ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದ ಬಳಿ ಮದುವೆ ಸಮಾರಂಭಕ್ಕೆ ಬಂದಿದ್ದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಲಿಯೂರು ಗ್ರಾಮದ ನಿವಾಸಿ ಪ್ರಿಯಾಂಕ (29) ನಾಪತ್ತೆಯಾದ ಮಹಿಳೆ. ಇವರು ಫೆಬ್ರವರಿ 12ರಂದು ಚಿಕ್ಕಮಗಳೂರಿನಲ್ಲಿ ನಡೆದ ಮದುವೆ ಸಮಾರಂಭಕ್ಕೆ ಆಗಮಿಸಿದ್ದರು. ಮದುವೆ ಮುಗಿಸಿ ತವರು ಮನೆ ಮತ್ತಾವರಕ್ಕೆ ಬಂದಿದ್ದ ಅವರು, ಅಲ್ಲಿಂದ ಬೇಲೂರಿಗೆ ಬಸ್ ಹತ್ತಿದ್ದರು.
ಬೇಲೂರಿನಲ್ಲಿ ಬಸ್ ಇಳಿದ ನಂತರ ತಮ್ಮ ಚಿಕ್ಕಮ್ಮನಿಗೆ ಕರೆ ಮಾಡಿದ್ದ ಪ್ರಿಯಾಂಕ, “ಪರಿಚಯಸ್ಥರು ಸಿಕ್ಕಿದ್ದಾರೆ, ಅವರ ಜೊತೆ ಹೋಗುತ್ತಿದ್ದೇನೆ” ಎಂದು ತಿಳಿಸಿದ್ದರು. ಅತ್ತ ಪತಿ ರುದ್ರೇಶ್ ಅವರಿಗೆ ಕರೆ ಮಾಡಿ ಕುಣಿಗಲ್ ಗೆ ಬಂದು ಪಿಕಪ್ ಮಾಡಿಕೊಳ್ಳುವಂತೆ ತಿಳಿಸಿದ್ದರು. ಆದರೆ, ರಾತ್ರಿ 8:30ರ ನಂತರ ಅವರ ಫೋನ್ ಸ್ವಿಚ್ ಆಫ್ ಆಗಿದೆ.
ಕೊಲೆ ಶಂಕೆ ಏಕೆ?
ಪ್ರಿಯಾಂಕ ನಾಪತ್ತೆಯಾದ ನಂತರ ಹುಡುಕಾಟ ನಡೆಸಿದಾಗ, ಹಾಸನ ತಾಲೂಕಿನ ಕಲ್ಕೆರೆ ಗ್ರಾಮದ ಬಳಿ ಅವರ ಒಳ ಉಡುಪು, ಚಪ್ಪಲಿ ಮತ್ತು ವ್ಯಾನಿಟಿ ಬ್ಯಾಗ್ ಪತ್ತೆಯಾಗಿವೆ. ನಾಪತ್ತೆಯಾದ ಸಮಯದಲ್ಲಿ ಪ್ರಿಯಾಂಕ ಮೈಮೇಲೆ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದವು (ನೆಕ್ಲೇಸ್, ಎರಡು ಎಳೆ ಸರ, ಕಿವಿಯೋಲೆ, ಉಂಗುರ). ಈ ಅಪಾರ ಪ್ರಮಾಣದ ಚಿನ್ನದ ಆಸೆಗಾಗಿ ಯಾರೋ ಅವರನ್ನು ಕೊಲೆ ಮಾಡಿ ಸಮೀಪದ ಕೆರೆಗೆ ಶವ ಎಸೆದಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದಾರೆ.
ತನಿಖೆ ಚುರುಕು: ಸ್ಥಳಕ್ಕೆ ಹಾಸನ ಎಸ್ ಪಿ ಶುಭನಿತ್ವಾ, ಶ್ವಾನದಳ ಮತ್ತು ವಿಧಿವಿಜ್ಞಾನ ತಂಡ (FSL) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆಯ ಸುತ್ತಮುತ್ತ ಡ್ರೋನ್ ಕ್ಯಾಮೆರಾ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ. ಪ್ರಿಯಾಂಕ ಅವರ ಮೊಬೈಲ್ ಲೊಕೇಶನ್ ಕೊನೆಯದಾಗಿ ಕಲ್ಕೆರೆ ಬಳಿಯೇ ತೋರಿಸುತ್ತಿದ್ದು, ಆ ಮಾರ್ಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ.
ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಮಹಿಳೆಯ ಪತ್ತೆಗಾಗಿ ತೀವ್ರ ಶೋಧ ಮುಂದುವರಿದಿದೆ. ಈ ಘಟನೆ ಸ್ಥಳೀಯರಲ್ಲಿ ಹಾಗೂ ಕುಟುಂಬಸ್ಥರಲ್ಲಿ ಭೀತಿ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


