲಾ ಪ್ರಕ್ರಿಯೆಗಳನ್ನು ತಕ್ಷಣವೇ ಸ್ಥಗಿತಗೊಳಿಸಿ, ಸದರಿ ವಿಶ್ವವಿದ್ಯಾಲಯಗಳ ಅಧಿನಿಯಮಗಳಲ್ಲಿ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಸೂಕ್ತ ತಿದ್ದುಪಡಿ ಮಾಡಿ, ಈಗಾಗಲೇ ಗ್ರಾಮೀಣಾಭಿವೃದ್ಧಿ ಪಂಚಾಯತ ವಿಶ್ವವಿದ್ಯಾಲಯದಲ್ಲಿ ಮಾಡಿದ ಹಾಗೆ ಮಾನ್ಯ ಮುಖ್ಯಮಂತ್ರಿಗಳನ್ನು ಸದರಿ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೆಂದು ನಾಮಕರಿಸಿ ಸದರಿ ತಿದ್ದುಪಡಿಗಳನ್ನು ಮುಂಬರುವ ಸದನಗಳಲ್ಲಿ ಅನುಮೋದನೆ ಪಡೆದು, ಅದರ ಪ್ರಕಾರ ಹೊಸ ಕಾಯಂ ಕುಲಪತಿಗಳನ್ನು ನೇಮಿಸಲು ಆಗ್ರಹಪೂರ್ವಕವಾಗಿ ವಿನಂತಿಸುತ್ತೇನೆ.

    ಈ ಹಿಂದೆಯೂ ಸಹ ವಿಶ್ವವಿದ್ಯಾಲಯಗಳ ಕುಲಪತಿಗಳ ಹುದ್ದೆಗಳು ಖಾಲಿ ಇರುವಾಗ ಅಲ್ಲಿಯ ಹಿರಿಯ ಡೀನರುಗಳನ್ನು ಹಂಗಾಮಿ ಕುಲಪತಿಗಳನ್ನಾಗಿ ನೇಮಿಸಿ, ವರ್ಷಾನುಗಟ್ಟಲೆ ವಿಶ್ವವಿದ್ಯಾಲಯದ ಆಡಳಿತವನ್ನು ಪರಿಣಾಮಕಾರಿಯಾಗಿ ನಡೆಸಿರುವ ಉದಾಹರಣೆಗಳು ಸಾಕಷ್ಟು ಇವೆ.  ಆದ್ದರಿಂದ ಸರ್ಕಾರ ಯಾವುದೇ ಆತುರ ಮಾಡದೆ, ಈಗಾಗಲೇ ಸಚಿವ ಸಂಪುಟ ಹಾಗೂ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕೃತವಾದ ಸಾರ್ವಜನಿಕ ವಿಶ್ವವಿದ್ಯಾಲಯಗಳ ಅಧಿನಿಯಮಗಳಲ್ಲಿ ಸೂಕ್ತ ಬದಲಾವಣೆ ತಂದು, ಹೊಸ ಕುಲಪತಿಗಳನ್ನು ನೇಮಕ ಮಾಡಬೇಕೆಂದು ಬಲವಾಗಿ ಆಗ್ರಹಿಸುತ್ತೇನೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ವಿಶ್ವವಿದ್ಯಾಲಯ ಅಧಿನಿಯಮ, 2024 ಹಾಗೂ ಇತರ ವಿಶ್ವವಿದ್ಯಾಲಯಗಳ ತಿದ್ದುಪಡಿ ಅಧಿನಿಯಮಗಳಿಗೆ ಮಾನ್ಯ ರಾಜ್ಯಪಾಲರು ತಕ್ಷಣವೇ ಅನುಮೋದನೆಯನ್ನು ನೀಡಬೇಕೆಂದು ಸಹ ಆಗ್ರಹಿಸುತ್ತೇನೆ. ಮಾನ್ಯ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ಪ್ರಕರಣಗಳಲ್ಲಿ ಅಂದರೆ ತಮಿಳುನಾಡು, ಕೇರಳ, ಪಂಜಾಬ್ ರಾಜ್ಯಗಳ ಪ್ರಕರಣಗಳಲ್ಲಿ ಸುದೀರ್ಘವಾಗಿ ಚರ್ಚಿಸಿ, ರಾಜ್ಯದ ರಾಜ್ಯಪಾಲರುಗಳಿಗೆ ಉಭಯ ಸದನಗಳಲ್ಲಿ ಅನುಮೋದನೆಗೊಂಡ ಅಧಿನಿಯಮಗಳನ್ನು ಅನಾವಶ್ಯಕವಾಗಿ ಅಂಗೀಕರಿಸದೆ ಇರುವುದು ಅಥವಾ ವಿಳಂಬ ಮಾಡುವುದು ಸಂವಿಧಾನ ವಿರೋಧಿ ಧೋರಣೆ ಎಂದು ಕಟುವಾಗಿ ಹೇಳಿರುವುದನ್ನು ಅರ್ಥ ಮಾಡಿಕೊಂಡು ಸಂವಿಧಾನದ ಆಶಯಗಳಂತೆ ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ  ನಡೆಯುವುದು ಮಾನ್ಯ ರಾಜ್ಯಪಾಲರ ಕರ್ತವ್ಯವಾಗಿದೆ ಎಂದು ಹೇಳಬಯಸುತ್ತೇನೆ.

     

    –ಡಾ.ಬಾಬಾಸಾಹೇಬ  ಎಲ್. ಜಿನರಾಳ್ಕರ್

    ವಿಶ್ರಾಂತ  ಜಿಲ್ಲಾ  ನ್ಯಾಯಾಧೀಶರು ಹಾಗೂ ಕಾನೂನು ಸಲಹೆಗಾರರು,  ಡಾ. ಬಿ.ಆರ್.‌ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬೆಂಗಳೂರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ನಿಜವಾದ ದಾನಿ

    April 4, 2025

    ರಾಜನ ಹಿಂದಿನ ಜನುಮ

    April 2, 2025

    ಏಪ್ರಿಲ್ 1: ಪ್ರತಿ ನಿತ್ಯವೂ ನಾವು ಫೂಲ್ ಗಳಾಗುತ್ತೇವೆ

    April 1, 2025
    Our Picks

    ಉತ್ತರಾಖಂಡದ ಗಂಗೋತ್ರಿ ದೇಗುಲಕ್ಕೆ ತೆರಳುತ್ತಿದ್ದ ಹೆಲಿಕಾಫ್ಟರ್ ಪತನ: 6 ಮಂದಿ ಸಾವು

    May 8, 2025

    ಪಾಕ್ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ: 15 ಭಾರತೀಯ ನಾಗರಿಕರು ಸಾವು, ಹಲವರಿಗೆ ಗಾಯ

    May 8, 2025

    ಅಗತ್ಯ ಬಿದ್ದರೆ ಭಾರತದೊಂದಿಗೆ ನಾವು ನಿಲ್ಲುತ್ತೇವೆ: ಇಸ್ರೇಲ್

    April 25, 2025

    ನಾವಿಲ್ಲಿ ಕಷ್ಟದಲ್ಲಿದ್ದೇವೆ, ನೀವು ಹೇಗೆ ಸಂಭ್ರಮಿಸುತ್ತೀರಿ ಎಂದು ಗುಂಡು ಹಾರಿಸಿಯೇ ಬಿಟ್ಟ!

    April 25, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು: ಪಾಲಿಕೆ ಆಯುಕ್ತರಿಂದ ಇಂದಿರಾ ಕ್ಯಾಂಟೀನ್ ಪರಿಶೀಲನೆ

    May 8, 2025

    ತುಮಕೂರು: ಮಹಾನಗರಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಅವರು ಬುಧವಾರ ಪಾಲಿಕೆ ವ್ಯಾಪ್ತಿಯಲ್ಲಿರುವ 4 ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.…

    ಪ.ಜಾತಿಗಳ ಸಮಗ್ರ ಸಮೀಕ್ಷೆ: ಪ್ರತೀ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಡೀಸಿ ಸೂಚನೆ

    May 8, 2025

    ಮಳೆ ಹಾನಿ : 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ : ಡೀಸಿ ಖಡಕ್ ಸೂಚನೆ

    May 8, 2025

    ಮಳೆಗಾಲದಲ್ಲಿ ವಿದ್ಯುತ್ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಡೀಸಿ ಸೂಚನೆ

    May 8, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.