ತುಮಕೂರು: ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ಈ ನಿಟ್ಟಿನಲ್ಲಿ ಗ್ರಾಮಗಳ ಅಭಿವೃದ್ಧಿಗೆ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿ–ನೌಕರರು ಶ್ರಮಿಸಬೇಕೆಂದು ನವದೆಹಲಿಯ ಕರ್ನಾಟಕ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ. ಜಯಚಂದ್ರ ಕರೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ಶುಕ್ರವಾರ ನಗರದ ಜಿಲ್ಲಾ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಅನುಮೋದನಾ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿ–ನೌಕರರು ಹಿಂದುಳಿಯಬಾರದು. ಪಂಚಾಯತಿ ವ್ಯಾಪ್ತಿಯ ಜನರು ಉದ್ಯೋಗವಿಲ್ಲದೆ ಹಸಿವಿನಿಂದ ಬಳಲಬಾರದೆಂಬ ದೃಷ್ಟಿಯಿಂದ ಮಾಜಿ ಪ್ರಧಾನಿ ದಿ.ಮನ್ಮೋಹನ್ ಸಿಂಗ್ ಅವರು ಜಾರಿಗೆ ತಂದಿರುವ “ಮಹಾತ್ಮಗಾಂಧಿ ಉದ್ಯೋಗ ಖಾತ್ರಿ(ನರೇಗಾ)” ಯೋಜನೆಯಿಂದ ಎಷ್ಟೋ ಬಡಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಪಾರಾಗಿವೆ. ನರೇಗಾದಂತಹ ವಿಶೇಷ ಯೋಜನೆ ಜಾರಿಗೆ ಸಂಬಂಧಿಸಿದಂತೆ ಪ್ರಾರಂಭದಲ್ಲಿ ಹಲವಾರು ಟೀಕೆಗಳು ವ್ಯಕ್ತವಾದರೂ ಯೋಜನೆ ಯಶಸ್ವಿಯಾಗಿ ಅನುಷ್ಟಾನವಾಗುತ್ತಿದೆ. ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 750 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿಗಳನ್ನು ಅನುಷ್ಠಾನ ಮಾಡುತ್ತಿರುವುದು ಯೋಜನೆಯ ಯಶಸ್ಸಿಗೆ ನಿದರ್ಶನವಾಗಿದೆ. ಬಡವರಿಗೆ, ನಿರ್ಗತಿಕರಿಗೆ ಈ ಯೋಜನೆ ಶಕ್ತಿ ನೀಡಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲಾಗುತ್ತಿದ್ದು, ಶಾಲಾಭಿವೃದ್ದಿ ಕಾಮಗಾರಿಗಳಾದ ಕಾಂಪೌಂಡ್, ಶೌಚಾಲಯ, ಆಟದ ಮೈದಾನ, ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳಾದ ಚರಂಡಿ, ರಸ್ತೆ, ಅಂಗನವಾಡಿ, ಆಸ್ಪತ್ರೆಗಳನ್ನು ಅಭಿವೃದ್ದಿ ಪಡಿಸುವ ಮೂಲಕ ಜಿಲ್ಲೆಯು ರಾಜ್ಯದಲ್ಲಿ ಮಾದರಿಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 766 ಸಿಬ್ಬಂದಿಯವರಿಗೆ ಅನುಮೋದನೆ ಪತ್ರ ನೀಡುವ ಮೂಲಕ ಖಾಯಂಗೊಳಿಸಿರುವುದಕ್ಕೆ ಜಿಲ್ಲಾ ಪಂಚಾಯತಿಗೆ ಅಭಿನಂದಿಸುತ್ತೇನೆ. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಏಕಕಾಲದಲ್ಲಿ 766 ಜನಕ್ಕೆ ಅನುಮೋದನಾ ಪತ್ರ ನೀಡಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ. ಇತರೆ ಜಿಲ್ಲೆಗಳಲ್ಲಿಯೂ ಇಂತಹ ಕಾರ್ಯಕ್ರಮ ಏರ್ಪಡಿಸಿ ಪಂಚಾಯತಿ ನೌಕರರಿಗೆ ಅನುಮೋದನೆ ಪತ್ರ ನೀಡುವಂತಾಗಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯಯ ಲಭಿಸಿ 77 ವರ್ಷಗಳು ಕಳೆದಿದ್ದರೂ ದೇಶದ ಎಲ್ಲಾ ಗ್ರಾಮಗಳು ಅಭಿವೃದ್ಧಿಯಾದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತಾಗುತ್ತದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನಾವೆಲ್ಲಾ ನನಸು ಮಾಡಬೇಕು. ಅಧಿಕಾರ ವಿಕೇಂದ್ರೀಕರಣಕ್ಕಾಗಿ ಪಂಚಾಯತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿ–ನೌಕರರು ಗ್ರಾಮವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಬೇಸಿಗೆ ಸಮೀಪಿಸಿರುವುದರಿಂದ ತಮ್ಮ ವ್ಯಾಪ್ತಿಯ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕೆಂದು ಸಲಹೆ ನೀಡಿದರು.
ಗ್ರಾಮದ ಆರೋಗ್ಯ, ಮಕ್ಕಳ ಶಿಕ್ಷಣ, ಕ್ರೀಡೆ, ಸ್ವಚ್ಛತೆಯತ್ತ ಗಮನಹರಿಸಬೇಕು. ಸ್ವಾಸ್ಥ ಗ್ರಾಮವನ್ನಾಗಿ ರೂಪಿಸಬೇಕು. ಸಕಾಲದಲ್ಲಿ ತೆರಿಗೆ ಸಂಗ್ರಹಿಸಿ ಗ್ರಾಮ ಪಂಚಾಯತಿಯನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಕುಡಿಯುವ ನೀರು, ಚರಂಡಿ, ರಸ್ತೆ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪಂಚಸೂತ್ರಗಳಡಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪಂಚಾಯತಿ ಮಟ್ಟದಲ್ಲಿ 90 ಕೋಟಿ ರೂ.ಗಳನ್ನು ವೆಚ್ಚದಲ್ಲಿ 9ಲಕ್ಷ ಮೀಟರ್ ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 63 ಕೋಟಿ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಗ್ರಾಮ ಪಂಚಾಯತಿಗಳಲ್ಲಿ 2017ರ ಅಕ್ಟೋಬರ್ 31ರ ಪೂರ್ವದಲ್ಲಿ ಸ್ವಚ್ಛತಾಗಾರರು, ನೀರು ವಿತರಕರು, ಜವಾನರು, ಕರ ವಸೂಲಿಗಾರರು, ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 766 ಸಿಬ್ಬಂದಿಗಳಿಗೆ ಇಂದು ಅನುಮೋದನೆ ಪತ್ರ ನೀಡಲಾಗುತ್ತಿದೆ ಎಂದು ತಿಳಿಸಿದರಲ್ಲದೆ, ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ 16 ಕ್ರೀಡೆಗಳಿಗೆ ಸಂಬಂಧಿಸಿದಂತೆ 30 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಕ್ರೀಡಾ ಪರಿಕರಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಥ್ಲೆಟಿಕ್, ವಾಲಿಬಾಲ್, ಪುಟ್ ಬಾಲ್, ಕುಸ್ತಿ, ಟೈಪೊಂಡು, ಶೂಟಿಂಗ್, ಕಬಡ್ಡಿ, ಖೋಖೋ ಸೇರಿದಂತೆ ಕ್ರೀಡಾ ಪಟುಗಳಿಗೆ ವಿವಿಧ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿ, ಕ್ರೀಡಾ ಪೋಷಕರು ಹಾಗೂ ತರಬೇತುದಾರರನ್ನು ಸನ್ಮಾನಿಸಲಾಯಿತು.
ನರೇಗಾ ಯೋಜನೆಯಡಿ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮಾಡಿರುವ ಉತ್ತಮ ತಾಲ್ಲೂಕು, ಅನುಷ್ಠಾನ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಟಿಕೃಷ್ಣಪ್ಪ, ಅಥ್ಲೆಟಿಕ್ಸ್ ಮುಖ್ಯಸ್ಥ ಪ್ರಭಾಕರ್, ಕಬಡ್ಡಿ ಅಸೋಸಿಯೇಷನ್ಸ್ನ ಕೃಷ್ಣೇಗೌಡ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ಧಿ), ಉಪ ಕಾರ್ಯದರ್ಶಿ (ಆಡಳಿತ), ಯೋಜನಾ ನಿರ್ದೇಶಕರು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯತಿ ಅಧ್ಯಕ್ಷ/ಉಪಾಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4