ಯಾದಗಿರಿ: ಏಳು ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ಮತ್ತು ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಯಾದಗಿರಿಯ ಸ್ವಯಂಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ಎಂಬಾತನ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಮಲ್ಲಿಕಾರ್ಜುನ ಮುತ್ಯಾ ಬಾಲಕಿಯೊಬ್ಬಳನ್ನು ಹಿಡಿದುಕೊಂಡು, ಆಕೆಯ ಪೋಷಕರ ಸಮ್ಮುಖದಲ್ಲೇ ಅನುಚಿತವಾಗಿ ಸ್ಪರ್ಶಿಸಿ, ಚುಂಬಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು, ತನಿಖೆ ನಡೆಸುವಂತೆ ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಪೊಲೀಸರು ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿಯ ಪೋಷಕರ ಹೇಳಿಕೆಗಳನ್ನು ಪಡೆಯಲಾಗಿದ್ದು, 26 ವರ್ಷದ ಆರೋಪಿ ಮಲ್ಲಿಕಾರ್ಜುನ ಮುತ್ಯಾಗೆ ನೋಟಿಸ್ ಜಾರಿ ಮಾಡಲಾಗಿದೆ.
ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್:
ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನದ ಭೀತಿಯಿಂದ ಮಲ್ಲಿಕಾರ್ಜುನ ಮುತ್ಯಾ ಪರಾರಿಯಾಗಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಅಜ್ಞಾತ ಸ್ಥಳದಿಂದ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಆತ, “ನಾನು ಸ್ಥಳೀಯವಾಗಿಯೇ ಇದ್ದೇನೆ. ಮಠದಲ್ಲಿ ನಡೆಯಲಿರುವ ಸಾಮೂಹಿಕ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಬಂದಿದ್ದೇನೆ. ಭಕ್ತರು ಆತಂಕಪಡುವ ಅಗತ್ಯವಿಲ್ಲ. ಪೊಲೀಸರು ಯಾವಾಗ ಕರೆದರೂ ವಿಚಾರಣೆಗೆ ಹಾಜರಾಗಲು ಸಿದ್ಧನಿದ್ದೇನೆ” ಎಂದು ತಿಳಿಸಿದ್ದಾನೆ. ಸದ್ಯ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


