- ಆನಂದ್, ತಿಪಟೂರು
ತಿಪಟೂರು: ತೀರ್ವ ಕುತೂಹಲ ಕೆರಳಿಸಿದ್ದ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ಕಾಂಗ್ರೆಸ್ ನ ಕೆ.ಷಡಕ್ಷರಿ 17662 ಮತಗಳ ಅಂತರದಿಂದ ಜಯಗಳಿಸಿದ್ದು ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.
ಈ ಬಾರಿಯ ವಿಧಾನಸಭಾ ಚುನಾವಣಾ ಕಣದಲ್ಲಿ ತಿಪಟೂರು ಕ್ಷೇತ್ರದಿಂದ ಒಟ್ಟು 12 ಜನರು ಅಭ್ಯರ್ಥಿಗಳೂ ಇದ್ದರು ಇವರಲ್ಲಿ ಕೆ.ಷಡಕ್ಷರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ 71415 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಶಿಕ್ಷಣ ಸಚಿವ ನಾಗೇಶ್ ವಿರುದ್ದ 17662 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
ಚುನಾವಣೆ ಪ್ರಾರಂಭವಾದಾಗಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಜೋರಾಗಿಯೇ ಸಾಗುತ್ತಿತ್ತು. ಚುನಾವಣೆಗೆ ಕೆಲವೇ ದಿನಗಳಿರುವ ಸಂದರ್ಭದಲ್ಲಿ ನೀಲಕಂಠಸ್ವಾಮಿ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರ ಪುತ್ತಳಿ ಸ್ಥಾಪನೆ ವಿಚಾರವಾಗಿ ನಡೆದ ಸಂಭಾಷಣೆಯ ಸಂಪೂರ್ಣ ಲಾಭ ಮತ್ತು ಕಳೆದ ಬಾರಿ ಶೋಭಾ ಕರಂದ್ಲಾಜೆ ಭಾಷಣ ಮಾಡುವಾಗ ಬಿ.ಸಿ.ನಾಗೇಶ್ ಯಡಿಯೂರಪ್ಪನವರ ಬಲದಿಂದ ಗೆದ್ದು ಅನಂತಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಮತಚಲಾಯಿಸಿದ್ದರು ಎಂಬ ವಿಡಿಯೋ ಲಿಂಗಾಯತರನ್ನು ಕೆರಳಿಸಿತ್ತು. ಇದರ ಪರಿಣಾಮವಾಗಿ ನಾಗೇಶ್ ಸೋಲನುಭವಿಸಿದ್ದಾರೆ ಎನ್ನುವ ಚರ್ಚೆ ಕೇಳಿ ಬಂದಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ ಚುನಾವಣೆಯಾಗಿ ಕಂಡುಬಂದಿದ್ದು ಉಳಿದ ಅಭ್ಯರ್ಥಿಗಳು 500 ಮತಗಳನ್ನು ಪಡೆಯಲು ವಿಫಲವಾಗಿದ್ದು, 640 ಮತಗಳನ್ನು ಪಡೆದ ಆಪ್ ನ ಚಂದ್ರಶೇಖರ್ 4ನೇ ಸ್ಥಾನವನ್ನು, 5ನೇ ಸ್ಥಾನವನ್ನು 635 ಮತಗಳನ್ನು ಪಡೆದ ನೋಟಾ ಪಡೆದುಕೊಂಡಿದ್ದು ಕಳೆದ ಬಾರಿ 3000ಕ್ಕೂ ಹೆಚ್ಚು ಮತಗಳನ್ನು ಪಡೆದು ಗಮನ ಸೆಳೆದಿದ್ದ ಪಕ್ಷೇತರ ಅಭ್ಯರ್ಥಿ ಕುಮಾರಸ್ವಾಮಿ 468 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಜೋಡೆತ್ತುಗಳ ಪಟ್ಟಿಗೆ ತತ್ತರಿಸಿದ ಶಿಕ್ಷಣ ಸಚಿವ :
ಕಾಂಗ್ರೆಸ್ ಪಕ್ಷದಲ್ಲಿ ಕೆ.ಷಡಕ್ಷರಿ ಅವರಿಗೆ ಟಿಕೆಟ್ ಘೋಷಣೆಯಾದ ಮೇಲೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಲೋಕೇಶ್ವರ್, ಷಡಕ್ಷರಿ ಅವರಿಗೆ ಬೆಂಬಲ ಘೋಷಿಸಿ ಕಾರ್ಯಾಚರಣೆಗೆ ಇಳಿದ ಮೇಲೆ ಕಾಂಗ್ರೆಸ್ ಬಲ ಹೆಚ್ಚಾಗುತ್ತಾ ಸಾಗಿತು. ಕೆ.ಷಡಕ್ಷರಿ ಮತ್ತು ಲೋಕೇಶ್ವರ್ ಎಂಬ ಜೋಡೆತ್ತುಗಳ ಕಾರ್ಯತಂತ್ರ ಮತ್ತು ಹೆಚ್ಚಿನದಾಗಿ ಕಳೆದ ಚುನಾವಣೆಗಳ್ಳಿ ಸಾಮಾಜಿಕ ಜಾಲತಾಣವನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಕಲಿತ ಇವರಿಬ್ಬರು ನಾಗೇಶ್‌ರ ತಪ್ಪುಗಳನ್ನು ಸಾಮಾಜಿಕ ಜಾಲತಣಾದಲ್ಲಿ ಪ್ರಚಾರಕ್ಕೆ ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿಯೇ ಅರ್ಧಮತಗಳನ್ನು ಪರಿವರ್ತಿಸಿಕೊಂಡು ಶಿಕ್ಷಣ ಸಚಿವರಿಗೆ ಸಾಮಾಜಿಕ ಜಾಲತಾಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಪಾಠಮಾಡಿ ಸೋಲಿನ ಪಾಠಕಲಿಸಿದ್ದಾರೆ.
ತಿಪಟೂರಿಗೆ ಮತ್ತೆ ಮಂತ್ರಿಭಾಗ್ಯ ಸಿಗುವುದೇ?:ಕಳೆದ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಸಚಿವ ಸ್ಥಾನದ ಅಂಚಿನಲ್ಲಿದ್ದು ಕಾರಣಾಂತರದಿಂದ ಸಚಿವಸ್ಥಾನದಿಂದ ವಂಚಿತರಾಗಿದ್ದ ಕೆ.ಷಡಕ್ಷರಿಯವರಿಗೆ ಈ ಬಾರಿ ಮಂತ್ರಿ ಭಾಗ್ಯ ದೊರೆಯುವ ಸಾಧ್ಯತೆ ಹೆಚ್ಚಾಗಿದೆ.
ತಾಲ್ಲೂಕಿನಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮವನ್ನು ಆಚರಿಸುತ್ತಿದ್ದರೆ, ಬಿ.ಜೆ.ಪಿಯ ಬೆಂಬಲಿಗರಲ್ಲಿ ಮಾತ್ರ ಸೂತಕ ಛಾಯೆ ಆವರಿಸಿದೆ. ಆದರೆ ಚುನಾವಣೆ ಮುಗಿಯುತು ಇನ್ನೇನಿದ್ದರು ಎಲ್ಲರೂ ಅಣ್ಣ-ತಮ್ಮಂದಿರು ಎಂಬ ಭಾವನೆಯಲ್ಲಿ ತಿಪಟೂರನ್ನು ಜಿಲ್ಲೆಯನ್ನಾಗಿಸಿ ಅಭಿವೃದ್ಧಿಗಾಗಿ ಪಕ್ಷಭೇದ ಬಿಟ್ಟು ದುಡಿಯೋಣ ಎಂದು ಸಾಗಬೇಕಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy