ತುಮಕೂರು: ಜಗತ್ತಿನಾದ್ಯಂತ ನಡೆಯುತ್ತಿರುವ ಯುದ್ಧಗಳು, ಧರ್ಮ ಮತ್ತು ಸಂಪ್ರದಾಯದ ಕಟ್ಟುಪಾಡುಗಳು ಹಾಗೂ ಬಂಡವಾಳಶಾಹಿಗಳ ಶೋಷಣೆಯಿಂದಾಗಿ ಮಹಿಳೆಯರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 8ರಂದು ನಗರದ ಜನ ಚಳುವಳಿ ಕೇಂದ್ರದಲ್ಲಿ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ, ಸಿಐಟಿಯು ಮತ್ತು ಜನವಾದಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಶ್ವ ದುಡಿಯುವ ಮಹಿಳೆಯರ ದಿನಾಚರಣೆ’ ಕಾರ್ಯಕ್ರಮದಲ್ಲಿ ಈ ಗಂಭೀರ ಅಭಿಪ್ರಾಯ ವ್ಯಕ್ತವಾಯಿತು.
ಮೀನಾಕ್ಷಿ (ತುಮಕೂರು ಜಿಲ್ಲಾ ತಾಂತ್ರಿಕ ಸಂಸ್ಥೆಗಳ ಬೋಧಕೇತರ ನೌಕರರ ಸಂಘ): ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಅಂದು ಬ್ರೆಡ್ ಪೀಸ್ ಗಾಗಿ ಮಹಿಳಾ ಕಾರ್ಮಿಕರು ಆರಂಭಿಸಿದ ಚಳುವಳಿ ಇಂದು ಜಾಗತಿಕ ಇತಿಹಾಸ ಸೃಷ್ಟಿಸಿದೆ. ಮಹಿಳೆಯರು ಎಲ್ಲಾ ತಾರತಮ್ಯಗಳ ವಿರುದ್ಧ ಐಕ್ಯತೆಯಿಂದ ಹೋರಾಡಬೇಕು,” ಎಂದರು.
ಕರಿಯಮ್ಮ ಮಾತನಾಡಿ, ಗುತ್ತಿಗೆ ಆಧಾರಿತ ಮಹಿಳಾ ಕಾರ್ಮಿಕರ ನೋವನ್ನು ಹಂಚಿಕೊಂಡ ಅವರು, “ತಿಂಗಳ ಸಮಸ್ಯೆಯ ದಿನಗಳಲ್ಲೂ ವಿಶ್ರಾಂತಿ ಇಲ್ಲದೆ ದುಡಿಯಬೇಕಾದ ಸ್ಥಿತಿ ಇದೆ. ಏನಾದರೂ ಕಷ್ಟ ಹೇಳಿಕೊಂಡರೆ ಕೆಲಸ ಬಿಟ್ಟು ಹೋಗು ಎನ್ನುವ ಬೆದರಿಕೆ ಎದುರಿಸುತ್ತಿದ್ದೇವೆ,” ಎಂದು ಬೇಸರ ವ್ಯಕ್ತಪಡಿಸಿದರು.
ಕಟ್ಟಡ ಕಾರ್ಮಿಕರ ಸಂಘದ ರೇಣುಕಮ್ಮ ಮಾತನಾಡಿ, ಅಸಂಘಟಿತ ವಲಯದ ಮಹಿಳೆಯರಿಗೆ ಸಮಾನ ಕೂಲಿ ಮತ್ತು ಕೆಲಸದ ಸ್ಥಳದಲ್ಲಿ ಸುರಕ್ಷತೆ ಇಲ್ಲದಿರುವುದನ್ನು ಪ್ರಸ್ತಾಪಿಸಿ, ವಲಸೆ ಕಾರ್ಮಿಕ ಮಹಿಳೆಯರ ಸ್ಥಿತಿಯತ್ತ ಸರ್ಕಾರದ ಗಮನ ಸೆಳೆದರು.
ವಿದ್ಯಾರ್ಥಿನಿ ನಾಗರತ್ನ, “ಸಮಾಜದಲ್ಲಿ ಅತ್ಯಾಚಾರ, ವರದಕ್ಷಿಣೆ ಕಿರುಕುಳಗಳು ನಿಲ್ಲುತ್ತಿಲ್ಲ. ಅಪರಾಧಿಗಳಿಗೆ ಕಾನೂನಿನ ಭಯವಿಲ್ಲದಂತಾಗಿದೆ. ಕೆಲವು ರಾಜಕೀಯ ಪಕ್ಷಗಳು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಇಂತಹ ಕೃತ್ಯಗಳಿಗೆ ಬೆಂಬಲ ನೀಡುತ್ತಿರುವುದು ವಿಷಾದನೀಯ,” ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಟಿ.ಆರ್. ಕಲ್ಪನಾ ಅವರು ಮಾತನಾಡಿ, “ಮಹಿಳಾ ಸಮಾನತೆ ಎಂಬುದು ಯಾರೋ ನೀಡುವ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು. ಶರಣ ಚಳುವಳಿ, ಜ್ಯೋತಿಬಾ ಫುಲೆ ಮತ್ತು ಫಾತಿಮಾ ಶೇಖ್ ಅವರ ಹೋರಾಟದ ಹಾದಿಯಲ್ಲಿ ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆಯಬೇಕಿದೆ,” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್, ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಉಪಸ್ಥಿತರಿದ್ದರು. ಮನೆಗೆಲಸಗಾರರ ಸಂಘದ ಪಲ್ಲವಿ ಸ್ವಾಗತಿಸಿದರೆ, ವಿದ್ಯಾರ್ಥಿನಿ ಜ್ಯೋತಿ ವಂದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


